Advertisement

ಬಿಲ್ಲವ ಛೇಂಬರ್‌ ಆಫ್‌ ಕಾಮರ್ಸ್‌ &ಇಂಡಸ್ಟ್ರಿ ವಾರ್ಷಿಕ ಪ್ರಶಸ್ತಿ

01:59 AM Mar 11, 2019 | |

ಮುಂಬಯಿ: ಮಾಹಿತಿ ಕಾರ್ಯಾಗಾರಗಳು  ಸಮಾಜದ ಮತ್ತು ರಾಷ್ಟ್ರದ ಅಭಿವೃದ್ಧಿಗೆ ಲಾಭದಾಯಕವಾಗಿದೆ. ಇದರ ಲಾಭವನ್ನು ಸಮಾಜ ಮತ್ತು ಯುವ ಪೀಳಿಗೆ ಪಡೆದಾಗ ಇದು ರಾಷ್ಟ್ರದ ಅಭಿವೃದ್ಧಿಗೂ ಅನುಕೂಲವಾಗಲಿದೆ. ಸಂಖ್ಯಾ ಬಲಾಡ್ಯತೆಯ ರಾಷ್ಟ್ರ ಅಭಿವೃದ್ಧಿಯತ್ತ ಸಾಗುತ್ತದೆ ಎಂಬುದಕ್ಕೆ ಭಾರತ ನಿದರ್ಶನವಾಗಿದೆ. ಆದ್ದರಿಂದ ಡಿಜಿಟಲೈಜೇಶನ್‌ ಆಯ್ಕೆಯಲ್ಲ ನಮ್ಮ ಆವಶ್ಯಕತೆಯಾಗಿದೆ. ಇದು ನಮ್ಮ ಜೀವನದಲ್ಲಿ ಮಾತ್ರವಲ್ಲ ನಮ್ಮ ಉದ್ಯಮ ವ್ಯವಹಾರದಲ್ಲಿ ಪರಿಣಾಮಕಾರಿಯಾಗಿದೆ. ಪ್ರತಿಯೊಂದು ಸಮಾಜದ ಅಭಿವೃದ್ಧಿಗೆ ಬಿಸಿಸಿಐ ಉತ್ತೇಜನ ನೀಡುತ್ತಿರುವುದು ಅಭಿನಂದನೀಯ. ಸದ್ಯ ನಮ್ಮ ದೇಶವು ಆರ್ಥಿಕವಾಗಿ ಜಾಗತಿಕ ಮಟ್ಟದಲ್ಲಿ ಕಂಗೊಳಿಸುತ್ತಿರುವುದು ಅಭಿಮಾನದ ಸಂಗತಿಯಾಗಿದೆ. ಮಧ್ಯಮ ಉದ್ಯಮಗಳು ರಾಷ್ಟ್ರದ ಆರ್ಥಿಕತೆಯನ್ನು ಬಲಪಡಿಸುತ್ತಿದ್ದು, ಬದಲಾಗುತ್ತಿರುವ ಯುಗದತ್ತ ಯುವ ಜನತೆ ಉದ್ಯಮಾಸಕ್ತರಾಗಬೇಕು ಎಂದು ಆದಿತ್ಯ ಬಿರ್ಲಾ ಸನ್‌ ಲೈಫ್‌ ಇನ್ಸೂರೆನ್ಸ್‌ ಕಂಪೆನಿ ಲಿಮಿಟೆಡ್‌ ಇದರ ಕಾರ್ಯನಿರ್ವಹಣಾ ಉಪಾಧ್ಯಕ್ಷ ಅಶೋಕ್‌ ಸುವರ್ಣ ನುಡಿದರು.

