ಮಂಗಳೂರು: ಮಹತ್ವದ ಬೆಳವಣಿಗೆಯೊಂದರಲ್ಲಿ, ಬಿಲ್ಲವ ಮುಖಂಡ ಹರಿಕೃಷ್ಣ ಬಂಟ್ವಾಳ ಅವರು ಅಧಿಕೃತವಾಗಿ ಬಿಜೆಪಿಗೆ ಸೇರುವುದಾಗಿ ಘೋಷಿಸಿದ್ದಾರೆ. ನ. 10ರಂದು ನಡೆಯಲಿರುವ ಪಕ್ಷದ ಪರಿವರ್ತನಾ ರ್ಯಾಲಿಯಲ್ಲಿ ಬಿಜೆಪಿ ಸೇರುವುದಾಗಿ ಸ್ವತಃ ಹರಿಕೃಷ್ಣ ಅವರೇ ಹೇಳಿದ್ದಾರೆ.
ರವಿವಾರ ಸಂಜೆ ಮಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಿಲ್ಲವ ಸಂಘಟನೆಗಳ ಮುಖಂಡರೊಡನೆ ನಡೆಸಿದ ಸಮಾಲೋಚನ ಸಭೆಯಲ್ಲಿ ಈ ನಿರ್ಧಾರ ಪ್ರಕಟಿಸಿದ್ದಾರೆ. “ವರ್ಷಗಳ ಹಿಂದೆ ಅತ್ಯಧಿಕ ಬಿಲ್ಲವ ಸಮುದಾಯದ ಶಾಸಕರು, ಸಚಿವರು ಜಿಲ್ಲೆಯಲ್ಲಿದ್ದರು. ಕ್ರಮೇಣ ರಾಜಕೀಯ ಷಡ್ಯಂತ್ರಕ್ಕೆ ಪೂಜಾರಿ ಸೇರಿದಂತೆ ಬಿಲ್ಲವ ಸಮುದಾಯದವರು ಬಲಿಪಶುಗಳಾದರು. ದ.ಕ. ಜಿಲ್ಲೆಯಲ್ಲಿ ಬಿಲ್ಲವ ಸಮುದಾಯದ ಮತದಾರರು ಅಧಿಕ ಸಂಖ್ಯೆಯಲ್ಲಿದ್ದಾರೆ. ಆದರೆ ಒಂದು ಎಂಎಲ್‌ಸಿ ಸೀಟಿಗೂ ಬೇಡುವ ಪರಿಸ್ಥಿತಿ ಬಂದಿದೆ. ಈ ನಿಟ್ಟಿನಲ್ಲಿ ಸಮುದಾಯದ ಜನರು ಒಗ್ಗಟ್ಟಾಗಬೇಕಾಗಿದೆ’ ಎಂದು ಹೇಳಿದರು.
“ಬಿಲ್ಲವ ಸಮುದಾಯವಾಗಲಿ, ಕಾಂಗ್ರೆಸ್ ಪಕ್ಷವಾಗಲಿ ಯಾವುದೇ ಕಾರಣಕ್ಕೂ ಇನ್ನೊಂದು ಜನಾರ್ದನ ಪೂಜಾರಿ ಅವರನ್ನು ಸೃಷ್ಟಿಸಲು ಸಾಧ್ಯವಿಲ್ಲ. ಬಹುತೇಕ ಮಂದಿ ನಾಯಕರನ್ನು ರಾಜಕೀಯಕ್ಕೆ ತಂದ ಪೂಜಾರಿ ಅವರು ಇಂದು ಯಾರಿಗೂ ಬೇಡವಾಗಿದ್ದಾರೆ. ಇಂದು ಬಿಲ್ಲವ ಸಮುದಾಯವನ್ನೇ ರಾಜಕೀಯದಿಂದ ದೂರ ಇಡುವ ಪ್ರಯತ್ನವಾಗುತ್ತಿದೆ. ಇದಕ್ಕೆ ಉತ್ತರ ನೀಡುವ ನಿಟ್ಟಿನಲ್ಲಿ ಬಿಜೆಪಿಗೆ ತೆರಳುತ್ತಿದ್ದೇನೆ’ ಎಂದು ತಿಳಿಸಿದರು.
“1972ರಲ್ಲಿ ಆರ್‌ಎಸ್‌ಎಸ್ ಮೂಲಕ ಸಾರ್ವಜನಿಕ ಕ್ಷೇತ್ರಕ್ಕೆ ಕಾಲಿರಿಸಿದ ನಾನು 1975ರಲ್ಲಿ ಜನಸಂಘದ ಬಂಟ್ವಾಳ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಗೊಂಡೆ. ತುರ್ತುಪರಿಸ್ಥಿತಿ ವೇಳೆ ಜೈಲುವಾಸ ಅನುಭವಿಸಿದ್ದೆ. 1982ರಲ್ಲಿ ಬಿಜೆಪಿ ತೊರೆದಿದ್ದು ಈಗ ಮತ್ತೆ ನಾನು ಬಿಜೆಪಿಗೆ ಸೇರುತ್ತಿದ್ದೇನೆ’ ಎಂದರು. ಬಿಲ್ಲವ ಮುಖಂಡರಾದ ಮೋಹನ್ ಅಮೀನ್ ವಾಮಂಜೂರು, ಲೋಕನಾಥ್ ಕೆ., ಗಂಗಾಧರ್ ಪೂಜಾರಿ ಮುಂಬಯಿ, ರೋಹಿನಾಥ್ ಪಾದೆ ಉಪಸ್ಥಿತರಿದ್ದರು.
ನಳಿನ್, ಪಾಲೆಮಾರ್ ಭೇಟಿ!
ಸಭೆ ಆರಂಭಕ್ಕೂ ಮುನ್ನ ಸಂಸದ ನಳಿನ್ ಕುಮಾರ್ ಕಟೀಲು ಹಾಗೂ ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಅವರು ಹೊಟೇಲ್‌ಗೆ ಭೇಟಿ ನೀಡಿರುವುದು ವಿಶೇಷ. ಆದರೆ ಅವರಿಬ್ಬರು ಕೂಡ ಸಭೆಯಲ್ಲಿ ಪಾಲ್ಗೊಂಡಿರಲಿಲ್ಲ. ಬದಲಿಗೆ, ಹರಿಕೃಷ್ಣ ಬಂಟ್ವಾಳ ಹಾಗೂ ಬಿಲ್ಲವ ಮುಖಂಡರೊಂದಿಗೆ ಅನೌಪಚಾರಿಕವಾಗಿ ಮಾತನಾಡಿ ಅಲ್ಲಿಂದ ತೆರಳಿದರು.