Advertisement

ಬಿಲ್ಲವರ ಅಸೋಸಿಯೇಶನ್‌ ಮಲಾಡ್‌: ಮಹಿಳೆಯರಿಂದ ಅರಸಿನ ಕುಂಕುಮ 

02:31 PM Feb 06, 2019 | |

ಮುಂಬಯಿ: ತಿಳಿವಳಿಕೆಯ ಸಹಮತದಲ್ಲಿ ಸಂಸಾರವನ್ನು ಹೊಂದಿಸಿಕೊಳ್ಳುವ ಗುಣ ಮಹಿಳೆಯರಲ್ಲಿ ಇರಬೇಕು. ಸಾಮಾಜಿಕ ವಿಘಟನೆಯ ಶಕ್ತಿಯನ್ನು ಮೀರಿ ಸಾಂಸಾರಿಕ ಬದುಕಿಗೆ ಮಹತ್ವ ನೀಡಿದಾಗ ಕೌಟುಂಬಿಕ ಜೀವನ ಸುಖಮಯವಾಗುವುದು ಎಂದು ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಇದರ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಜಯಂತಿ ವಿ. ಉಳ್ಳಾಲ್‌ ಅಭಿಪ್ರಾಯಪಟ್ಟರು.

Advertisement

ಫೆ.2ರಂದು ಬಿಲ್ಲವರ ಅಸೋಸಿಯೇಶನ್‌ ಮಲಾಡ್‌ ಸ್ಥಳೀಯ ಕಚೇರಿಯ ಹೊರ ಸಭಾಂಗಣ, ಬ್ರಿಜ್‌ವಾಸಿ ಅಪಾರ್ಟ್‌ಮೆಂಟ್‌, ದಪ್ತರಿ ರೋಡ್‌ ಮಲಾಡ್‌ ಇಲ್ಲಿ  ಸಮಿತಿಯ ಮಹಿಳೆಯರು ಆಯೋಜಿಸಿದ ಅರಸಿನ ಕುಂಕುಮ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಅವರು ಮಾತನಾಡುತ್ತಿದ್ದರು.

ಜಯ ಸಿ. ಸುವರ್ಣ ಅವರ ದೂರದೃಷ್ಟಿ, ಚಿಂತನೆಯಿಂದ ಮಹಿಳೆಯರಿಗೆ ಇಂದು ಉತ್ತಮ ವೇದಿಕೆ ದೊರೆತಿದೆ. ಅಸೋಸಿಯೇಶನ್‌ ಕೂಡ ಮಹಿಳೆಯರ ಅಭ್ಯುದಯಕ್ಕಾಗಿ ಅತೀವ ಕಾಳಜಿ ವಹಿಸಿದೆ. ಶ್ರೀ ನಾರಾಯಣ ಗುರುಗಳ ತತ್ವಾದರ್ಶಕ್ಕೆ ನಾವೆಲ್ಲ ಬದ್ಧರಾಗಿ ಸ್ಥಳೀಯ ಸಮಿತಿಯ ಕಾರ್ಯಕ್ರಮಗಳಲ್ಲಿ ನಿರಂತರವಾಗಿ ಪಾಲ್ಗೊಳ್ಳಬೇಕು ಎಂದವರು ಹೇಳಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಸಹ ನೃತ್ಯ ನಿರ್ದೇಶಕಿ ಜ್ಯೋತಿ ಎಸ್‌. ಸರ್ಕಾರ್‌ ಮಾತನಾಡಿ, ಮಹಿಳೆಯರು ಅಸಮಾನತೆಯನ್ನು ತೊರೆದು ಒಂದೇ ವೇದಿಕೆಯಲ್ಲಿ ಒಟ್ಟುಗೂಡಲು ಇದು ಒಂದು ಸುಸಂದರ್ಭ. ನೃತ್ಯರಂಗ ಕ್ಷೇತ್ರಕ್ಕೆ ಈಗ ಎಲ್ಲೆಡೆ ಅಭಿಮಾನಿಗಳ ಬೇಡಿಕೆ ಇರುವುದರಿಂದ ನೃತ್ಯದಲ್ಲಿ ಅಭಿರುಚಿ ಇರುವ ಸಮಿತಿಯ ಹೆತ್ತವರ ಮಕ್ಕಳಿಗೆ ನೃತ್ಯ ನಿರ್ದೇಶನದ ಸಹಾಯ ನೀಡುವೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸ್ಥಳೀಯ ನಗರಸೇವಕಿ ಉಪಸ್ಥಿತರಿದ್ದು, ಸ್ಥಳೀಯ ಸಮಿತಿಯ ಮಹಿಳೆಯರಿಗೆ ಯಾವುದೇ ಸಹಾಯ ನೀಡುವ ಭರವಸೆಯಿತ್ತರು.

ಮಹಿಳೆಯರನ್ನು ಉದ್ದೇಶಿಸಿ ಮಾತನಾಡಿದ ಬಿಲ್ಲವರ ಅಸೋಸಿಯೇಶನ್‌ನ ಕೇಂದ್ರ ಕಚೇರಿಯ ಉಪಾಧ್ಯಕ್ಷ ಶಂಕರ್‌ ಡಿ. ಪೂಜಾರಿ ಮಾತನಾಡಿ, ಮಹಿಳೆಯರೆಲ್ಲ ಸದಾ ಒಗ್ಗಟ್ಟಿನಿಂದ ಇದ್ದು ಸಮಿತಿಯ ಕಾರ್ಯಕ್ರಮಗಳು ಸುಲಲಿತವಾಗಿ ನಡೆಯುವಂತೆ ಸಹಕರಿಸಬೇಕು ಎಂದರು.