Advertisement

ಮಾ. 9ರಂದು ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ತಿಮ್ಮಪ್ಪ ಭಂಡಾರಿ ಸಭಾಗೃಹದಲ್ಲಿ ಬಿಲ್ಲವ ಛೇಂಬರ್‌ ಆಫ್‌ ಕಾಮರ್ಸ್‌ ಆ್ಯಂಡ್‌ ಇಂಡಸ್ಟ್ರೀಸ್‌ ಇದರ ವಾರ್ಷಿಕ ಬಿಸಿಸಿಐ-ಎಚ್‌ಡಿಎಫ್‌ಸಿ ಬ್ಯಾಂಕ್‌ ಬಿಜಿನೆಸ್‌ ಎಕ್ಸಲೆನ್ಸ್‌ ಅವಾರ್ಡ್ಸ್‌  ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿದರು.

ಬಿಸಿಸಿಐ ಅಧ್ಯಕ್ಷ ಎನ್‌.  ಟಿ. ಪೂಜಾರಿ ಅವರ ಘನಾಧ್ಯಕ್ಷತೆಯಲ್ಲಿ ಜರಗಿದ ಸಮಾರಂಭದಲ್ಲಿ ಕೃಷ್ಣ ಪ್ಯಾಲೇಸ್‌ ಸಮೂಹದ ಆಡಳಿತ ನಿರ್ದೇಶಕ  ಕೃಷ್ಣ  ವೈ. ಶೆಟ್ಟಿ, ಫೆಡರೇಶನ್‌ ಆಫ್‌ ವರ್ಲ್ಡ್ ಬಂಟ್ಸ್‌ ಅಸೋಸಿಯೇಶನ್‌ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ, ಸೆಂಟ್ರಲ್‌ ಬ್ಯಾಂಕ್‌ ಆಫ್‌ ಒಮಾನ್‌ನ ಉನ್ನತಾಧಿಕಾರಿ ಡಾ| ಕೆ. ರಾಜೇಶ್‌ ನಾಯಕ್‌, ಸಿಎ ಲೋಕೇಶ್‌ ಪುತ್ರನ್‌ ದುಬಾಯಿ,  ನ್ಯಾಯವಾದಿ ಡಾ| ಅಶೋಕ್‌ ಸಹನಿ ಅವರು ಅತಿಥಿಗಳಾಗಿ ಉಪಸ್ಥಿತರಿದ್ದರು. ಸಮಾರಂಭದಲ್ಲಿ  ಔದ್ಯೋಗಿಕ ಕ್ಷೇತ್ರದಲ್ಲಿ ಅನನ್ಯ ಸೇವೆಗೈದ ಬಿಲ್ಲವ ಸಮಾಜದ ಸಾಧಕ, ಯಶಸ್ವಿ ಉದ್ಯಮಿಗಳಾದ  ನವಿಮುಂಬಯಿ ಫೈನ್‌ ಕೆಮಿಕಲ್ಸ್‌ ಇಂಡಸ್ಟ್ರೀನ ಸ್ಥಾಪಕ ನಿರ್ದೇಶಕ ಕೆ. ಭೋಜರಾಜ್‌ ಮತ್ತು ಕೃಪಾ ಭೋಜರಾಜ್‌ ಕುಳಾಯಿ, ಬ್ಲೂಸ್ಟ್ರೀಮ್‌ ಇನ್ವರ್ಟ್‌ಮೆಂಟಲ್‌ ಟೆಕ್ನಾಲಜಿ  ದುಬೈ ಸಂಸ್ಥೆಯ ಜಿತೇಂದ್ರ ವೈ. ಸುವರ್ಣ ಮತ್ತು ಪ್ರಮೀಳಾ ಜಿತೇಂದ್ರ, ಕ್ಲಾಸ್‌ಪ್ಯಾಕ್‌ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆಯ ಆಡಳಿತ ನಿರ್ದೇಶಕ ಗಂಗಾಧರ್‌ ಕೆ. ಅಮೀನ್‌ ನಾಸಿಕ್‌, ಫಾದರ್‌ ಮುಲ್ಲರ್ ಮೆಡಿಕಲ್‌ ಕಾಲೇಜು ಆಸ್ಪತ್ರೆ ಕಂಕನಾಡಿ ಮಂಗಳೂರು ಇದರ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ, ಮೂತ್ರಶಾಸ್ತ್ರಜ್ಞ ಮತ್ತು ಕಸಿ ಮೂತ್ರಕೋಶ ಶಸ್ತ್ರಚಿಕಿತ್ಸಕ ಡಾ| ಮೋಹನ್‌ಚಂದ್ರ ಕುಮಾರ್‌ ಸುವರ್ಣ ಇವರಿಗೆ ಜೀವಮಾನ  ಸಾಧಕ ಪುರಸ್ಕಾರವಾಗಿಸಿ ಬಿಸಿಸಿಐ- ಎಚ್‌ಡಿಎಫ್‌ಸಿ ಬ್ಯಾಂಕ್‌ ಬಿಜಿನೆಸ್‌ ಎಕ್ಸಲೆನ್ಸ್‌ ಅವಾರ್ಡ್‌ನ್ನು ಪ್ರದಾನಿಸಿ ಅಭಿನಂದಿಸಲಾಯಿತು.

