ಮುಂಬಯಿ: ಬಿಲ್ಲವರ ಅಸೋಸಿ ಯೇಶನ್ ಇದರ ಮಾಜಿ ಅಧ್ಯಕ್ಷ, ಭಾರತ್ ಬ್ಯಾಂಕ್‌ನ ಮಾಜಿ ಕಾರ್ಯಾಧ್ಯಕ್ಷ ದಿ| ಜಯ ಸಿ. ಸುವರ್ಣ ಅವರ ಮಾತೋಶ್ರೀ ದಿ| ಅಚ್ಚು ಚಂದು ಸುವರ್ಣ ಅವರ ಸ್ಮರಣಾರ್ಥವಾಗಿ ಸ್ಥಾಪಿಸಿದ ಯಕ್ಷಗಾನ ಕಲಾ ಪ್ರಶಸ್ತಿಯ ಶಾಶ್ವತ ನಿಧಿಯಿಂದ ಬಿಲ್ಲವರ ಅಸೋಸಿಯೇಶನ್ ಮುಂಬಯಿಯ ಆಶ್ರಯದಲ್ಲಿ ಕೊಡಮಾಡುವ ಯಕ್ಷಗಾನ ಕಲಾ ಪ್ರಶಸ್ತಿ -2021ಗೆ ಖ್ಯಾತ ಯಕ್ಷಗಾನ ಅರ್ಥಧಾರಿ, ಕಲಾವಿದ ಜಬ್ಟಾರ್ ಸಮೋ ಅವರು ಆಯ್ಕೆಯಾಗಿದ್ದಾರೆ.
ಈ ಪ್ರಶಸ್ತಿಯು 25,000 ರೂ. ನಗದು, ಪ್ರಶಸ್ತಿ ಫಲಕ, ಸಮ್ಮಾನ ಪತ್ರಗಳನ್ನೊಳಗೊಂಡಿದೆ. ಇತ್ತೀಚೆಗೆ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಅಧ್ಯಕ್ಷ ಹರೀಶ್ ಜಿ. ಅಮೀನ್ ಅವರ ಅಧ್ಯಕ್ಷತೆಯಲ್ಲಿ ಬಿಲ್ಲವ ಭವನದಲ್ಲಿ ಜರಗಿದ ನಿರ್ಣಾಯಕ ಸಮಿತಿಯ ಸಭೆಯಲ್ಲಿ ಈ ನಿರ್ಧಾರ ಪ್ರಕಟಿಸಲಾಯಿತು. ಕಲಾವಿದ ಜಬ್ಟಾರ್ ಸಮೋ ಅವರು ಯಕ್ಷಗಾನ ಕ್ಷೇತ್ರಕ್ಕೆ ಸಲ್ಲಿಸಿರುವ ಮೂರು ದಶಕಗಳ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ.
ಇದನ್ನೂ ಓದಿ:ಮದರಸಗಳಲ್ಲಿ ತಾಲಿಬಾನಿಗಳು ಸೃಷ್ಠಿಯಾಗುತ್ತಾರೆ, ಅಫ್ಘಾನ್ ಸ್ಥಿತಿ ನಮಗೂ ಬರಬಹುದು: ಸಿ.ಟಿ.ರವಿ
ಎಸ್. ಎಂ. ಜಬ್ಟಾರ್
ಜಬ್ಟಾರ್ ಸಮೋ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಸಂಪಾಜೆ ಯವರು. ಬಾಲ್ಯದಿಂದಲೇ ಯಕ್ಷಗಾನ ದಲ್ಲಿ ಆಕರ್ಷಿತರಾದ ಅವರು ತಮ್ಮ 6ನೇ ಇಯತ್ತೆ ಯಲ್ಲಿರುವಾಗಲೇ “ಭಕ್ತ ಪ್ರಹ್ಲಾದ’ ಪ್ರಸಂಗದಲ್ಲಿ ದನುಜ ಗುರುವಿನ ವೇಷ ಮಾಡುವುದರ ಮೂಲಕ ಯಕ್ಷಗಾನಕ್ಕೆ ಕ್ಷೇತ್ರಕ್ಕೆ ಪಾದಾರ್ಪಣೆಗೈದರು. ಅನಂತರ 18 ವರ್ಷ ಪ್ರಾಯದಿಂದೀಚೆಗೆ ಸತತವಾಗಿ ಊರು ಪರವೂರುಗಳಲ್ಲಿ ಯಥೇತ್ಛ ವೇಷಗಳನ್ನು ನಿರ್ವಹಿಸಿದರು.
