Advertisement

ಬಿಲ್ಲವರ ಅಸೋಸಿಯೇಶನ್‌ ಗುರುನಾರಾಯಣ ರಾತ್ರಿ ಶಾಲೆಯ ವಾರ್ಷಿಕೋತ್ಸವ

12:19 PM Jan 13, 2019 | Team Udayavani |

ಮುಂಬಯಿ: ಮನುಕುಲಕ್ಕೆ  ಶಿಕ್ಷಣವೇ ಜೀವನವಾಗಿದೆ. ಆದ್ದರಿಂದ ಹಗಲು, ರಾತ್ರಿ ಶಾಲೆ ಎಂಬ ಕೀಳರಿಮೆ ಸಲ್ಲದು. ಉತ್ತಮ ಅಂಕಗಳನ್ನು ಪಡೆದು ಸುಶಿಕ್ಷಿತರಾಗಿ ಬದುಕು ಬಂಗಾರವಾಗಿಸಿಕೊಳ್ಳುವಲ್ಲಿ ಮಕ್ಕಳು ಮುಂದಾಗಬೇಕು. ಕಲಿತ ಶಾಲೆಗೂ ಸ್ವಂತಿಕೆಗೂ ಪ್ರತಿಷ್ಠೆಯನ್ನು ರೂಪಿಸಿಕೊಂಡು ಆದರ್ಶದ ದಾರಿಯಲ್ಲಿ ಮುನ್ನಡೆದು ಸುಸಂಸ್ಕೃತರಾಗಿ ಬೆಳೆದಾಗ ಮಾತ್ರ ಜೀವನ ಪರಿಪೂರ್ಣಗೊಳ್ಳುತ್ತದೆ  ಎಂದು  ಹಿರಿಯ ಹೊಟೇಲ್‌ ಉದ್ಯಮಿ, ಭಾರತ್‌ ಬ್ಯಾಂಕಿನ ನಿರ್ದೇಶಕ ದಾಮೋದರ್‌ ಸಿ. ಕುಂದರ್‌ ತಿಳಿಸಿದರು.

Advertisement

ಜ. 12ರಂದು  ಸಂಜೆ ಸಾಂತಾಕ್ರೂಜ್‌ನ ಬಿಲ್ಲವ ಭವನದ ನಾರಾಯಣ ಗುರು ಸಭಾಗೃಹದಲ್ಲಿ ನಡೆದ ಬಿಲ್ಲವರ ಅಸೋಸಿಯೇಶನ್‌ ಸಂಚಾಲಕತ್ವದ ಗುರುನಾರಾಯಣ ರಾತ್ರಿ ಪ್ರೌಢಶಾಲೆಯ 58 ನೇ ವಾರ್ಷಿಕೋತ್ಸವ ಸಂಭ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು  ಮಾತನಾಡಿ, ಮುಂದಿನ ವರ್ಷದಿಂದ ಈ ಶಾಲೆಯಲ್ಲಿ ಅತ್ಯಾಧಿಕ ಅಂಕಗಳೊಂದಿಗೆ ತೇರ್ಗಡೆಯಾಗುವ ಮೊದಲ ವಿದ್ಯಾರ್ಥಿಗೆ ರೂ.  10,000,  ದ್ವಿತೀಯ ವಿದ್ಯಾರ್ಥಿಗೆ ರೂ. 5,000  ಹಾಗೂ ತೃತೀಯ ವಿದ್ಯಾರ್ಥಿಗೆ ರೂ. 5,000 ನಗದು  ಬಹುಮಾನವನ್ನು ನನ್ನ ಪರವಾಗಿ ನೀಡುತ್ತೇನೆ. ವಿದ್ಯಾರ್ಥಿಗಳು ಗರಿಷ್ಠ ಅಂಕಗಳೊಂದಿಗೆ ಸುಸಂಸ್ಕೃತರಾಗಿಯೂ ಬೆಳೆಯಲು ಪ್ರಯತ್ನಿಸಬೇಕು ಎಂದರು.

