ಯಳಂದೂರು: ಪೌರಾಣಿಕ ಚಂಪಕಾರಣ್ಯದ ದೈನವಾಗಿ, ಸೋಲಿಗರ ಭಾವನಾಗಿ, ಕುಸುಮಾಲೆಯನ್ನು ಪ್ರೀತಿಸಿ, ಚಿಕ್ಕ ಜಾತ್ರೆಯಲ್ಲಿ ಇವಳೊಂದಿಗೆ ಒಪ್ಪಂದ ಮಾಡಿಕೊಂಡು, ದೊಡ್ಡ ಜಾತ್ರೆಯಲ್ಲಿ ಮದುವೆಯಾಗುವ ಪ್ರತೀತಿಯನ್ನು ಬುಡಕಟ್ಟು ಜನಾಂಗದೊಂದಿಗೆ ಬೆಸೆದುಕೊಂಡಿರುವ ಇದಕ್ಕಾಗಿಯೇ ನಮ್ಮ ಮನೆ ಮಗಳನ್ನು ದೇವರು ಮದುವೆಯಾದ ಎಂದು ಬಿಟ್ಟಿ ಸೇವೆಯನ್ನು ಮಾಡಿಸಿಕೊಳ್ಳುವ ವಿಭಿನ್ನ, ವಿಶಿಷ್ಟ ರಂಗಭಾವನ ಜಾತ್ರೆಗೆ ದಿನಗಣನೆ ಆರಂಭಗೊಂಡಿದೆ.
ತಾಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ ವರ್ಷಕ್ಕೆ ಬಿಳಿಗಿರಿರಂಗನಾಥ ಸ್ವಾಮಿಯ 2 ಜಾತ್ರೆಗಳು ನಡೆಯುತ್ತವೆ. ಸಂಕ್ರಾಂತಿ ಹಬ್ಬದ ಮಾರನೇ ದಿನ ಚಿಕ್ಕ ಜಾತ್ರೆ ನಡೆದರೆ, ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ದೊಡ್ಡ ಜಾತ್ರೆ ನಡೆಯುವ ವಾಡಿಕೆ ಇದೆ. ಕಳೆದ 5 ವರ್ಷಗಳಿಂದ ಈ ಜಾತ್ರೆ ನಡೆದಿಲ್ಲ. ದೊಡ್ಡ ರಥೋತ್ಸವ ಶಿಥಿಲಗೊಂಡಿದ್ದು, ದೇಗುಲದ ಜೀರ್ಣೋದ್ಧಾರ ಕಾಮಗಾರಿ ನಡೆದಿದ್ದು ಹಾಗೂ ಕೋವಿಡ್ ಹಿನ್ನೆಲೆಯಲ್ಲಿ ಜಾತ್ರೆ ನಡೆದಿಲ್ಲ. ಈಗ ದೇಗುಲ ಪುನಾರಂಭ ಗೊಂಡಿದೆ.
1 ಕೋಟಿ ರೂ. ವೆಚ್ಚದಲ್ಲಿ ದೊಡ್ಡ ರಥವನ್ನು ನಿರ್ಮಿಸಲಾಗಿದೆ. ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ, ಶಾಸಕ ಹಾಗೂ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆಗಳು ನಡೆದಿವೆ. ಈ ಬಾರಿ ಭಾರಿ ಜನಸ್ತೋಮ ಇಲ್ಲಿ ಸೇರಲಿದೆ ಎಂದು ಅಂದಾಜಿಸಲಾಗಿದ್ದು ಈಗಾಗಲೇ ಇದಕ್ಕೆ ಸಕಲ ಸಿದ್ಧತೆಗಳು ನಡೆದಿವೆ.
