ಬೆಂಗಳೂರು: ಬಾಕಿ ಬಿಲ್ ಪಾವತಿ ಮಾಡದೆ ನಿತ್ಯ ಕಿರುಕುಳ ಕೊಟ್ಟು ಕಿಯೋನಿಕ್ಸ್ ವೆಂಡರ್‌ದಾರರ ಬದುಕನ್ನೇ ಕಿತ್ತುಕೊಂಡಿದ್ದಾರೆ. ಇದರಿಂದ ಬೇಸತ್ತು ವೆಂಡರ್‌ಗಳು ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೆ ಸಚಿವ ಪ್ರಿಯಾಂಕ್ ಖರ್ಗೆ, ಶಾಸಕ ಹಾಗೂ ಅಧ್ಯಕ್ಷ ಶರತ್ ಬಚ್ಚೇಗೌಡ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪವನ್ ಕುಮಾರ್ ಮಲ್ಲಪಟ್ಟಿ ಹಾಗೂ ನಿರ್ದೇಶಕ ನಿಶ್ಚಿತ್ ಕಾರಣ.
ನಮಗೆ ದಯಾಮರಣ ನೀಡಿ ಎಂದು ಕಿಯೋನಿಕ್ಸ್ ಎಂಪಾನೆಲ್ಡ್ ವೆಂಡರ್ಸ್ ವೆಲ್‌ಫೇರ್ ಅಸೋಸಿಯೇಷನ್ (ಕೆಇವಿಡಬ್ಲ್ಯುಎ) ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿದೆ. ಈಗಾಗಲೇ ಭ್ರಷ್ಟಾಚಾರ ಸೇರಿ ಹಲವು ಆರೋಪಗಳನ್ನು ಎದುರಿಸುತ್ತಿರುವ ಸರಕಾರಕ್ಕೆ ಈ ಆರೋಪ ಮತ್ತೂಂದು ತಲೆನೋವಾಗಿ ಪರಿಣಮಿಸಿದೆ.
ರಾಜ್ಯದಲ್ಲಿ ಸುಮಾರು 48 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ರಾಜ್ಯ ವಿದ್ಯುನ್ಮಾನ ನಿಗಮ ನಿಯಮಿತವು (ಕಿಯೋನಿಕ್ಸ್) ಇನ್ನು 1 ವಾರದಲ್ಲಿ ನಮ್ಮ ಹಣ ನಮಗೆ ಬಿಡುಗಡೆ ಮಾಡದೇ ಇದ್ದಲ್ಲಿ ಸಹಿಸಿಕೊಳ್ಳುವ ಶಕ್ತಿ ನಮ್ಮಲ್ಲಿ ಉಳಿದಿರುವುದಿಲ್ಲ. ಹಾಗಾಗಿ ನಮ್ಮ ಹಣ ಪಾವತಿ ಮಾಡಲು ಇನ್ನೂ ವಿಳಂಬ ನೀತಿ ಅನುಸರಿಸಿ ನಮಗೆ ತೊಂದರೆ ಕೊಟ್ಟಲ್ಲಿ 450 ರಿಂದ 500 ಜನ ವೆಂಡರ್‌ದಾರರಲ್ಲಿ ಯಾರಾದರೂ ಆತ್ಮಹತ್ಯೆ ದಾರಿ ಹಿಡಿದು ಜೀವ ಕಳೆದುಕೊಂಡರೆ ಅದಕ್ಕೆ ಸಚಿವ, ಶಾಸಕ, ಅಧಿಕಾರಿಗಳೇ ಕಾರಣ. ನಮಗೆಲ್ಲರಿಗೂ ದಯಾಮರಣ ಕೊಡಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ ಎಂದು ರಾಷ್ಟ್ರಪತಿಗಳಿಗೆ ಕಿಯೋನಿಕ್ಸ್ ಅಸೋಸಿಯೇಶನ್ ಬರೆದ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಸಿಎಂ ಬಳಿ ಹೋದರೂ ಪರಿಹಾರ ಸಿಕ್ಕಿಲ್ಲ
2023ರಲ್ಲಿ ಸರಕಾರ ಬದಲಾದ ತತ್‌ಕ್ಷಣ ವೆಂಡರ್‌ದಾರರ ಬಿಲ್ಲನ್ನು ತಡೆಹಿಡಿದು ನಾನಾ ರೀತಿಯಾಗಿ ಕಿರುಕುಳ ಕೊಡಲು ಪ್ರಾರಂಭಿಸಿದ್ದಾರೆ. 3ರಿಂದ 4 ತಿಂಗಳು ಕಾಲ ಅಧಿಕಾರಿಗಳು ಹಾಗೂ ಸಚಿವರಲ್ಲಿ ನಾವುಗಳು ಸಂಯಮದಿಂದ ಎಷ್ಟೇ ಕೇಳಿಕೊಂಡರೂ, ಮನವಿ ಮಾಡಿಕೊಂಡರೂ ಬಿಲ್ ಪಾವತಿ ಮಾಡಿರುವುದಿಲ್ಲ.
ಈ ಎಲ್ಲ ಸಮಸ್ಯೆಗಳನ್ನು ಹಲವಾರು ಬಾರಿ ಮುಖ್ಯಮಂತ್ರಿಗಳು, ಸಂಬಂಧಪಟ್ಟ ಅಧಿಕಾರಿಗಳು, ರಾಜ್ಯಪಾಲರ ಗಮನಕ್ಕೆ ತಂದರೂ ಯಾವುದೇ ಪರಿಹಾರ ಸಿಕ್ಕಿರುವುದಿಲ್ಲ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ಸಂಗಪ್ಪ ಕಮಿಷನ್ ರೂಪದಲ್ಲಿ ಶೇ. 12 ಲಂಚ ಕೇಳಿ ಕಿರುಕುಳ ಕೊಟ್ಟಿದ್ದಾರೆ. ಲಂಚ ಕೊಡಲು ಒಪ್ಪದೇ ಇದ್ದ ಕಾರಣ ನಮ್ಮ ಬಿಲ್ ಪಾವತಿಸದೆ ತಡೆಹಿಡಿದಿದ್ದಾರೆ. ಇದರ ವಿರುದ್ಧ ಪ್ರತಿಭಟಿಸಿದ್ದಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ನಮ್ಮ ಮೇಲೆ ಇಲ್ಲಸಲ್ಲದ ಆರೋಪ ಮಾಡಿ ವೈಯಕ್ತಿಕ ದ್ವೇಷ ಸಾಧಿಸಲು ಆರಂಭಿಸಿದ್ದಾರೆ.