Advertisement

ನೆರೆಯ ಗ್ರಾಮದ ರಸ್ತೆ ಕಾಂಕ್ರೀಟ್‌ಗೆ ಬಿಲ್‌ ಪಾವತಿ

10:26 PM Jun 04, 2019 | mahesh |

ಬಡಗನ್ನೂರು : ಗ್ರಾಮ ಪಂಚಾಯತ್‌ ಸ್ಥಿರ ಆಸ್ತಿಯಲ್ಲಿಲ್ಲದ ನೆರೆ ಗ್ರಾಮದ ರಸ್ತೆ ಕಾಂಕ್ರೀಟ್‌ ಕಾಮಗಾರಿಗೆ ಬಿಲ್‌ ಪಾವತಿ ಮಾಡಿರುವ ಬಗ್ಗೆ ಬಡಗನ್ನೂರು ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ಸದಸ್ಯರಿಂದ ಆಕ್ಷೇಪ ವ್ಯಕ್ತವಾಯಿತು. ಗ್ರಾ.ಪಂ. ಅಧ್ಯಕ್ಷ ಕೇಶವ ಗೌಡ ಕನ್ನಯ ಅವರ ಅಧ್ಯಕ್ಷತೆಯಲ್ಲಿ ಜೂ. 3ರಂದು ಗ್ರಾ.ಪಂ. ಸಮುದಾಯ ಭವನದಲ್ಲಿ ಸಭೆ ನಡೆಯಿತು.

Advertisement

ಬಡಗನ್ನೂರು ಗ್ರಾ.ಪಂ. ಹಾಗೂ ನೆಟ್ಟಣಿಗೆಮುಟ್ನೂರು ಗ್ರಾಮದ ಗಡಿಭಾಗದಲ್ಲಿರುವ ಪಡುವನ್ನೂರು ಗ್ರಾಮದ ಸಾರಕೂಟೇಲು- ಮುಗುಳಿ ಸಂಪರ್ಕ ರಸ್ತೆಗೆ ಗ್ರಾ.ಪಂ. 14 ನೇ ಹಣಕಾಸು ಯೋಜನೆಯಲ್ಲಿ ರಸ್ತೆ ಕಾಂಕ್ರೀಟ್‌ ಕಾಮಗಾರಿಗೆ 76 ಸಾವಿರ ಅನುದಾನ ಇಟ್ಟಿತ್ತು. ಕಾಮಗಾರಿ ಸಂದರ್ಭ ಗುತ್ತಿಗೆದಾರರಿಗೆ ಸ್ಥಳೀಯ ವ್ಯಕ್ತಿಯೋರ್ವರು ಒತ್ತಡ ಹಾಕಿ ಪಂಚಾಯತ್‌ ಸ್ಥಿರ ಆಸ್ತಿಯಲ್ಲಿಲ್ಲದ ಇನ್ನೊಂದು ರಸ್ತೆಗೆ ಕಾಂಕ್ರೀಟ್‌ ಕಾಮಗಾರಿ ನಡೆಸಿದ್ದಾರೆ. ಮಾತ್ರವಲ್ಲದೇ ಸ್ಥಳೀಯ ಕೆಲ ವ್ಯಕ್ತಿಗಳಲ್ಲಿ ರಸ್ತೆ ಬೇಕಾದರೆ ಹಣ ನೀಡಬೇಕು ಎಂದು ಹೇಳಿ ಹಣ ಪಡೆದುಕೊಂಡಿದ್ದಾರೆ ಎಂದು ಸದಸ್ಯ ರವಿರಾಜ ರೈ ಹೇಳಿದರು.

