Advertisement

ಕಾಮಗಾರಿ ಪೂರ್ಣಗೊಳಿಸದೇ ಬಿಲ್‌ ಪಾವತಿ?

02:43 PM Jul 17, 2023 | Team Udayavani |

ಎಚ್‌.ಡಿ.ಕೋಟೆ: ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆಯಡಿ ತಾಲೂಕಿನ ಜಕ್ಕಳ್ಳಿ ಗ್ರಾಮದ ಪರಿಶಿಷ್ಟ ಜನರು ವಾಸಿಸುವ ಎರಡು ಬೀದಿಗಳಲ್ಲಿ ಕಾಂಕ್ರೀಟ್‌ ರಸ್ತೆ ನಿರ್ಮಾಣಕ್ಕಾಗಿ 13 ಲಕ್ಷ ರೂ.ನಂತೆ 26 ಲಕ್ಷ ರೂ.ನಲ್ಲಿ ಕಾಮಗಾರಿ ಆರಂಭಿಸಿ, ಅರೆಬರೆ ಮಾಡಿ, ದಲಿತ ಸಮುದಾಯಕ್ಕೆ ಅನ್ಯಾಯ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

Advertisement

ಕಾಂಕ್ರೀಟ್‌ ರಸ್ತೆ ಕನಸು ಕಂಡಿದ್ದ ಜಕ್ಕಳ್ಳಿ ಗ್ರಾಮದ ಜನರು ಇಂದಿಗೂ ಕೇಸರಿನಲ್ಲೇ ಓಡಾಡುತ್ತಿದ್ದಾರೆ. ಕಾಮಗಾರಿ ನಿರ್ಮಾಣದ ಗುತ್ತಿಗೆ ಪಡೆದಿದ್ದ ಕರ್ನಾಟಕ ಮೂಲಸೌಕರ್ಯಗಳ ಅಭಿವೃದ್ಧಿ ನಿಗಮ (ಕೆಆರ್‌ಐಡಿಎಲ್‌)ದ ಎಂಜಿನಿಯರ್‌ಗಳು, ಉಪ ಗುತ್ತಿಗೆ ನೀಡಿ, ಕಾಮಗಾರಿ ಪೂರ್ಣಗೊಳಿಸದೇ ಒಂದು ರಸ್ತೆ ನಿರ್ಮಿಸಿ, ಮತ್ತೂಂದು ರಸ್ತೆಗೆ ಅರೆಬರೆ ಚರಂಡಿ ನಿರ್ಮಿಸಿ, ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ.

ತಿರುಗಿಯೂ ನೋಡದ ಸಮಾಜ ಕಲ್ಯಾಣಾಧಿಕಾರಿ: ಇನ್ನು ಕಾಮಗಾರಿ ಪರಿಶೀಲನೆ ಜವಾಬ್ದಾರಿ ಹೊತ್ತಿದ್ದ ಸಮಾಜ ಕಲ್ಯಾಣಾಧಿ ಕಾರಿಗಳು ಇತ್ತ ಸುಳಿದಿಲ್ಲ. ಕಾಂಕ್ರೀಟ್‌ ರಸ್ತೆ ಬಗ್ಗೆ ವಿಚಾರಿಸಿದರೆ ನಾನು ಬೇರೆ ಕೆಲಸದಲ್ಲಿ ಬ್ಯೂಸಿ ಇದ್ದೇನೆ, ನಮ್ಮ ಮ್ಯಾನೇಜರ್‌ ಕಳುಹಿಸಿ ಅಲ್ಲಿ ಏನಾಗಿದೆ ನೋಡಿಸುತ್ತೇನೆ ಎನ್ನುವ ಬೇಜಾವಾಬ್ದಾರಿ ಮಾತುಗಳನ್ನು ಆಡುತ್ತಿದ್ದಾರೆ. ಸ್ವತ್ಛತೆ ಇಲ್ಲದೆ, ರೋಗ ಭೀತಿ: ಕಾಮಗಾರಿ ಅಪೂರ್ಣದಿಂದ ರಸ್ತೆ ಸಂಪೂರ್ಣ ಕೆಸರು ಗದ್ದೆಯಂತೆ ಆಗಿದ್ದು, ನಿರ್ಮಿಸಿರುವ ಚರಂಡಿಗಳಲ್ಲೂ ಕೊಳಚೆ ನೀರು ಸರಾಗವಾಗಿ ಹರಿಯದೇ ದುರ್ನಾತ ಬೀರುತ್ತಿದೆ. ಇದರಿಂದಾಗಿ ದಲಿತ ಸಮುದಾಯದ ಬೀದಿಗಳಲ್ಲಿ ಸ್ವತ್ಛತೆ ಇಲ್ಲದೆ, ಜನರು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಿದ್ದಾರೆ.