ನ್ಯಾಯವಾದಿ  ರೋಹಿಣಿ ಜೆ.ಸಾಲ್ಯಾನ್‌,  ಸಿ. ಆರ್‌. ಮೂಲ್ಕಿ, ಡಾ| ರಾಜೇಶ್‌ ನಾಯಕ್‌ ಓಮನ್‌, ಶಾರದಾ ಸೂರು ಕರ್ಕೇರ, ಜಯಂತಿ ವಿ. ಉಳ್ಳಾಲ್‌, ಸಿಎ ಲೊಕೇಶ್‌ ಪುತ್ರನ್‌ ದುಬೈ, ನಿತ್ಯಾನಂದ ಡಿ. ಕೋಟ್ಯಾನ್‌, ಚಂದ್ರಶೇಖರ ಪಾಲೆತ್ತಾಡಿ, ನ್ಯಾಯವಾದಿ  ಅಶೋಕ್‌ ಸಹನಿ, ಭಾಸ್ಕರ ಎಂ. ಸಾಲ್ಯಾನ್‌,  ಶ್ರೀನಿವಾಸ ಆರ್‌. ಕರ್ಕೇರ, ಲಕ್ಷ್ಮಣ್‌ ಅಮೀನ್‌, ಡಾ| ಎ. ಪಿ. ಆಚಾರ್‌ ಅತಿಥಿಗಳಾಗಿ ಉಪಸ್ಥಿತರಿದ್ದರು. ಪ್ರೇಮಾ ಕೋಟ್ಯಾನ್‌ ಬಾಂದ್ರಾ, ಡಾ| ಸಿ. ಕೆ. ಅಂಚನ್‌ ಒಮನ್‌, ಗುಣಪಾಲ ಶೆಟ್ಟಿ ಸಾಯಿ ಪ್ಯಾಲೇಸ್‌ ಹೊಟೇಲ್ಸ್‌, ಸಿದ್ಧು ರಾಮ ಪುತ್ರನ್‌, ಅಶೋಕ್‌ ಕೋಟ್ಯಾನ್‌, ಗೋವಿಂದ ಪೂಜಾರಿ ಬಿಜೂರು, ಸುನೀಲ್‌ ಕುಮಾರ್‌ ಕುಂದಾಪುರ, ಸನತ್‌ ಬಂಗೇರ ನವದೆಹಲಿ, ಸತೀಶ್‌ ಸಾಲ್ಯಾನ್‌, ದಾಮೋದರ್‌ ಸಿ. ಕುಂದರ್‌, ಗಣೇಶ್‌ ಪೂಜಾರಿ, ಅನಿಸ್‌ ಇಸ್ಮಾಯಿಲ್‌, ಜಿತೇಶ್‌ ಕೋಟ್ಯಾನ್‌ ಗೋರೆಗಾಂಗ್‌, ಸಿಎ ಲೊಕೇಶ್‌ ಪುತ್ರನ್‌ ದುಬೈ, ಸಿಎ ಎಸ್‌. ಎಸ್‌. ನಾಯಕ್‌ ಇವರಿಗೆ ಕ್ರಮವಾಗಿ ಸಾಧಕ ಪುರಸ್ಕಾರ ಪ್ರದಾನಿಸಿ ಗೌರವಿಸಲಾಯಿತು.

ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್‌. ಪೂಜಾರಿ ಉಪಸ್ಥಿತರಿದ್ದು ಬಿಸಿಸಿಐ ಅಧ್ಯಕ್ಷ ಎನ್‌. ಟಿ. ಪೂಜಾರಿ, ಉಪ ಕಾರ್ಯಾಧ್ಯಕ್ಷರಾದ ಡಿ. ಬಿ. ಅಮೀನ್‌, ಮಹೇಂದ್ರ ಸೂರು ಕರ್ಕೇರ, ನಿರ್ದೇಶಕರುಗಳಾದ ಚಂದಯ ಬಿ. ಕರ್ಕೇರ, ಹರೀಶ್‌ ಜಿ. ಅಮೀನ್‌, ಪುರುಷೋತ್ತಮ ಎಸ್‌. ಕೋಟ್ಯಾನ್‌, ಗಂಗಾಧರ್‌ ಎನ್‌. ಅಮೀನ್‌ ಕರ್ನಿರೆ, ಅಶ್ಮಿತ್‌ ಬಿ. ಕುಳಾಯಿ  ಅವರನ್ನು ಗೌರವಿಸಿದರು.

Advertisement

ಬಿಸಿಸಿಐಯನ್ನು ಸ್ಥಾಪಿಸಿದ ಎನ್‌. ಟಿ. ಪೂಜಾರಿ ಅವರೋರ್ವ ದೂರದೃಷ್ಟಿತ್ವವುಳ್ಳವರು. ಅವರ ಚಿಂತನಾಶೀಲತೆಯ ಲಾಭವನ್ನು ನಮ್ಮ ಯುವಜನತೆ ಪಡೆಯಬೇಕು. ನಾನು ಸ್ವೀಕರಿಸಿದ ಈ ಗೌರವ ನನ್ನ ಪತ್ನಿ, ಮಕ್ಕಳು ಮತ್ತು ಸಂಸ್ಥೆಯ ಎಲ್ಲಾ ನೌಕರವೃಂದಕ್ಕೆ ಸಲ್ಲಿಸುತ್ತೇನೆ ಎಂದು ಪ್ರಶಸ್ತಿಗೆ ಉತ್ತರಿಸಿ ಕೆ. ಬೋಜರಾಜ್‌ ನುಡಿದರು.

ಪ್ರಶಸ್ತಿ ಪುರಸ್ಕೃತ ಗಂಗಾಧರ ಅಮೀನ್‌ ಮಾತನಾಡಿ,  ದೇವರ ಅನುಗ್ರಹ, ಗುರು ಹಿರಿಯರ ಆಶೀರ್ವಾದ ಸರ್ವರಿಗೂ ಅವಶ್ಯ. ಕಟೀಲು ಅಮ್ಮನಿಗೆ ನಮಿಸಿ ಮುಂಬಯಿ ಸೇರಿದ ನನಗೆ ಭ್ರಮರಾಂಬಿಕೆ ಹರಸಿ ಇಷ್ಟರಮಟ್ಟಿಗೆ ಬೆಳೆಸಿದ್ದಾಳೆ.  ನಾವೂ ಮಾಡಿದ ಪ್ರತಿಯೊಂದು ಕೆಲಸಕ್ಕೆ ದೇವರ ಕೃಪೆ ಇರಬೇಕು. ಆವಾಗಲೇ ಮಾನವ ಜನ್ಮ ಸಾರ್ಥಕವಾಗುವುದು. ನಾನು ಸ್ವಜಾತಿಯನ್ನು ಪ್ರೀತಿಸುವವ, ಆದರೆ ಬ್ರಹ್ಮಶ್ರೀ ನಾರಾಯಣ ಗುರುಗಳ ಬಗ್ಗೆ ತಿಳಿದ ಬಳಿಕ ಸ್ವಂತಿಕೆಯ ಬುದ್ಧಿವಂತಿಕೆ ಸದ್ಬಳಕೆ ಮಾಡಿ ಅಖಂಡ ಸಮಾಜದ ಉಳಿತಿಗಾಗಿ ಶ್ರಮಿಸುತ್ತಿದ್ದೇನೆ ಎಂದರು.

