ಬೆಂಗಳೂರು: ಕರ್ನಾಟಕ ವೃತ್ತಿಪರ ಸಿವಿಲ್ ಎಂಜಿನಿಯರುಗಳು ಪರಿಷತ್ತನ್ನು ರಚಿಸುವುದಕ್ಕಾಗಿ ಕರ್ನಾಟಕ ವೃತ್ತಿಪರ ಸಿವಿಲ್ ಎಂಜಿನಿಯರ್‌ಗಳ ಮಸೂದೆ-2024ಕ್ಕೆ ವಿಧಾನಸಭೆಯಲ್ಲಿ ಬುಧವಾರ ಅಂಗೀಕಾರ ನೀಡಲಾಯಿತು.
ಇನ್ನು ಮುಂದೆ ವೃತ್ತಿಪರ ಸಿವಿಲ್ ಎಂಜಿನಿಯರ್‌ಗಳು ಈ ಪರಿಷತ್ತಿನಡಿ ನೋಂದಾಯಿತರಾಗಬೇಕು. ಪ್ರಮಾಣಪತ್ರ ಹೊಂದಿದ ಎಂಜಿನಿಯರ್‌ಗಳು ಪ್ರಮಾಣೀಕರಿಸಿದ ವಿನ್ಯಾಸ, ಕಟ್ಟಡಗಳನ್ನು ಮಾತ್ರ ಅಧಿಕೃತ ಎಂದು ಪರಿಗಣಿಸಲಾಗುತ್ತದೆ. ಕೇವಲ ಸಿವಿಲ್ ಎಂಜಿನಿಯರಿಂಗ್ ಕ್ಷೇತ್ರದ ಅನುಭವ ಆಧರಿಸಿ ಕಾರ್ಯ ನಿರ್ವಹಿಸುವಂತಿಲ್ಲ. ಹಾಗೊಂದು ವೇಳೆ ಮಾಡಿದ್ದೇ ಆದರೆ, ಅಂತಹ ಆರೋಪ ಸಾಬೀತಾದರೆ 6 ತಿಂಗಳವರೆಗೆ ಜೈಲುಶಿಕ್ಷೆ ಮತ್ತು 50 ಸಾವಿರ ರೂ.ವರೆಗೆ ಜುಲ್ಮಾನೆ ವಿಧಿಸಲಾಗುತ್ತದೆ.
50 ಚದರ ಮೀಟರ್ ಮೀರಿದ ಫ್ಲಿಂತ್ ಪ್ರದೇಶದ ಕಟ್ಟಡ, ನೆಲ ಮಹಡಿ ಮಾತ್ರವುಳ್ಳ ಕಟ್ಟಡದ ಸಾಮಾನ್ಯ ಎತ್ತರ ಮೀರಿದ ಕಟ್ಟಡ, ಭಾರ ಹೊರುವ ರೀತಿಯ ಕಲ್ಲುಕಟ್ಟಡ ರಚನೆ ಇಲ್ಲದ ಕಟ್ಟಡಗಳಿಗೆ ಪರಿಷತ್ತಿನಲ್ಲಿ ನೋಂದಾಯಿತ ಸಿವಿಲ್ ಎಂಜಿನಿಯರ್‌ಗಳಿಂದಲೇ ಅನುಮೋದನೆ ಪಡೆದುಕೊಳ್ಳಬೇಕು.
ಪರಿಷತ್ತಿನ ಅಧಿಕಾರಾವಧಿ 3 ವರ್ಷಗಳಾಗಿರಲಿದ್ದು, ಅನಂತರ ಚುನಾವಣೆ ನಡೆಸಬೇಕು. ಪರಿಷತ್ತಿನಲ್ಲಿ ಒಟ್ಟು 18 ಸದಸ್ಯರು ಇರಲಿದ್ದು, ಈ ಪೈಕಿ 10 ಮಂದಿ ವೃತ್ತಿಪರ ಸಿವಿಲ್ ಎಂಜಿನಿಯರ್‌ಗಳ ಆಯ್ಕೆಯನ್ನು ಚುನಾವಣೆ ಮೂಲಕ ಮಾಡಲಾಗುತ್ತದೆ. ಅದರಲ್ಲಿ 4 ಸ್ಥಾನಗಳು ಬೆಂಗಳೂರು ವಿಭಾಗದಿಂದ ಆಯ್ಕೆಯಾದರೆ, ಬೆಳಗಾವಿ, ಕಲಬುರಗಿ ಮತ್ತು ಮಂಗಳೂರು ವಿಭಾಗಗಳಿಂದ ತಲಾ ಇಬ್ಬರನ್ನು ಚುನಾಯಿಸಬೇಕು.ಬೆಂಗಳೂರಿನಲ್ಲಿ ಪರಿಷತ್ತಿನ ಪ್ರಧಾನ ಕಚೇರಿ ಸ್ಥಾಪನೆಯಾಗಲಿದೆ.
ಜತೆಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ(ವಿಟಿಯು)ಯು 10 ವರ್ಷಗಳ ಬೋಧನಾ ಅನುಭವ ಇರುವ ಒಬ್ಬರನ್ನು ನಾಮನಿರ್ದೇಶನ ಮಾಡಬಹುದಾಗಿದ್ದು, ವಿಟಿಯು ಹೊರತುಪಡಿಸಿ ಕಾನೂನು ಮೂಲಕ ಸ್ಥಾಪಿತವಾದ ಇತರ ವಿವಿಯ ಸಿವಿಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಬೋಧನಾ ಅನುಭವ ಹೊಂದಿದವರೊಬ್ಬರನ್ನು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತರು ನಾಮ ನಿರ್ದೇಶನ ಮಾಡಬಹುದು. ಇಬ್ಬರನ್ನು ನಾಮನಿರ್ದೇಶನ ಮಾಡುವ ಅಧಿಕಾರವನ್ನು ಪರಿಷತ್ತಿಗೂ ನೀಡಲಾಗಿದೆ.