1995ರಲ್ಲಿ ಕಿನ್ನಿಗೋಳಿಯ ಯಕ್ಷಲಹರಿ ಸಂಸ್ಥೆಯು ಏರ್ಪಡಿಸಿದ್ದ ತಾಳಮದ್ದಳೆ ಸ್ಪರ್ಧೆಯಲ್ಲಿ ಜಬ್ಟಾರ್ ಸಮೋ ಅವರ ತಂಡವು ಪ್ರಥಮ ಸ್ಥಾನ ಪಡೆಯಿತು. ಅಂದು “ಶೂರ್ಪನಖಾ ಮಾನಭಂಗ’ ಪ್ರಸಂಗದಲ್ಲಿ ಜಬ್ಟಾರ್ ಅವರು ಘೋರ ಶೂರ್ಪನಖೀಯ ಅರ್ಥ ಹೇಳಿ ಮಿಂಚಿದರು. ಅಂದಿನಿಂದ ಜಬ್ಟಾರ್ ಹಿಂದೆ ನೋಡಲಿಲ್ಲ. ನೂರಾರು ದೊಡ್ಡ ತಾಳಮದ್ದಳೆ ಕೂಟಗಳಲ್ಲಿ ಪಾತ್ರವಹಿಸಿ ಖ್ಯಾತಿಯನ್ನು ಗಳಿಸಿದರು. ಬಲಿ, ಶುಕ್ರಾಚಾರ್ಯ, ಕಾರ್ತವೀರ್ಯ, ವಾಲಿ, ಸುಗ್ರೀವ, ರಾವಣ, ಪ್ರಹಸ್ತ, ಅಂಗದ, ಇಂದ್ರಜಿತು, ವೀರಮಣಿ, ಅರ್ಜುನ, ಕರ್ಣ, ಶಲ್ಯ, ಭೀಮ, ಕೌರವ, ಶ್ರೀಕೃಷ್ಣ, ಭೀಷ್ಮ, ಸುಧನ್ವ, ತಾಮ್ರಧ್ವಜ ಮೊದಲಾದವು ಜಬ್ಟಾರ ಸಮೋ ಅವರ ಖ್ಯಾತಿವೆತ್ತ ಪಾತ್ರಗಳು. ಮಂಗಳೂರಿನ ಸಂದೇಶ ಪ್ರತಿಷ್ಠಾನ, ಆಳ್ವಾಸ್ ನುಡಿಸಿರಿ, ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸಹಿತ ಜಬ್ಟಾರ್ ಸಮೋ ಅನೇಕ ಸಮ್ಮಾನ, ಗೌರವಗಳನ್ನು ಪಡೆದಿದ್ದಾರೆ. ಯಕ್ಷಗಾನ ಅಕಾಡೆಮಿಯ ಸದಸ್ಯರಾಗಿಯೂ ನೇಮಕಗೊಂಡಿದ್ದಾರೆ. ಕರ್ನಾಟಕ ಸರಕಾರದ ರೇಷ್ಮೆ ಇಲಾಖೆಯಲ್ಲಿ 28 ವರ್ಷಗಳ ಸೇವೆಯ ಬಳಿಕ ಜಬ್ಟಾರ್ ಸಮೋ ನಿವೃತ್ತಿ ಪಡೆದು ಯಕ್ಷಗಾನ ಕ್ಷೇತ್ರದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಪತ್ನಿ ಹಾಗೂ ಮೂವರು ಮಕ್ಕಳನ್ನು ಹೊಂದಿರುವ ಜಬ್ಟಾರ್ ಪ್ರಸ್ತುತ ಪುತ್ತೂರಿನ ಪಡಿಲ್‌ನಲ್ಲಿ ವಾಸವಾಗಿದ್ದಾರೆ. ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಸೆ. 5ರಂದು ಬಿಲ್ಲವ ಭವನದಲ್ಲಿ ಜರಗಲಿರುವ ಗುರುನಾರಾಯಣ ಯಕ್ಷಗಾನ ಮಂಡಳಿಯ ಅಮೃತ ಮಹೋತ್ಸವ ಸಮಾರಂಭದಲ್ಲಿ ವಿವಿಧ ಗಣ್ಯರ ಉಪಸ್ಥಿತಿಯಲ್ಲಿ ನಡೆಯಲಿದೆ.