ಡೊಂಬಿವಲಿ: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಡೊಂಬಿವಲಿ ಸ್ಥಳೀಯ ಸಮಿತಿಯ ವತಿಯಿಂದ ಗುರುಪೂರ್ಣಿಮೆ ಆಚರಣೆಯು ಜು.27 ರಂದು ಸ್ಥಳೀಯ ಕಚೇರಿಯ ಸಭಾಗೃಹದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಿತು.
ಪುರೋಹಿತರಾದ ಐತಪ್ಪ ಸುವರ್ಣ, ವಿಶ್ವನಾಥ್ ಅಮೀನ್, ಧರ್ಮರಾಜ್ ಪೂಜಾರಿ, ಚಂದ್ರಪಾಲ್ ಪೂಜಾರಿ ಹಾಗೂ ಇತರರು ಕಾರ್ಯಕರ್ತರ ಸಹಕಾರದಿಂದ ಗುರು ಮಂಟಪವನ್ನು ಅಲಂಕರಿಸಿ ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಲಾಯಿತು.
ಪ್ರಾತಃಕಾಲದಿಂದ ಕಲಶ ಪ್ರತಿಷ್ಠೆಯ ನಂತರ ಗುರು ಭಕ್ತರಿಂದ ಮಧ್ಯಾಹ್ನ 1 ರ ತನಕ ವಿಶೇಷ ಭಜನಾ ಕಾರ್ಯಕ್ರಮವು ಜರಗಿತು. ನಂತರ ಡೊಂಬಿವಲಿ ಸ್ಥಳೀಯ ಕಚೇರಿಯ ಮಾಜಿ ಕಾರ್ಯಾಧ್ಯಕ್ಷ ರವಿ ಎಸ್. ಸನೀಲ್ ಅವರು ಎಲ್ಲರನ್ನೂ ಸ್ವಾಗತಿಸಿದರು. ಆನಂತರ ಗುರುದೇವರಿಗೆ ಮಹಾ ಮಂಗಳಾರತಿ ಜರಗಿತು. ಹಿರಿಯರಾದ ಬಿ. ವೈ. ಸುವರ್ಣ ಅವರು ಗುರುಪೂರ್ಣಿಮೆಯ ಮಹತ್ವವನ್ನು ವಿವರಿಸಿ, ಭಕ್ತರ ಪರವಾಗಿ ಪ್ರಾರ್ಥನೆ ಸಲ್ಲಿಸಿದರು. ಡೊಂಬಿವಲಿ ಪರಿಸರದ ಹಲವು ಸಂಘ ಸಂಸ್ಥೆ ಗಳ ಪದಾಧಿಕಾರಿಗಳು, ಪ್ರತಿನಿಧಿಗಳು, ಭಾರತ್ ಬ್ಯಾಂಕಿನ ಅಧಿಕಾರಿಗಳು, ಹಿತೈಷಿಗಳು ಉಪಸ್ಥಿತರಿದ್ದು ತೀರ್ಥಪ್ರಸಾದ ಸ್ವೀಕರಿಸಿದರು.
ಉದ್ಯಮಿ ಟಿ. ಕೆ. ಕೋಟ್ಯಾನ್ ದಂಪತಿಯ ವತಿಯಿಂದ ಅನ್ನದಾನ ನಡೆಯಿತು. ಕುಶಾ ರವಿ ಸನಿಲ್, ದಂಪತಿ ಮತ್ತು ಪರಿವಾರ, ಗಿರಿಜಾ ಪಾಲನ್ ಮತ್ತು ಪರಿವಾರ, ಹೇಮಾ ದೇವರಾಜ್ ಪೂಜಾರಿ ಮತ್ತು ಪರಿವಾರ, ವಿಮಲಾ ಕೆ. ಅಂಚನ್ ಮತ್ತು ಪರಿವಾರ ಹಾಗೂ ಅನೇಕ ಭಕ್ತರು ದೇಣಿಗೆ, ಎಣ್ಣೆ, ಹೂ, ಹಣ್ಣು ಕಾಯಿ ಇತ್ಯಾದಿ ನೀಡಿ ಸಹಕರಿಸಿದರು.
ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ದೇವರಾಜ್ ಪೂಜಾರಿ, ಮಾಜಿ ಕಾರ್ಯಾಧ್ಯಕ್ಷ ರವಿ ಎಸ್. ಸನೀಲ್ ಉಪ ಕಾರ್ಯಾಧ್ಯಕ್ಷರುಗಳಾದ ಚಂದ್ರಹಾಸ ಪಾಲನ್ ಮತ್ತು ಸಿ. ಎನ್. ಕರ್ಕೇರ, ಗೌರವ ಕಾರ್ಯದರ್ಶಿ ಪುರಂದರ ಪೂಜಾರಿ, ಗೌರವ ಕೋಶಾಧಿಕಾರಿ ಲಲಿಶ್ಚಂದ್ರ ಸುವರ್ಣ, ಮಂಜಪ್ಪ ಪೂಜಾರಿ, ಸೋಮನಾಥ್ ಪೂಜಾರಿ ಹಾಗೂ ಸಮಿತಿ ಸದಸ್ಯರು, ಜಗನ್ನಾಥ್ ಸನಿಲ್ ಮತ್ತು ಸಕ್ರಿಯ ಕಾರ್ಯಕರ್ತರು, ಯುವ ಶಕ್ತಿ ಸದಸ್ಯರು ಹಾಗೂ ಮಹಿಳಾ ವಿಭಾಗದವರು ಶ್ರಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಗುರು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ತೀರ್ಥ ಪ್ರಸಾದ ಸ್ವೀಕರಿಸಿದರು.