Advertisement
ಬಿಜೆಪಿ ಪ್ರಾಯೋಜಿತ ಗುತ್ತಿಗೆದಾರರಿಂದ ಆರೋಪ: ಡಿಕೆಶಿ ಬೆಂಗಳೂರು: ಮುಖ್ಯಮಂತ್ರಿಗಳ ನಿರ್ದೇಶನದಂತೆ ಕಾಮಗಾರಿಗಳ ತನಿಖೆ ಮಾಡಿ ಪ್ರಾಮಾಣಿಕವಾಗಿ ಕೆಲಸ ಮಾಡಿರುವವರಿಗೆ ಬಿಲ್ ಪಾವತಿಸಲಾಗುವುದು. ಯಾವುದೇ ಗುತ್ತಿಗೆದಾರರಿಗೆ ಕಿರುಕುಳ ನೀಡುವ ಉದ್ದೇಶ ನಮಗಿಲ್ಲ. ಕೇವಲ ಬಿಜೆಪಿ ಪ್ರಾಯೋಜಿತ ಗುತ್ತಿಗೆದಾರರು ಮಾತ್ರ ಸರಕಾರದ ವಿರುದ್ಧ ಕಮಿಷನ್ ಆರೋಪ ಮಾಡುತ್ತಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಹೇಳಿದ್ದಾರೆ.
Related Articles
Advertisement
“ಕಮಿಷನ್ ಕಳ್ಳರು”: ಯತ್ನಾಳ್
ಬೆಂಗಳೂರು: ರಾಜ್ಯ ಸರಕಾರದ ವಿರುದ್ಧ “ಕಮಿಷನ್ ಕಳ್ಳರು’ ಎಂದು ಮಾಜಿ ಕೇಂದ್ರ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ಧಾಳಿ ನಡೆಸಿದ್ದಾರೆ.ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಎಲ್ಲದಕ್ಕೂ ತನಿಖೆ ಬಾಕಿ ಇದೆ ಎಂದು ಹೇಳುತ್ತಿರುವ ಸಿದ್ದರಾಮಯ್ಯನವರೇ, ಕೆಎಸ್‌ಆರ್‌ಟಿಸಿ ನೌಕರರಿಗೆ ಸಂಬಳ ನೀಡಲು ಯಾವ ತನಿಖೆ ಬಾಕಿ ಇದೆ? ಶಿಕ್ಷಕರಿಗೆ ಸಂಬಳ ನೀಡಲು ಯಾವ ತನಿಖೆ ಬಾಕಿ ಇದೆ? ಸಾರಿಗೆ ನಿಗಮಗಳಿಗೆ ಪೂರ್ಣ ಹಣ ಬಿಡುಗಡೆ ಮಾಡಲು ಯಾವ ತನಿಖೆ ಬಾಕಿ ಇದೆ? ನಿಮ್ಮ ಗ್ಯಾರಂಟಿ ಪದವೀಧರರಿಗೆ 3000 ರೂ. ಹಾಗೂ ಡಿಪ್ಲೊಮಾ ಪೂರೈಸಿದವರಿಗೆ 1,500 ರೂ. ನೀಡಲು ಯಾವ ತನಿಖೆ ಬಾಕಿ ಇದೆ ಎಂದು ಪ್ರಶ್ನಿಸಿದ್ದಾರೆ. ನಿಮ್ಮ ಬ್ರದರ್ (ಡಿಕೆಶಿ ) ವಿರುದ್ಧ ಬಂದಿರುವ ಆರೋಪಗಳು ಸತ್ಯವೆಂದು ತಿಳಿದಿದ್ದರೂ ಯಾಕೆ ಪರ ವಹಿಸಿಕೊಂಡು ಮಾತನಾಡುತ್ತೀರಿ ಎಂದು ಪ್ರಶ್ನಿಸಿದ್ದಾರೆ.
