ಮುಂಬಯಿ: ಪ್ರಸ್ತುತ ಸರಕಾರಿ ಮತ್ತು ಖಾಸಗಿ ವಲಯದಲ್ಲಿ ಉದ್ಯೋಗಾ ವಕಾಶಗಳು ವಿಫುಲವಾಗಿದ್ದು ರಾಷ್ಟ್ರದ ಹಣಕಾಸು ವ್ಯವಸ್ಥೆಗೆ ಇದು ಪೂರಕವಾಗಿದೆ. ಜಾಗತಿಕವಾಗಿ ಗುರುತಿಸಿಕೊಂಡ ಭಾರತ ಆರ್ಥಿಕ ಮತ್ತು ಇತರ ಸವಲತ್ತುಗಳನ್ನು ನೀಡಿ ಉದ್ಯಮಿಗಳನ್ನು ಪ್ರೋತ್ಸಾಹಿಸು ತ್ತಿರುವುದು ಸ್ವಾಗತಾರ್ಹ. ಪ್ರಸ್ತುತ ದಿನಗಳಲ್ಲಿ ಮೂಲ ಬಂಡವಾಳ ಇಲ್ಲದೇ ವ್ಯವಹಾರ ನಡೆಸುವುದೂ ಸರಳವಾಗಿದ್ದು, ಆಧುನಿಕ ತಾಂತ್ರಿಕತೆ ಯಿಂದಲೂ ಸೇವಾ ಸವಲತ್ತುಗಳು ಸುಲಭವಾಗಿ ಲಭ್ಯವಾಗುತ್ತಿವೆ. ರಾಷ್ಟ್ರದ ಶೇ. 70ರಷ್ಟು ಜನತೆ ಸಣ್ಣ ಮತ್ತು ಮಧ್ಯಮ ವರ್ಗದ ಉದ್ಯಮಗಳನ್ನೇ ಹೊಂದಿ ಜೀವನ ಸಾಗಿಸುತ್ತಿದ್ದಾರೆ. ಇದು ರಾಷ್ಟ್ರದ ಆರ್ಥಿಕ ಉನ್ನತಿಗೂ ಮೂಲ ಕಾರಣವಾಗಿದೆ. ಆದ್ದರಿಂದ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಂದಲೇ ರಾಷ್ಟ್ರ ಸದೃಢವಾಗಿದೆ. ಒಟ್ಟಾರೆ ರಾಷ್ಟ್ರದ ಸರ್ವೋನ್ನತಿಗೆ ಸಣ್ಣ ಕೈಗಾರಿಕೆಗಳು ಪೂರಕವಾಗಿದ್ದು ಇದನ್ನು ಉನ್ನತಿಯತ್ತ ಸಾಗಿಸಲು ಯುವ ಜನಾಂಗಕ್ಕೆ ಸೂಕ್ತ ಪ್ರೋತ್ಸಾಹದ ಅಗತ್ಯವಿದೆ ಎಂದು ಎಂ.ವಿ. ಕಿಣಿ ಕಂಪೆನಿ ಅಡ್ವೊಕೇಟ್ಸ್ ಆ್ಯಂಡ್ ಸಾಲಿಸಿಟರ್ಸ್ ಸಂಸ್ಥೆಯ ಮುಖ್ಯಸ್ಥ, ಹಿರಿಯ ನ್ಯಾಯವಾದಿ ಎಂ. ವಿ. ಕಿಣಿ ಅವರು ತಿಳಿಸಿದರು.
ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ತಿಮ್ಮಪ್ಪ ಭಂಡಾರಿ ಸಭಾಗೃಹದಲ್ಲಿ ಮಾ. 9ರಂದು ಬಿಲ್ಲವ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ವತಿಯಿಂದ ಎಚ್‌ಡಿಎಫ್‌ಸಿ ಬ್ಯಾಂಕ್ ಸಹಯೋಗದಲ್ಲಿ ಬಿಸಿಸಿಐ ಅಧ್ಯಕ್ಷ ಎನ್. ಟಿ. ಪೂಜಾರಿ ಘನಾಧ್ಯಕ್ಷತೆಯಲ್ಲಿ ದಿನಪೂರ್ತಿಯಾಗಿ ಆಯೋಜಿಸಿದ್ದ ಮೈಕ್ರೋ ಸ್ಮಾಲ್ ಆ್ಯಂಡ್ ಮೀಡಿಯಂ ಎಂಟರ್‌ಪ್ರೈಸಸ್ ಕಾಂಕ್ಲೇವ್ ವಿಚಾರಿತ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಿಸಿಸಿಐ ಸಂಸ್ಥೆಯ ಇಂತಹ ಕಾರ್ಯಗಾರಗಳ ಮೂಲಕ ಸಮಾಜದ ಯುವಕ ರನ್ನು ಪ್ರೋತ್ಸಾಹಿಸುತ್ತಿರುವುದು ಅಭಿನಂದನೀಯ. ಇಂತಹ ಕಾರ್ಯಕ್ರಮಗಳ ಸದುಪಯೋಗವನ್ನು ಯುವ ಉದ್ಯಮಿಗಳು ಪಡೆದು ಕೊಳ್ಳಬೇಕು ಎಂದರು.
ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಹಿರಿಯ ಉದ್ಯಮಿ ಭಾರತ್ ಬ್ಯಾಂಕಿನ ನಿರ್ದೇಶಕ ಎಲ್. ವಿ. ಅಮೀನ್, ಅತಿಥಿ-ಅಭ್ಯಾಗತರುಗಳಾಗಿ ಡಿಎಕ್ಸ್‌ಸಿ
ಟೆಕ್ನಾಲಜಿ ಸಂಸ್ಥೆಯ ಆಡಳಿತ ನಿರ್ದೇಶಕ ಡಾ| ಶ್ರೀಕಾಂತ್ ಕೆ. ಅರಿಮನಿಂತ್ತಾಯ, ಸೆಂಟ್ರಲ್ ಬ್ಯಾಂಕ್ ಆಫ್ ಒಮಾನ್ ಇದರ ಉನ್ನತಾಧಿಕಾರಿ ಡಾ| ಕೆ. ರಾಜೇಶ್ ನಾಯಕ್, ಮಂಗಳೂರಿನ ಲೆಕ್ಕ ಪರಿಶೋಧಕ ಸಿಎ ಎಸ್. ಎಸ್. ನಾಯಕ್, ಎಚ್‌ಡಿಎಫ್‌ಸಿ ಬ್ಯಾಂಕಿನ ಉನ್ನತಾಧಿಕಾರಿ ಆದಿಲೆ ಸುಮರಿವಾಲಾ ಅವರು ಉಪಸ್ಥಿತರಿದ್ದರು.
ಡಾ| ಶ್ರೀಕಾಂತ್ ಮಾತನಾಡಿ, ವ್ಯವಹಾರ ಜ್ಞಾನವುಳ್ಳವರಿಂದ ಉದ್ಯಮ ಶೀಲತೆ ಸಾಧ್ಯವಿದ್ದು, ಆಧುನಿಕ ಉದ್ಯಮಕ್ಕೆ ಸೂಕ್ಷ್ಮತೆ ಮತ್ತು ಚುರುಕುತನ ಮತ್ತು ಅರಿವಿನ ಕೀಲಿಕೈ ಅತ್ಯವಶ್ಯವಾಗಿದೆ. ಸುಶಿಕ್ಷಿತ ಜನತೆ ಸ್ವ ಉದ್ಯಮಿಗಳಾಗುವುದನ್ನೇ ಬಯಸಬೇಕು. ಆಗ ಭವಿಷ್ಯತ್ತಿನ ರಚನೆಯ ಬಗ್ಗೆ ಯೋಚನೆ ಬರುತ್ತದೆ. ಯುವಕರಲ್ಲಿ ಚುರುಕುತನದ ಉದ್ಯೋಗ ವ್ಯವಸ್ಥೆ ಮತ್ತು ಆಧುನಿಕ ಬದಲಾವಣೆಗಳ ಉದ್ಯಮಗಳ ಬಗ್ಗೆ ಅರಿವು ಮೂಡಿಸಬೇಕು. ಇವೆಲ್ಲವೂ ಇಂತಹ ಮಾಹಿತಿ ಕಾರ್ಯಾಗಾರಗಳಿಂದ ಸಾಧ್ಯ ಎಂದು ನುಡಿದರು.
