ಯಳಂದೂರು: ಶ್ರಾವಣಮಾಸದ ಎರಡನೇ ಶನಿವಾರ ತಾಲೂಕಿನ ಪ್ರಸಿದ್ಧ ಬಿಳಿಗಿರಿ ರಂಗನಬೆಟ್ಟದ ಬಿಳಿಗಿರಿ ರಂಗನಾಥಸ್ವಾಮಿ ದೇವಸ್ಥಾನಕ್ಕೆ ಸಾವಿರಾರು ಭಕ್ತರು ಆಗಮಿಸಿ ದರ್ಶನ ಪಡೆದರು.
ವಿಶೇಷ ಪೂಜೆ: ಶ್ರಾವಣಮಾಸದ ಶನಿವಾರ ಬೆಳಗ್ಗೆಯಿಂದಲೇ ಬಿಳಿಗಿರಿರಂಗನಾಥಸ್ವಾಮಿ ಹಾಗೂ ಅಲಮೇಲಮ್ಮನವರಿಗೆ ವಿವಿಧ ಅಭಿಷೇಕ ಮಾಡಿ, ತುಳಸಿ ಸೇರಿ ವಿವಿಧ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಆ ನಂತರ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಶ್ರಾವಣ ಮಾಸ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆಯಿಂದಲೇ ಜಿಲ್ಲೆ ಸೇರಿ ಹೊರಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬೆಟ್ಟಕ್ಕೆ ಆಗಮಿಸಿ ದೇವರ ದರ್ಶನ ಪಡೆದರು.
ಇದರಿಂದ ದೇವಸ್ಥಾನದಲ್ಲಿ ಬೆಳಗ್ಗೆಯಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಜನ ಕಂಡುಬಂದರು. ಬೆಟ್ಟಕ್ಕೆ ಹೋಗಲು ಯಳಂದೂರು ಪಟ್ಟಣದಿಂದ ಹೆಚ್ಚಿನ ಸಂಖ್ಯೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆ ಕಲ್ಪಿಸಲಾಗಿತ್ತು.ಬೆಟ್ಟದ ದೇವಸ್ಥಾನ, ಕಮರಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಕಂಡು ಬಂದರು. ಜತೆಗೆ ರಥದ ಬೀದಿಯಲ್ಲಿ ಹೆಚ್ಚಿನ ಸಂಖ್ಯೆಯ ವಾಹನ ಕಂಡು ಬಂದಿತು. ದೇಗುಲದ ಸಮೀಪ ಇರುವ ಅನ್ನ ದಾಸೋಹದಲ್ಲಿ ಸಾವಿರಾರು ಭಕ್ತರಿಗೆ ಮಧ್ಯಾಹ್ನ ಪ್ರಸಾದ ವಿತರಣೆ ವ್ಯವಸ್ಥೆಯನ್ನು ಮಾಡಲಾಯಿತು.
ಮಹಿಳೆಯರೇ ಅಧಿಕ: ರಾಜ್ಯ ಸರ್ಕಾರ ಶಕ್ತಿ ಯೋಜನೆಯಡಿ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿಎಲ್ಲಾ ಮಹಿಳೆಯರಿಗೆ ಉಚಿತ ಬಸ್ ವ್ಯವಸ್ಥೆ ಘೋಷಿಸಿರುವ ಕಾರಣ ಮೈಸೂರು, ಮಂಡ್ಯ, ರಾಮನಗರ, ಬೆಂಗಳೂರು, ಸೇರಿ ಇತರೆ ಜಿಲ್ಲೆಗಳಿಂದ ಸಾವಿರಾರು ಮಹಿಳಾ ಭಕ್ತರು ಆಗಮಿಸಿದ್ದು ವಿಶೇಷವಾಗಿತ್ತು. ಪಟ್ಟಣದಿಂದ ಬಿಳಿಗಿರಿ ರಂಗನಬೆಟ್ಟಕ್ಕೆ ಕೆಎಸ್‌ಆರ್‌ಟಿಸಿ ವತಿಯಿಂದ ಹೆಚ್ಚುವರಿ ಬಸ್ ಬಿಡಲಾಗಿತ್ತು. ಆದರೂ ಭಕ್ತರಿಂದ ಬಸ್ ತುಂಬಿ ತುಳುಕುತ್ತಿದ್ದವು. ಬೆಟ್ಟದ ದೇಗುಲದಲ್ಲಿ ದೇವರ ದರ್ಶನ ಪಡೆಯಲು ತಾತ್ಕಾಲಿಕವಾಗಿ ಮರದಿಂದ ಬ್ಯಾರಿಕ್ಯಾಡ್ ನಿರ್ಮಿಸಲಾಗಿತ್ತು. ದಾಸೋಹ ಭವನದಲ್ಲೂ ಭಕ್ತರ ಕ್ಯೂ ಕಂಡು ಬಂದಿತು. ದೇವರ ದರ್ಶನ ಪಡೆದ ಭಕ್ತರು, ನಂತರ ಗರುಡೋತ್ಸವ ಸೇರಿದಂತೆ ಇತರೆ ಸೇವೆಮಾಡಿಸುತ್ತಿದ್ದ ದೃಶ್ಯ ಅಲ್ಲಲ್ಲಿ ಕಂಡು ಬಂದಿತು. ದಾಸಂದಿರು ಕಡ್ಲೆಪುರಿ, ಬೆಲ್ಲ, ಅಕ್ಕಿ, ಸೇರಿ ಇತರೆ ದವಸಧಾನ್ಯಗಳೊಂದಿಗೆ ದೇಗುಲದ ಸುತ್ತ ಬ್ಯಾಟೆಮನೆ ಸೇವೆಯಲ್ಲಿ ತೊಡಗಿದ್ದರು.