ಕೆಆರ್‌ಐಡಿಎಲ್‌ ಕಪ್ಪು ಪಟ್ಟಿಗೆ ಸೇರಿಸಿ: ದಲಿತರು ವಾಸಿಸುವ ಬೀದಿಗಳಿಗೆ ಗುಣಮಟ್ಟದ ಕಾಂಕ್ರೀಟ್‌ ರಸ್ತೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆಯಡಿ 13 ಲಕ್ಷ ರೂ. ಅನುದಾನ ಒದಗಿಸಿ ಮೂಲ ಸೌಕರ್ಯಕ್ಕೆ ಮುಂದೂಡಿ ಇಟ್ಟರೇ, ಸಂಸ್ಥೆಯ ಎಂಜಿನಿಯರ್‌, ಗುತ್ತಿಗೆದಾರ ಅರೆಬರೆ ಕಾಮಗಾರಿ ನಡೆಸಿ ಮಹತ್ವದ ಯೋಜನೆ ಹಳ್ಳ ಹಿಡಿಯುವಂತೆ ಮಾಡಿದ್ದಾರೆ. ಅವರ ಮೇಲೆ ಸರ್ಕಾರ ಶಿಸ್ತು ಕ್ರಮ ಜರುಗಿಸಿ, ಗುತ್ತಿಗೆ ಪಡೆದಿದ್ದ ಕೆಆರ್‌ಐಡಿಎಲ್‌ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಗ್ರಾಮದ ಜನರು ಆಗ್ರಹಿಸಿದ್ದಾರೆ.

ಇನ್ನಾದರೂ ಕ್ಷೇತ್ರದ ಸಂಸದ ವಿ.ಶ್ರೀನಿವಾಸ್‌ ಪ್ರಸಾದ್‌, ಶಾಸಕ ಅನಿಲ್‌ ಚಿಕ್ಕಮಾದು, ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಆಗಿರುವ ಡಾ.ಎಚ್‌.ಸಿ.ಮಹದೇವಪ್ಪ ಅವರು ಕೆಆರ್‌ ಐಡಿಎಲ್‌ ಸಂಸ್ಥೆ ಎಂಜಿನಿಯರ್‌ಗಳು ಹಾಗೂ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರನ ಮತ್ತು ಸಮಾಜ ಕಲ್ಯಾಣಾಧಿಕಾರಿಯ ಮೇಲೆ ಸೂಕ್ತ ಕ್ರಮ ಜರುಗಿಸಿ ಜಕ್ಕಳ್ಳಿ ಗ್ರಾಮದ ಬಡ ದಲಿತ ಸಮುದಾಯ ಬೀದಿಗಳಲ್ಲಿ ಗುಣಮಟ್ಟದ ಕಾಂಕ್ರೀಟ್‌ ರಸ್ತೆ ನಿರ್ಮಾಣಕ್ಕೆ ಶ್ರಮಿಸುವರೇ ಕಾದು ನೋಡಬೇಕು.