ಬೆದರಿಕೆ ಹಾಕಿದ್ದಾರೆ
ಈ ಬಗ್ಗೆ ಪಿಡಿಒ ವಸೀಮ ಗಂಧದ ಪ್ರತಿಕ್ರಿಯಿಸಿ, ಕಾಮಗಾರಿ ಪೂರ್ಣಗೊಂಡು ಬಿಲ್‌ ಹಂತದ ಸಂದರ್ಭ ಗಮನಕ್ಕೆ ಬಂದಿದೆ ಎಂದರು. ಕ್ರಿಯಾ ಯೋಜನೆ ಇದೇ ರಸ್ತೆಯ ಹೆಸರು ಇದೆ. ಆದರೆ ರಸ್ತೆ ಬದಲಾವಣೆಯಾಗಿ ನೆಟ್ಟಣಿಗೆ ಮಾಟ್ನೂರು ಗ್ರಾಮದ ರಸ್ತೆಗೆ ಕಾಮಗಾರಿ ಮಾಡಲಾಗಿದೆ ಎಂದ ಅವರು, ಬಿಲ್‌ ನಿಡುವಲ್ಲಿ ಸ್ಥಳೀಯ ವ್ಯಕ್ತಿ ಐದಾರು ಬಾರಿ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ ಎಂದರು. ಈ ಬಗ್ಗೆ ಪ್ರತಿಕ್ರಿಯಿಸಿದ ಗ್ರಾಮ ಪಂಚಾಯತ್‌ ಸದಸ್ಯ ರವಿರಾಜ ರೈ, ಬೆದರಿಕೆ ಒಡ್ಡಲು, ಬಿಲ್‌ ಕೇಳಲು ಆತ ಯಾರು? ಎಂದು ಪ್ರಶ್ನಿಸಿದರು. ಪಂಚಾಯತ್‌ ಸ್ಥಿರ ಆಸ್ತಿಯಲ್ಲಿರುವ ರಸ್ತೆಗೆ ಮಾತ್ರಬಿಲ್‌ ಪಾವತಿ ಮಾಡುವಂತೆ ನಿರ್ಣಯವನ್ನು ಕೈಗೊಳ್ಳಲಾಯಿತು.

ದೂರು ಅರ್ಜಿ
ಕಜಮೂಲೆ-ಸಾರೆಪ್ಪಾಡಿ ಪಂಚಾಯತ್‌ ರಸ್ತೆಯನ್ನು ಸ್ಥಳೀಯ ವ್ಯಕ್ತಿಯೋರ್ವರು ಅಡ್ಡಗಟ್ಟಿ ಬಂದ್‌ ಮಾಡಿದ ದೂರು ಅರ್ಜಿ ಬಗ್ಗೆ ಅಧ್ಯಕ್ಷ ಕೇಶವ ಗೌಡ ಮಾತನಾಡಿ, ಈ ಬಗ್ಗೆ ಅಭಿವೃದ್ಧಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವ ಬಗ್ಗೆ ನಿರ್ಣಯ ಮಾಡಲಾಯಿತು.

ಗ್ರಾಮ ಪಂಚಾಯತ್‌ ಉಪಾಧ್ಯಕ್ಷೆ ಬೇಬಿ ಎಸ್‌., ಸದಸ್ಯರಾದ ರವಿರಾಜ ರೈ ಸಜಂಕಾಡಿ, ಗುರುಪ್ರಸಾದ್‌ ರೈ ಕುದಾRಡಿ, ಬಾಲಕೃಷ್ಣ ಮುಂಡೋಳೆ, ಗೋಪಾಲಕೃಷ್ಣ ಸುಳ್ಯಪದವು, ರಘುನಾಥ ರೈ ಕುತ್ಯಾಳ, ಉದಯ ಕುಮಾರ್‌ ಶರವು, ಸುಶೀಲಾ ಪಕ್ಯೂಡ್‌, ದಮಯಂತಿ ನೆಕ್ಕರೆ, ಸವಿತಾ ಮಡ್ಯಲಮೂಲೆ, ಹೇಮಲತಾ ಗೌಡ ಸಂಪಿಗೆಮಜಲು, ದೇವಕಿ ಕನ್ನಡ್ಕ, ವಿಜಯಲಕ್ಷ್ಮೀ ಮೇಗಿನಮನೆ, ದಾಮೋದರ ಆಚಾರ್ಯ ನೆಕ್ಕರೆ, ರೋಹಿನಿ ಕಜಮೂಲೆ, ಸವಿತಾ ಪದಡ್ಕ, ಜಲಜಾಕ್ಷಿ ನೆರೋತ್ತಡ್ಕ, ಪಿಡಿಒ ವಸೀಮ ಗಂಧದ ಉಪಸ್ಥಿತರಿದ್ದರು. ಗ್ರಾ.ಪಂ. ಕಾರ್ಯದರ್ಶಿ ಶಾರದಾ ಕೆ., ಸ್ವಾಗತಿಸಿದರು. ಗುಮಾಸ್ತ ಜಯಾಪ್ರಸಾದ ರೈ ಗತ ಸಭೆಯ ವರದಿ ಮಂಡಿಸಿ, ವಂದಿಸಿದರು. ಸಿಬಂದಿ ಅಬ್ದುಲ್‌ ರಹೆಮಾನ್‌, ಸುಕನ್ಯಾ, ಹೇಮಾವತಿ, ಶಾರದಾ ಹಾಗೂ ಶೀಲಾವತಿ ಸಹಕರಿಸಿದರು.