Advertisement

ಸಮಿತಿಯ ಕಾರ್ಯಾಧ್ಯಕ್ಷ ಸಂತೋಷ್‌ ಕೆ. ಪೂಜಾರಿ  ಅವರು ಮಾತನಾಡಿ, ಮಲಾಡ್‌ ಸಮಿತಿಗೆ ಬ್ರಹ್ಮಶ್ರೀ ನಾರಾಯಣ ಗುರುಗಳ ಆಶೀರ್ವಾದ ಸದಾ ದೊರೆಯುತ್ತಿದ್ದು, ಸಮಿತಿಯ ಸದಸ್ಯರು ಭಾಗವಹಿಸುವ ಪ್ರತಿಯೊಂದು ಕಾರ್ಯಕ್ರಮದಲ್ಲೂ ಬಹುಮಾನ ಗಳಿಸುವ ಅವಕಾಶದ ಆಶೀರ್ವಾದ ನೀಡುತ್ತಿದ್ದಾರೆ. ನಮ್ಮ ಪ್ರತಿಯೊಂದು ಕಾರ್ಯಕ್ರಮದಲ್ಲಿ ಮಹಿಳೆಯರು ಹೆಚ್ಚಿನ ಉತ್ಸುಕತೆಯಿಂದ ಸಹಕಾರ ನೀಡಿ ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಮಹಿಳೆಯರು ಪ್ರಾರ್ಥನೆ ಹಾಡಿದರು. ಕಾರ್ಯಾಧ್ಯಕ್ಷೆ ಜಯಂತಿ ವಿ. ಉಳ್ಳಾಲ್‌ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮುಖ್ಯ ಅತಿಥಿ ಜ್ಯೋತಿ ಎಸ್‌. ಸರ್ಕಾರ್‌, ಜಯಂತಿ ವಿ. ಉಳ್ಳಾಲ್‌, ಮಹಿಳಾ ವಿಭಾಗದ ಕಾರ್ಯದರ್ಶಿ ಸುಮಿತ್ರಾ ಎಸ್‌. ಬಂಗೇರ, ಜತೆ ಕಾರ್ಯದರ್ಶಿ ಪ್ರಭಾ ಎಸ್‌. ಬಂಗೇರ, ಸವಿತಾ ಡಿ. ಸಾಲ್ಯಾನ್‌, ಇಂದಿರಾ ವಿ. ಕರ್ಕೇರ ಅವರನ್ನು ಸಮಿತಿಯ ಮಹಿಳಾ ಸದಸ್ಯರು ಗೌರವಿಸಿದರು. ಸದಸ್ಯರ ಮಕ್ಕಳಿಂದ ವಿವಿಧ ಮನೋರಂಜನೆ ಕಾರ್ಯಕ್ರಮ ಜರಗಿತು. ಕಾರ್ಯಕ್ರಮದ ಕೊನೆಯಲ್ಲಿ ಮಹಿಳೆಯರೆಲ್ಲರೂ ಅರಸಿನ ಕುಂಕುಮ ಹಚ್ಚಿ, ಎಳ್ಳುಂಡೆ ಹಂಚಿ ಪರಸ್ಪರ ಪ್ರೀತಿ ಸೌಹಾರ್ದ ವಿನಿಮಯಿಸಿದರು.

ಲತಾ ವೈ. ಪೂಜಾರಿ, ಯಶೋದಾ ಪೂಜಾರಿ, ಸಂಗೀತಾ ಡಿ. ಸನಿಲ್‌ ಅತಿಥಿಗಳನ್ನು ಪರಿಚಯಿಸಿದರು. ವಿಜಯಾ ಎಸ್‌. ಪೂಜಾರಿ ಸ್ವಾಗತಿಸಿದರು. ಅನಿತಾ ಜೆ. ಅಂಚನ್‌ ಕಾರ್ಯಕ್ರಮ ನಿರೂಪಿಸಿದರು. ನಳಿನಿ ಪದ್ಮನಾಭ ಕರ್ಕೇರ ವಂದಿಸಿದರು. ಸಮಿತಿಯ ಗೌರವಾಧ್ಯಕ್ಷ ಕೆ. ಗೋಪಾಲ್‌ ಪಾಲನ್‌, ಉಪ ಕಾರ್ಯಾಧ್ಯಕ್ಷ ಕೃಷ್ಣ ಎ. ಪೂಜಾರಿ, ಶೇಖರ ಕೆ. ಪೂಜಾರಿ, ಕಾರ್ಯದರ್ಶಿ ದಿನೇಶ್‌ ಸಿ. ಸಾಲ್ಯಾನ್‌, ಕೋಶಾಧಿಕಾರಿ ಹರಿಶ್ಚಂದ್ರ ಕೆ. ಪೂಜಾರಿ, ಇತರ ಸಮಿತಿಯ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.  

 ಚಿತ್ರ-ವರದಿ: ರಮೇಶ್‌ ಉದ್ಯಾವರ್‌

Advertisement

Udayavani is now on Telegram. Click here to join our channel and stay updated with the latest news.

Next