ಸೋಲಿಗರ ಭಾವ ರಂಗ: ಸೋಲಿಗರ ಹುಡುಗಿ ಕುಸುಮಾಲೆಯ ಸೌಂದರ್ಯಕ್ಕೆ ಸೋತು, ಅವಳನ್ನು ವರಿಸಿ ವಿವಾಹವಾಗುವ ರಂಗಪ್ಪ ಇಲ್ಲಿನ ಬುಡಕಟ್ಟು ಜನರ ಆರಾಧ್ಯ ದೈವನಾಗಿ ತಮ್ಮ ಮನೆ ಮಗನಂತೆ ದೇವರನ್ನು ಪೂಜಿಸುವ ವಾಡಿಕೆ ಇನ್ನೂ ರೂಢಿಯಲ್ಲಿದೆ. ಇದಕ್ಕೆ ಪೂರಕ ಎಂಬಂತೆ ಇನ್ನೂ ಕೂಡ ದೇವರ ಉತ್ಸವಾದಿ ಕಾರ್ಯಕ್ರಮಗಳಲ್ಲಿ ಉತ್ಸವ ಮೂರ್ತಿಯನ್ನು ಹೊರುವುದು, ರಥಕ್ಕೆ ದೊಡ್ಡದೊಡ್ಡ ಕಟ್ಟಿಗೆಗಳನ್ನು ಕಟ್ಟಿ ಅದನ್ನು ಅಲಂಕರಿಸುವುದು ಸೇರಿದಂತೆ ಅನೇಕ ವಿಧಿಗಳನ್ನು ಇಲ್ಲಿನ ಸೋಲಿಗರೇ ನೆರವೇರಿಸುವ ವಾಡಿಕೆ ಇದೆ. ಇದನ್ನು ತಮ್ಮ ಭಾವನೆಂದು ಕರೆಯುವ ಸೋಲಿಗ ಜನರು ಉಚಿತವಾಗಿ ಈ ಸೇವೆಯಲ್ಲಿ ಹತ್ತಾರು ದಿನ ತೊಡಗಿಕೊಳ್ಳುವುದರಿಂದ ಇದನ್ನು ಬಿಟ್ಟಿ ಸೇವೆ ಎಂದು ಕರೆಯಲಾಗುತ್ತದೆ. ಇದಕ್ಕೆ ಬದಲಾಗಿ ದೇಗುಲದಿಂದ ಇವರಿಗೆ ದವಸಧಾನ್ಯ, ಖಾರದಪುಡಿ ಸೇರಿದಂತೆ ಅನೇಕ ಆಹಾರ ಪದಾರ್ಥಗಳನ್ನು ನೀಡಲಾಗುತ್ತದೆ.
ಚಪ್ಪಲಿ ಆಶೀರ್ವಾದ ಇಲ್ಲಿನ ವಿಶೇಷ: ದೇಗುಲಕ್ಕೆ ಆಗಮಿಸುವ ಭಕ್ತರು ಇಲ್ಲಿರುವ ರಂಗಪ್ಪನ ದೊಡ್ಡ ಪಾದುಕೆಯಿಂದ ತಲೆ ಮೇಲೆ ಹೊಡೆಯಿಸಿಕೊಳ್ಳುವ ಸಂಪ್ರದಾಯ ವಿದೆ. ಇದನ್ನು ತಾಲೂಕಿನ ಬೂದಿತಿಟ್ಟು ಗ್ರಾಮದ ಮಾದಿಗ ಜನಾಂಗದವರು 3 ವರ್ಷಕ್ಕೊಮ್ಮೆ ತಯಾರಿಸಿ ಮೆರವಣಿಗೆ ಮಾಡಿ ದೇವಸ್ಥಾನಕ್ಕೆ ಅರ್ಪಿಸುವುದು ವಾಡಿಕೆ. ದೇಗುಲಕ್ಕೆ ಭೇಟಿ ನೀಡುವ ಪ್ರತಿಯೊಬ್ಬರೂ ಇದರಿಂದ ಹೊಡೆಯಿಸಿಕೊಂಡರೆ ಇಷ್ಟಾರ್ಥ ಸಿದ್ಧಿಸುತ್ತದೆ, ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದ್ದು ಈ ಸಂಪ್ರದಾಯ ಇಲ್ಲಿಗೆ ಭೇಟಿ ನೀಡುವ ಮಂತ್ರಿ ಮಹೋದ ಯರು, ಜನಪ್ರತಿನಿಧಿಗಳು, ಅಧಿಕಾರಿ ವರ್ಗ ಸೇರಿದಂತೆ ಎಲ್ಲರೂ ತಮ್ಮ ತಲೆ ಮೇಲೆ ಹೊಡೆಯಿಸಿಕೊಳ್ಳುವ ವಿಧಿ ಇನ್ನೂ ಇದೆ.
-ಫೈರೋಜ್‌ಖಾನ್