Advertisement

ಚರಂಡಿ, ರಸ್ತೆ ನಿರ್ಮಿಸಿ ರೋಗ ಮುಕ್ತರಾಗಿ ಮಾಡಿ: ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆಯಡಿ 13 ಲಕ್ಷ ರೂ.ನಲ್ಲಿ ನಮ್ಮ ಬೀದಿಯ ನಾಗರಾಜು ಮನೆಯಿಂದ ಶಿವಮೂರ್ತಿ ಅವರ ಮನೆವರೆಗೆ ಕಾಂಕ್ರೀಟ್‌ ಚರಂಡಿ ರಸ್ತೆ ನಿರ್ಮಾಣ, ಪಕ್ಕದ ಬೀದಿಯ ಪರಿಶಿಷ್ಟ ಜಾತಿಯ ಮಲ್ಲಿಕಾರ್ಜುನ್‌ ಅವರ ನಿವೇಶನದಿಂದ ಸೋಮಣ್ಣ ಅವರ ಮನೆವರೆಗೆ 13 ಲಕ್ಷ ರೂ.ನಲ್ಲಿ ಕಾಮಗಾರಿ ಪ್ರಾರಂಭಿಸಿದ ವಡ್ಡರಗುಡಿ ಗ್ರಾಮದ ವೆಂಕಟೇಶ್‌ ಎಂಬ ಗುತ್ತಿಗೆದಾರ, ಪಕ್ಕದ ಬೀದಿಯಲ್ಲಿ ಚರಂಡಿ, ರಸ್ತೆ ಮಾಡಿ, ನಮ್ಮ ಬೀದಿಯಲ್ಲಿ ಚರಂಡಿ ಮಾತ್ರ ಮಾಡಿ, ಕಾಂಕ್ರೀಟ್‌ ರಸ್ತೆ ನಿರ್ಮಾಣಕ್ಕೆ ಮುಂದಾಗದೆ ಬಿಲ್‌ ಪಡೆದುಕೊಂಡಿದ್ದಾನೆ. ಅಪೂರ್ಣ ಕಾಮಗಾರಿಯಿಂದ ರಸ್ತೆ ಕೇಸರುಮಯವಾಗಿದೆ, ಸಂಚಾರಕ್ಕೆ ತೊಂದರೆ ಆಗಿದೆ. ಚರಂಡಿ ನೀರು ಮುಂದೆ ಹರಿಯದ ಪರಿಣಾಮ, ದುರ್ನಾತ ಬೀರುತ್ತಿದೆ. ಸೊಳ್ಳೆಗಳ ಕಾಟ ಹೆಚ್ಚಾಗಿ, ನಮ್ಮ ಮನೆಯಲ್ಲಿ ಜನರು ರೋಗ ರುಜಿನಗಳಿಗೆ ತುತ್ತಾಗುತ್ತಿದ್ದಾರೆ. ರಸ್ತೆ, ಚರಂಡಿ ನಿರ್ಮಾಣ ಮಾಡಿ ನಮಗೆ ರಕ್ಷಣೆ ನೀಡಿ ಎಂದು ಜಕ್ಕಳಿ ಗ್ರಾಮದ ನಿವಾಸಿ ಶಿವಮೂರ್ತಿ ಮನವಿ ಮಾಡಿದರು.

ಗ್ರಾಮೀಣ ಪ್ರದೇಶದ ಜನರು ನೆಮ್ಮದಿಯ ಜೀವನ ನಡೆಸಲಿ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರ ಅಗತ್ಯ ಮೂಲ ಸೌಕರ್ಯ ಒದಗಿಸಲು ಅನುದಾನ ಒದಗಿಸುತ್ತಿದೆ. ಆದರೆ, ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಬೇಕಾದ ಸಮಾಜ ಕಲ್ಯಾಣಾಧಿಕಾರಿ, ಗುತ್ತಿಗೆ ಪಡೆದ ಕೆ.ಆರ್‌.ಐ.ಡಿ.ಎಲ್‌ ಸಂಸ್ಥೆ ಎಂಜಿನಿಯರ್‌ಗಳು, ಜನಪ್ರತಿನಿಧಿ ಗಳ ನಿರ್ಲಕ್ಷ್ಯದಿಂದ ಸರ್ಕಾರದ ಅನುದಾನ ದುರ್ಬಳಕೆ ಆಗಿದೆ. ಎಂಜಿನಿಯರ್‌ ಮತ್ತು ಗುತ್ತಿಗೆದಾರ ಜೇಬು ತುಂಬಿಸಿಕೊಂಡು, ಕೇಂದ್ರ ಸರ್ಕಾರದ ಮಹತ್ವದ ಯೋಜನೆಯನ್ನು ಹಳ್ಳಹಿಡಿಸಿದ್ದಾರೆ. ●ಚೌಡಳ್ಳಿ ಜವರಯ್ಯ, ವಕೀಲರು.

ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆಯಡಿ ಜಕ್ಕಳ್ಳಿ ಗ್ರಾಮದಲ್ಲಿ ಕಾಂಕ್ರೀಟ್‌ ರಸ್ತೆ ಕಾಮಗಾರಿಯ ಸ್ಥಳಕ್ಕೆ ನಮ್ಮ ಮ್ಯಾನೇಜರ್‌ ಕಳುಹಿಸಿ ಪರಿಶೀಲಿಸಲಾಗಿದೆ. ಕಾಮಗಾರಿ ಅಪೂರ್ಣವಾಗಿದ್ದರೂ, ಗುತ್ತಿಗೆದಾರ ಸಂಪೂರ್ಣ ಬಿಲ್‌ ಪಡೆದುಕೊಂಡಿದ್ದರೆ ಕ್ರಮಕೈಗೊಳ್ಳುತ್ತೇನೆ. ●ರಾಮಸ್ವಾಮಿ, ತಾಲೂಕು ಸಮಾಜ ಕಲ್ಯಾಣಾಧಿಕಾರಿ, ಎಚ್‌.ಡಿ.ಕೋಟೆ.

Advertisement

Udayavani is now on Telegram. Click here to join our channel and stay updated with the latest news.

Next