ಡಾ| ಮೋಹನ್‌ ಕುಮಾರ್‌ ಮಾತನಾಡಿ,  ನಾನು ಮುಂಬಯಿಗೆ ಹತ್ತಿರದವನು. ಮಾನವೀಯ ಸಂಬಂಧ, ನಿರಂತರ ಸಮಾಜ ಸೇವೆಗೆ ಸಂದ ಗೌರವ ಇದಾಗಿದೆ ಎಂದು ನುಡಿದರು.  ಜಿತೇಂದ್ರ ವೈ. ಸುವರ್ಣ ಅವರು ಮಾತನಾಡಿ,  ನಾನು ಬರೇ ಸಮಾಜದ ಋಣ ಪೂರೈಸುವ ಪ್ರಯತ್ನ ಮಾಡಿರುವೆ. ಪತ್ನಿ, ಪರಿವಾರದ ಸಹಯೋಗದಿಂದ ನಾನು ಉದ್ಯಮಶೀಲನಾಗಿರುವೆ. ಆದರ ಫಲವೇ ನಾನು ಸೇವಾಕಾಂಕ್ಷಿಯಾಗಿ ಸಮಾಜದ ಮಕ್ಕಳ ಕಾಳಜಿ ವಹಿಸುವಂತೆ ಮಾಡಿದೆ ಎಂದರು.

ದಿನಪೂರ್ತಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಉದ್ಯಮ ಕ್ಷೇತ್ರದ ಮೇಧಾವಿಗಳು ಸಂಪನ್ಮೂಲ ವ್ಯಕ್ತಿಗಳಾಗಿದ್ದು ಮಾಹಿತಿ ಕಾರ್ಯಗಾರ ನಡೆಸಿ ಆಧುನಿಕ ಮತ್ತು ಭವಿಷ್ಯತ್ತಿನ ಉದ್ಯಮದ ಅರಿವು ಮೂಡಿಸಿದರು. ಜಿ.ಮಹೇಶ್‌ ದಳ್ವಿ ಅವರು  ಹಾಸ್ಯ ಪ್ರಹಸನ ಪ್ರಸ್ತುತಪಡಿಸಿದರು. ಕು| ಶ್ವೇತಾ ಉಪಾಧ್ಯಾಯ ಕಾರ್ಯಕ್ರಮ ನಿರೂಪಿಸಿದರು. ಬಿಸಿಸಿಐ ಕಾರ್ಯದರ್ಶಿ ನ್ಯಾಯವಾದಿ ಆನಂದ್‌ ಎಂ. ಪೂಜಾರಿ ವಂದಿಸಿದರು. ಸಂಸ್ಥೆಯ ಪದಾಧಿಕಾರಿಗಳು, ನಿರ್ದೇಶಕರು ಸಮಾರಂಭದ ಯಶಸ್ಸಿಗೆ ಸಹಕರಿಸಿದರು.        

 ಚಿತ್ರ – ವರದಿ:  ರೋನ್ಸ್‌ ಬಂಟ್ವಾಳ್‌

Advertisement

Udayavani is now on Telegram. Click here to join our channel and stay updated with the latest news.

Next