ಬಿಲ್ಲವರ ಅಸೋಸಿಯೇಶನ್‌  ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್‌. ಪೂಜಾರಿ ಅಧ್ಯಕ್ಷತೆಯಲ್ಲಿ ಜರಗಿದ ಸಮಾರಂಭದಲ್ಲಿ ಗೌರವ ಅತಿಥಿಗಳಾಗಿದ್ದ ಭಾರತ್‌ ಬ್ಯಾಂಕಿನ ಮಾಜಿ ನಿರ್ದೇಶಕ, ಸಮಾಜ ಸೇವಕ ಎನ್‌. ಎಂ. ಸನಿಲ್‌ ಅವರು ದೀಪಪ್ರಜ್ವಲಿಸಿ ಸಮಾರಂಭಕ್ಕೆ ಚಾಲನೆ ನೀಡಿದರು. ಗೌರವ ಅತಿಥಿಗಳಾಗಿ ಗುರುನಾರಾಯಣ ರಾತ್ರಿ ಪ್ರೌಢಶಾಲಾ ಸ್ಥಾಪಕ ಶಿಕ್ಷಕ ಯು. ಕೆ. ಸುವರ್ಣ, ಅಕ್ಷಯ ಮಾಸಿಕದ ಗೌರವ ಸಂಪಾದಕ ಎಂ. ಬಿ. ಕುಕ್ಯಾನ್‌ ಉಪಸ್ಥಿತರಿದ್ದರು.

ಅಸೋಸಿಯೇಶನ್‌ನ ಉಪಾಧ್ಯಕ್ಷರುಗಳಾದ ಶಂಕರ ಡಿ. ಪೂಜಾರಿ, ಶ್ರೀನಿವಾಸ ಆರ್‌. ಕರ್ಕೇರ, ಗೌರವ ಪ್ರಧಾನ ಕೋಶಾಧಿಕಾರಿ ರಾಜೇಶ್‌ ಜೆ. ಬಂಗೇರ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ  ಜಯಂತಿ ವಿ. ಉಳ್ಳಾಲ್‌ ವೇದಿಕೆಯಲ್ಲಿದ್ದು ಅತಿಥಿಗಳನ್ನು ಒಳಗೊಂಡು ವಾರ್ಷಿಕ ವಿವಿಧ  ಸ್ಪರ್ಧೆಗಳಲ್ಲಿ ವಿಜೇತ ಮತ್ತು ಗರಿಷ್ಠ ಅಂಕಗಳೊಂದಿಗೆ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಗೌರವಿಸಿದರು. ಇದೇ ಸಂದರ್ಭದಲ್ಲಿ ಎಂ. ಬಿ. ಕುಕ್ಯಾನ್‌ ಅವರು  ತನ್ನ ಶಾಶ್ವತನಿಧಿಯ ವಾರ್ಷಿಕ ಸ್ವರ್ಣ ಪದಕವನ್ನು 2018ರ ಸಾಲಿನ ಎಸ್‌ಎಸ್‌ಸಿ ಪರೀಕ್ಷೆಯಲ್ಲಿ ಶಾಲೆಯಲ್ಲಿ ಮೊದಲ ಸ್ಥಾನ ಗಳಿಸಿದ ಶಾಲಾ ವಿದ್ಯಾರ್ಥಿನಿ ಮಾ| ಕಿಶೋರ್‌ ಪವಾರ್‌ ಅವರಿಗೆ ಪ್ರದಾನಿಸಿ ಶುಭ ಹಾರೈಸಿದರು.

ಮುಖ್ಯ ಅತಿಥಿ ಎನ್‌. ಎಂ. ಸನಿಲ್‌ ಅವರು ಮಾತನಾಡಿ, ಇದೊಂದು ಸಮಾಜ ನಿರ್ಮಾಣದ ಉತ್ತಮವಾದ ಕಾರ್ಯಕ್ರಮ. ಎಲ್ಲರನ್ನೂ ವಿದ್ಯಾವಂತರನ್ನಾಗಿಸುವ ಕೆಲಸ ಈ ಸಂಸ್ಥೆಯ  ಮಾರ್ಗದರ್ಶಕ ಜಯ ಸಿ. ಸುವರ್ಣ ಮಾಡಿದ್ದಾರೆ.  ಅವರನ್ನು ಮಕ್ಕಳು ಸದಾ ನೆನಪಿನಲ್ಲಿಡಬೇಕು. ಈ ಶಾಲೆಯನ್ನು ನಿರ್ವಹಿಸುವಲ್ಲಿ ರವೀಂದ್ರ ಅಮೀನ್‌ ಅವರ ಸೇವೆ ಅನುಪಮವಾದುದು. ಮಕ್ಕಳೇ ತಾವು ಟಿವಿ ಮತ್ತು ಮೊಬೈಲ್‌ ಇತ್ಯಾದಿಗಳಿಂದ ದೂರವಿದ್ದು ಉತ್ತಮ ಶಿಕ್ಷಣವನ್ನು ಪಡೆದು ಬಾಳು ಹಸನಾಗಿಸಿಕೊಳ್ಳಬೇಕು ಎಂದರು.