ಕಮಿಷನ್ ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿಯ ಸವಾಲು ಹಾಕಿರುವ ಡಿ.ಕೆ.ಶಿವಕುಮಾರ್ ಅವರಿಗೂ ತಿರುಗೇಟು ನೀಡಿರುವ ಯತ್ನಾಳ್, ಹೌದು. ಅವರು ಕಷ್ಟಪಟ್ಟು ಭತ್ತ ಬೆಳೆದು ಹಣ ಸಂಪಾದಿಸಿದ್ದಾರೆ. ಆ ಭತ್ತವನ್ನು ಮಾರಾಟ ಮಾಡಲು ತಿಹಾರ್ ಜೈಲಿಗೆ ಹೋಗಿದ್ದರು ಎಂದು ಕೆಣಕಿದ್ದಾರೆ. ಎಟಿಎಂ ಸರಕಾರಕ್ಕೆ ಮಕ್ಕಳಾಟ
ವರ್ಗಾವಣೆ ವಿವಾದದ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ, ಕೈ ಶಾಸಕ- ಸಚಿವರ ನಡುವಿನ ಕಲೆಕ್ಷನ್ ಗುದ್ದಾಟವು ಬೆಂಗಳೂರು ಪೊಲೀಸರ ವರ್ಗಾವಣೆಗೆ ಪದೇಪದೆ ಬ್ರೇಕ್ ಹಾಕುತ್ತಿದೆ. ವರ್ಗಾವಣೆ ಆದೇಶ ನೀಡಿ ಬಳಿಕ ತಡೆ ಹಿಡಿಯುವುದು ಎಟಿಎಂ ಸರಕಾರಕ್ಕೆ ಮಕ್ಕಳಾಟವಾಗಿದೆ. ರಾಜ್ಯದಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚಾಗಲು ಕಾಂಗ್ರೆಸ್ ಶಾಸಕರು-ಸಚಿವರ ಹಣದ ದುರಾಸೆಯೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದೆ. ಕಾಂಗ್ರೆಸ್ ವರಿಷ್ಠರು ಕಮಿಷನ್ ತನಿಖೆ ಮಾಡಲಿ
ಹಾವೇರಿ: ಝೀರೋ ಪರ್ಸೆಂಟ್ ಕಮಿಷನ್‌ನ ಅ ಧಿಕಾರ ಕೊಡುತ್ತೇನೆ ಎಂದು ರಾಹುಲ್ ಗಾಂಧಿಯೇ ಹೇಳಿದ್ದರು. ಆದರೆ ಇಲ್ಲಿ ಕಮಿಷನ್ ಪಡೆಯಲಾಗುತ್ತಿದೆ. ಈ ಬಗ್ಗೆ ಕೇಂದ್ರದ ಕಾಂಗ್ರೆಸ್ ನಾಯಕರು ತನಿಖೆ ಮಾಡಬೇಕು. ಇಲ್ಲವಾದರೆ ಕೇಂದ್ರದ ವರಿಷ್ಠರೇ ಇದರಲ್ಲಿ ಭಾಗಿಯಾಗಿದ್ದಾರೆ ಎಂಬಂತಾಗುತ್ತದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು. ಶಿಗ್ಗಾವಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ನಾವು ಗುತ್ತಿಗೆದಾರರಿಗೆ ಹಣ ನೀಡಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸುಳ್ಳು ಹೇಳಿದ್ದಾರೆ. ಮೂರು ವರ್ಷ ಹಣ ಬಿಡುಗಡೆ ಮಾಡಿದ್ದೇವೆ. 6,500 ಕೋಟಿ ರೂ. ಜತೆಗೆ ಕಳೆದ ನಾಲ್ಕೈದು ತಿಂಗಳ ಹಿಂದೆ 657 ಕೋಟಿ ರೂ. ಬಿಡುಗಡೆ ಮಾಡಿದ್ದೇವೆ. ಆಗ ಸಿದ್ದರಾಮಯ್ಯ ಸಿಎಂ ಆಗಿರಲಿಲ್ಲ. ಈಗ ಬಿಡುಗಡೆಯಾಗಬೇಕಾದ ಬಿಲ್‌ಗಳಿಗೂ ಕಮಿಷನ್ ಕೇಳಲಾಗುತ್ತಿದೆ. ಹೀಗಾಗಿ, ಇದರಲ್ಲೇನೋ ಅವ್ಯವಹಾರ ಇದೆ ಎಂದು ಅನ್ನಿಸುತ್ತಿದೆ. ಸುಮ್ಮನೆ ತನಿಖೆ ಮಾಡುತ್ತಿದ್ದೇವೆ ಎನ್ನುತ್ತಿದ್ದಾರೆ ಎಂದರು. ಬಿಜೆಪಿ ಸರಕಾರದ ರೈತಪರ ಯೋಜನೆ ಗಳಿಗೆ ಕಾಂಗ್ರೆಸ್ ತಡೆ ಹಾಕಿದೆ. ಇದು ರೈತ ವಿರೋಧಿ ಸರಕಾರ. ರೈತರ ಮಕ್ಕಳ ಶಿಕ್ಷಣಕ್ಕೆ ನೀಡುತ್ತಿದ್ದ ರೈತ ವಿದ್ಯಾ ನಿಧಿಯನ್ನು ನಿಲ್ಲಿಸಿದ್ದಾರೆ. ರೈತರ ಬದುಕಿಗೆ ಉಪಯೋಗವಾಗುವ ರೈತರ ಆವರ್ತ ನಿಧಿ ಕೂಡ ಸ್ಥಗಿತಗೊಂಡಿದೆ. ನಾವು ಇದರ ವಿರುದ್ಧ ಮುಂದೆ ಹೋರಾಟ ಮಾಡುತ್ತೇವೆ ಎಂದು ಹೇಳಿದರು.