Advertisement

ಕಾಶ್ಮೀರಿ ಪಂಡಿತರಿಗೆ ವಿಧಾನಸಭೆಯಲ್ಲಿ ಪ್ರಾತಿನಿಧ್ಯ; ಸದ್ಯದಲ್ಲೇ ವಿಧೇಯಕ ಮಂಡನೆ

07:01 PM Dec 13, 2022 | Team Udayavani |

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆಯಲ್ಲಿ ಕಾಶ್ಮೀರಿ ಪಂಡಿತರಿಗೆ ಪ್ರಾತಿನಿಧ್ಯ ಒದಗಿಸುವ, ಅಲ್ಲಿನ ಪಹಾರಿ, ಪದ್ರಿ, ಕೋಲಿ, ಗದಾ ಬ್ರಾಹ್ಮಣರಿಗೆ ಪರಿಶಿಷ್ಟ ಪಂಗಡ ಸ್ಥಾನಮಾನ ಮತ್ತು ವಾಲ್ಮೀಕಿ ಸಮುದಾಯಕ್ಕೆ ಪರಿಶಿಷ್ಟ ಜಾತಿ ಸ್ಥಾನಮಾನ ಒದಗಿಸುವಂಥ ಮಹತ್ವದ ವಿಧೇಯಕಗಳು ಸಂಸತ್‌ನ ಹಾಲಿ ಅಧಿವೇಶನದಲ್ಲಿ ಮಂಡನೆಯಾಗುವ ಸಾಧ್ಯತೆಯಿದೆ.

Advertisement

ಈ ಅಧಿವೇಶನದಲ್ಲೇ ವಿಧೇಯಕಗಳನ್ನು ಮಂಡನೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಕಾನೂನು, ಗೃಹ, ಬುಡಕಟ್ಟು ವ್ಯವಹಾರಗಳು ಮತ್ತು ಸಾಮಾಜಿಕ ನ್ಯಾಯ ಸಚಿವಾಲಯಗಳು ಹಾಗೂ ಜಮ್ಮು -ಕಾಶ್ಮೀರ ಆಡಳಿತವು ಸಮಾಲೋಚನೆ ನಡೆಸುತ್ತಿವೆ. ಜಮ್ಮು ಮತ್ತು ಕಾಶ್ಮೀರ ಪುನಾರಚನೆ ಕಾಯ್ದೆ, 2019ಕ್ಕೆ ತಿದ್ದುಪಡಿ ತಂದು ವಿಧಾನಸಭೆಯಲ್ಲಿ 2 ನಾಮನಿರ್ದೇಶಿತ ಸ್ಥಾನಗಳನ್ನು ಕಾಶ್ಮೀರಿ ಪಂಡಿತರಿಗೆ ನೀಡಲಾಗುತ್ತದೆ.

ಇನ್ನು, ಸಮುದಾಯಗಳಿಗೆ ಎಸ್‌ಸಿ/ಎಸ್‌ಟಿ ಸ್ಥಾನಮಾನ ನೀಡುವ ವಿಧೇಯಕ ಮಂಡನೆ ಪ್ರಕ್ರಿಯೆಯನ್ನು ಬುಡಕಟ್ಟು ವ್ಯವಹಾರಗಳ ಸಚಿವಾಲಯವೇ ನಡೆಸಲಿದೆ. ಇತರೆ ಹಿಂದುಳಿದ ವರ್ಗ ಸ್ಥಾನಮಾನವನ್ನು ಈಗ ರಾಜ್ಯಗಳೇ ಒದಗಿಸಬಹುದು. ಆದರೆ, ಎಸ್‌ಸಿ/ಎಸ್‌ಟಿ ಸ್ಥಾನಮಾನ ಒದಗಿಸಬೇಕೆಂದರೆ, ಅದಕ್ಕೆ ಸಂಬಂಧಿಸಿದ ಶಾಸನವು ಸಂಸತ್‌ನಲ್ಲಿ ಕಡ್ಡಾಯವಾಗಿ ಮಂಡನೆ ಆಗಲೇಬೇಕು ಎಂದು ಹಿರಿಯ ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

ಕಣಿವೆಯಲ್ಲಿ ಟಾರ್ಗೆಟೆಡ್‌ ಹತ್ಯೆ ಪ್ರಕರಣಗಳು ಹೆಚ್ಚಾದ ಕಾರಣ, ಅನೇಕ ಕಾಶ್ಮೀರಿ ಪಂಡಿತರು ಅಲ್ಲಿಂದ ವಲಸೆ ಹೋಗುತ್ತಿರುವ ಬೆನ್ನಲ್ಲೇ ಸರ್ಕಾರ, ಕಾಶ್ಮೀರಿ ಪಂಡಿತರಿಗೆ ವಿಧಾನಸಭೆಯಲ್ಲಿ ಪ್ರಾತಿನಿಧ್ಯ ನೀಡಲು ಮುಂದಾಗಿದೆ. ಜತೆಗೆ, ಸದ್ಯದಲ್ಲೇ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆಯೂ ನಡೆಯಲಿರುವ ಕಾರಣ ಸರ್ಕಾರದ ಈ ನಡೆ ಮಹತ್ವ ಪಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next