Advertisement

ಮತ್ತೋರ್ವ ಅತಿಥಿ ಯು. ಕೆ., ಸುವರ್ಣ ಅವರು ಮಾತನಾಡಿ,  ಗತದಿನಗಳನ್ನು ಮೆಲುಕು ಹಾಕಿ ಅಂದಿನ ಕಾಲಸ್ಥಿತಿಯನ್ನು ಸ್ಮರಿಸಿದರು. ಕಲಿತ ಶಾಲೆಯನ್ನು ಯಾರೂ ಎಂದೂ ಮರೆಯಬಾರದು. ಉತ್ತಮ ವಿದ್ಯಾಭ್ಯಾಸ ಪಡೆದು ಒಳ್ಳೆಯ ಪ್ರಜೆಗಳಾಗಿ ಎಂದು ವಿದ್ಯಾರ್ಥಿಗಳೆಲ್ಲರಿಗೂ ಹಾರೈಸಿದರು.

ಎಂ. ಬಿ.  ಕುಕ್ಯಾನ್‌ ಮಾತನಾಡಿ, ನಾವು ನಮ್ಮ ಬಾಲ್ಯಾವಸ್ಥೆಯನ್ನು ಮರೆಯದೆ ಪ್ರತಿಯೊಬ್ಬರನ್ನು ಸಮಾನವಾಗಿ ಕಂಡು ಮುನ್ನಡೆದಾಗ ಅದೇ ಮಾನವ ಜೀವನ ಪಾವನವಾಗುವುದು. ಹಿಂದಿನ ದಿನಗಳನ್ನು ನೆನೆದು, ಮುಂದಿನ ಬದುಕನ್ನು ಅರ್ಥಪೂರ್ಣವಾಗಿಸಬೇಕು. ನಮ್ಮಿಂದ ಇನ್ನೊಬ್ಬರಿಗೆ ಉಪಕಾರ ಆಗುವ ನಿಟ್ಟಿನಲ್ಲಿ ಸಾಮರಸ್ಯಯುತವಾಗಿ ಜೀವನ ಸಾಗಿಸಿದಾಗ ನಾವು ಪಡೆದ ಶಿಕ್ಷಣ ಸಾರ್ಥಕವಾಗುವುದು ಎಂದ‌ರು.

ವಿದ್ಯಾರ್ಥಿನಿಯರು ಪ್ರಾರ್ಥನೆಗೈದರು. ಶಾಲಾ ಉಪ ಸಮಿತಿಯ ಕಾರ್ಯಾಧ್ಯಕ್ಷ ಬನ್ನಂಜೆ ರವೀಂದ್ರ ಅಮೀನ್‌ ಸ್ವಾಗತಿಸಿದರು. ಅಸೋಸಿಯೇಶನ್‌ನ ಗೌರವ ಪ್ರಧಾನ ಕಾರ್ಯದರ್ಶಿ ಧನಂಜಯ ಎಸ್‌. ಕೋಟ್ಯಾನ್‌ ಪ್ರಾಸ್ತಾವಿಕ ನುಡಿಗಳನ್ನಾಡಿ, ಅತಿಥಿಗಳನ್ನು ಪರಿಚಯಿಸಿ ಸಭಾ ಕಾರ್ಯಕ್ರಮ ನಿರೂಪಿಸಿದರು. ಅಸೋಸಿಯೇಶನ್‌ನ ಪದಾಧಿಕಾರಿಗಳು ಅತಿಥಿಗಳನ್ನು ಗೌರವಿಸಿದರು. ಶಾಲಾ ಮುಖ್ಯೋಪಾಧ್ಯಾಯ ರಾಮಚಂದ್ರಯ್ಯ ಸಿ. ವಾರ್ಷಿಕ ವರದಿ ವಾಚಿಸಿದರು. ಅಧ್ಯಾಪಕ ಎಂ. ಐ. ಬಡಿಗೇರ ವಂದಿಸಿದರು.