ಪಿಡಬ್ಲ್ಯುಸಿ ಇಂಡಿಯಾ ಸಂಸ್ಥೆಯ ಅಮಿತ್ ಖನ್ನಾ, ವರ್ಲ್ಡ್ವೈಡ್ ಬಿಸ್ನೆಸ್ ಹೌಸ್ ಒಮಾನ್ ಇದರ ಆಡಳಿತ ನಿರ್ದೇಶಕ ಡಾ| ಸಿ. ಕೆ. ಅಂಚನ್, ಜಸ್ಟೀಸ್ ಕೆ. ಎಸ್. ಹೆಗ್ಡೆ ಶೈಕ್ಷಣಿಕ ಸಂಸ್ಥೆಯ ಮುಖ್ಯಸ್ಥ ಡಾ| ಎ.ಪಿ. ಆಚಾರ್, ಡಿಜಿಟಲ್ ಟಾಟಾ ಕ್ಯಾಪಿಟಲ್‌ನ ಉಪಾಧ್ಯಕ್ಷ ಕೌಶಿಕ್ ಚಕ್ರಬೊರ್ತಿ ಸಂಪನ್ಮೂಲ ವ್ಯಕ್ತಿಗಳಾಗಿ ಉಪಸ್ಥಿತರಿದ್ದು ತಮ್ಮ ತಮ್ಮ ಕ್ಷೇತ್ರಗಳ ಬಗ್ಗೆ ಅರಿವು ಮೂಡಿಸಿದರು. ಮಧ್ಯಾಂತರದಲ್ಲಿ ಎನ್‌ಎಸ್‌ಐಸಿ ಮತ್ತು ಎಂಎಸ್‌ಎಂಇ ವಿಭಾಗದಿಂದ ಉದ್ಯಮ ಸಂಬಂಧಿತ ಸಂರಕ್ಷಣಾ ಅಭಿವೃದ್ಧಿ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಅಧ್ಯಕ್ಷ ಮತ್ತು ಭಾರತ್ ಬ್ಯಾಂಕಿನ ಕಾರ್ಯಾಧ್ಯಕ್ಷ ಜಯ ಸಿ. ಸುವರ್ಣ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಮಾಜಿ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್, ಯಶೋದಾ ಎನ್. ಟಿ. ಪೂಜಾರಿ, ಪೂಜಾ ಪುರುಷೋತ್ತಮ್, ಬಿಸಿಸಿಐಯ ಉಪ ಕಾರ್ಯಾಧ್ಯಕ್ಷ ಡಿ. ಬಿ. ಅಮೀನ್, ಮಹೇಂದ್ರ ಸೂರು ಕರ್ಕೇರ, ನಿರ್ದೇಶಕರಾದ ಚಂದಯ ಬಿ. ಕರ್ಕೇರ, ಹರೀಶ್ ಜಿ. ಅಮಿನ್, ಪುರುಷೋತ್ತಮ ಎಸ್. ಕೋಟ್ಯಾನ್, ಅಶ್ಮಿತ್ ಬಿ. ಕುಳಾಯಿ, ಗಂಗಾಧರ್ ಎನ್. ಅಮೀನ್ ಕರ್ನಿರೆ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಕು| ನಿಖೀತಾ ಎನ್. ಟಿ. ಪೂಜಾರಿ ಮತ್ತು ಕು| ಅಂಕಿತಾ ಎನ್. ಟಿ. ಪೂಜಾರಿ ಪ್ರಾರ್ಥನೆಗೈದರು. ಹರೀಶ್ ಜಿ. ಅಮೀನ್ ಅವರು ಕಾರ್ಯಾಗಾರದ ಮಾಹಿತಿ ನೀಡಿದರು. ಕು| ದೀಪಾ ರೈ ಕಾರ್ಯಕ್ರಮ ನಿರೂಪಿಸಿದರು. ಬಿಸಿಸಿಐ ಕಾರ್ಯದರ್ಶಿ ನ್ಯಾಯವಾದಿ ಆನಂದ್ ಎಂ. ಪೂಜಾರಿ ಸ್ವಾಗತಿಸಿ ಪ್ರಸ್ತಾವನೆಗೈದು ವಂದಿಸಿದರು. ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರು, ಉದ್ಯಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಸದ್ಯ ಉದ್ಯಮಗಳು ಯುವ ಜನತೆಗೆ ಸನ್ನಿತವಾಗಿದ್ದು, ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ಯುವ ಜನತೆಯಲ್ಲಿ ಆತ್ಮಸ್ಥೈರ್ಯ ತುಂಬಿ ಸೂಕ್ತ ಮಾರ್ಗದರ್ಶನ ನೀಡಿದರೆ ಅವರನ್ನು ಉದ್ಯಮಶೀಲರಾಗಲು ಸಾಧ್ಯ. ವಿದ್ಯಾವಂತರಿಗೆ ಸರಕಾರಿ, ಹಣಕಾಸು ವ್ಯವಸ್ಥೆಯಂತಹ ಯೋಗದಾನದ ಜೊತೆ ಉದ್ಯಮದತ್ತ ಆಕರ್ಷಿಸುವ ಕಾಯಕವನ್ನು ಬಿಸಿಸಿಐ ನಂತಹ ಸಂಸ್ಥೆಗಳು ಮಾಡಬೇಕು. ಈ ಮೂಲಕ ಭವಿಷ್ಯತ್ತಿನಲ್ಲಿ ಯುವಜನತೆ ಸಂಬಳ ಪಡೆಯುವ ಬದಲು ಸಂಬಳ ನೀಡುವಂತವರಾಗಬೇಕು.
– ಎಲ್. ವಿ. ಅಮೀನ್.
ಮಾಜಿ ಅಧ್ಯಕ್ಷರು, ಬಿಲ್ಲವರ ಅಸೋಸಿಯೇಶನ್ ಮುಂಬಯಿ
ಚಿತ್ರ- ವರದಿ : ರೋನ್ಸ್ ಬಂಟ್ವಾಳ್