Advertisement

ಕಾಡಿದೆ ನೀರಿನ ಸಮಸ್ಯೆ; ಬಿಲ್‌ ಮನ್ನಾ!
ಏರಾಜೆ ಪಳ್ಳತ್ತಾರು ಕುಡಿಯುವ ನೀರಿನ ಪೈಪ್‌ ಒಡೆದು ಪಂಪ್‌ ತೆಗೆದು ಹಾಕಿದ ಕಿಡಿಗೇಡಿಗಳ ಬಗ್ಗೆ ಪಂಚಾಯತ್‌ ಯಾವುದೇ ಕ್ರಮ ಕೈಗೊಂಡಿಲ್ಲ. ಅಂದಿನಿಂದ ಏರಾಜೆ- ಪಳ್ಳತ್ತಾರು ಭಾಗದ ಜನರಿಗೆ ಕುಡಿಯುವ ನೀರಿನ ಸಮಸ್ಯೆಯಾಗಿದೆ ಎಂದು ಸದಸ್ಯೆ ವಿಜಯಲಕ್ಷ್ಮೀ ಹೇಳಿದರು. ಈ ಭಾಗದ ನಳ್ಳಿ ನೀರಿನ ಫ‌ಲಾನುಭವಿಗಳ ತಂಡ ಆಗಮಿಸಿ ಮೂರು ತಿಂಗಳಿಂದ ನೀರಿನ ಸಮಸ್ಯೆ ಬಗ್ಗೆ ಗ್ರಾ.ಪಂ. ಸದಸ್ಯರಿಗೆ ಹಾಗೂ ಅಧಿಕಾರಿಗಳ ಗಮನಕ್ಕೆ ತಂದು ಕೊನೆಯ ಬಾರಿಗೆ ಕೊಳವೆ ಬಾವಿ ಡಿಪ್‌ ಮಾಡಲಾಯಿತು. ಆದರೂ ನೀರು ಸರಿಯಾಗಿ ಬರುತ್ತಿಲ್ಲ ಎಂದು ತಿಳಿಸಿದರು.

ಅಧ್ಯಕ್ಷ ಕೇಶವ ಗೌಡ ಮಾತನಾಡಿ, ಕಳೆದ ಮೂರು ತಿಂಗಳ ನೀರಿನ ಬಿಲ್‌ ಮನ್ನಾ ಮಾಡುವ ಬಗ್ಗೆ ತಿಳಿಸಿ ಮುಂದೆ ಹೊಸ ಕೊಳವೆಬಾವಿ ತೆಗೆಯುವವರೆಗೆ ಮೂರು ದಿವಸಕ್ಕೆ ಒಂದು ಬಾರಿ ನೀರು ಬಿಡುವ ಬಗ್ಗೆ ಪಂಪ್‌ ಚಾಲಕರಿಗೆ ಆದೇಶಿಸಿ ನಿರ್ಣಯ ಕೈಗೊಂಡರು.

Advertisement

Udayavani is now on Telegram. Click here to join our channel and stay updated with the latest news.

Next