ಕಾರ್ಯಕ್ರಮದಲ್ಲಿ ಶಿಕ್ಷಕ-ಶಿಕ್ಷಕಿಯರುಗಳಾದ ಮೋಹಿನಿ ಪೂಜಾರಿ, ಹೇಮಾ ಗೌಡ, ವಿಮಲಾ ಶಿವರಾಜ್‌ ಪಾಟೀಲ್‌, ನವಿತಾ ಎಸ್‌. ಸುವರ್ಣ, ಸುನೀಲ್‌ ಪಾಟೀಲ್‌ ವಿದ್ಯಾರ್ಥಿ ಪ್ರತಿನಿಧಿ  ದಿವ್ಯಾ ಡಿ. ಚವಾಣ್‌ ಸಹಕರಿಸಿದರು. 

ವಿದ್ಯಾರ್ಥಿಗಳು, ಪಾಲಕರು, ಶಿಕ್ಷಣಾಭಿಮಾನಿಗಳು, ಸಂಸ್ಥೆಯ ಉಪಸಮಿತಿಗಳ ಪದಾಧಿಕಾರಿಗಳು, ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.    ವಾರ್ಷಿಕ ದಿನಾಚರಣಾ ಅಂಗವಾಗಿ ಸುಷ್ಮಾ ಎಸ್‌. ಪೂಜಾರಿ ನಿರ್ದೇಶನದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನಗೊಂಡವು. ಶಿಕ್ಷಕ ಸಿದ್ಧರಾಮಯ್ಯ ದಶಮಣಿ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಿಸಿದರು. ಸಿದ್ಧರಾಮಯ್ಯ ದಶಮಣಿ ರಚಿಸಿ ನಿರ್ದೇಶಿಸಿದ “ಗಂಡ ಹೆಂಡತಿಯ ಜಗಳ ಗಂಧ ತೀಡಿದಂಗೆ’ ನಾಟಕವನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು. 

 ಮಕ್ಕಳು ವಿದ್ಯಾವಂತರಾಗಿ ಸಂಸ್ಕಾರಯುತವಾಗಿ ಬಾಳಿದಾಗ ದೇಶದ ಒಳ್ಳೆಯ ನಾಗರಿಕರಾಗಲು ಸಾಧ್ಯ. ಶಿಕ್ಷಣವಂತರಾಗಿ ರಾಷ್ಟ್ರದ ಸತøಜೆಗಳಾ‌ಗಬೇಕು. ಒಳ್ಳೆಯದಾಗಿ ಕಲಿತು ಈ ವರ್ಷವೂ ಸಂಸ್ಥೆಗೆ ಶೇ. 100 ಫಲಿತಾಂಶ ತರಬೇಕು. ಈ ಸಂಸ್ಥೆಗೆ ಜಯ ಸುವರ್ಣರ ಮಾರ್ಗದರ್ಶನ ದೊರೆಯುತ್ತಿರುವುದು ನಮ್ಮ ಪುಣ್ಯ. ದಾನಿಗಳ ಸಹಕಾರದಿಂದ ಮುಂದೆಯೂ ಎಲ್ಲಾ ಕಾರ್ಯಕ್ರಮಗಳು ಒಳ್ಳೆಯ ರೀತಿಯಲ್ಲಿ ನೇರವೇರಲಿ
ಚಂದ್ರಶೇಖರ ಎಸ್‌. ಪೂಜಾರಿ, ಅಧ್ಯಕ್ಷರು,  ಬಿಲ್ಲವರ ಅಸೋಸಿಯೇಶನ್‌ ಮುಂಬಯಿ

ಚಿತ್ರ-ವರದಿ: ರೋನ್ಸ್‌  ಬಂಟ್ವಾಳ್‌

Advertisement

Udayavani is now on Telegram. Click here to join our channel and stay updated with the latest news.

Next