ಬಿಲ್‌ಗೇಟ್ಸ್ ಹೆಸರು ಕೇಳಿದ್ದಿರೇನ್ರೋ? – ಆ ಎಂಟನೇ ತರಗತಿಯ ಸ್ಕೂಲ್ ಮೇಷ್ಟ್ರು ಆ ಬೈಟು ಬ್ರದರ್ಸ್‌ಗೆ ಈ ಪ್ರಶ್ನೆ ಕೇಳಿದಾಗ, “ಸಾ ನಾವು ಸ್ಕೂಲ್ ಗೇಟ್ ಬಿಟ್ರೆ, ಬೇರೆ ಯಾವ್ ಗೇಟ್ಸ್ ಬಗ್ಗೆನೂ ಕೇಳಿಲ್ಲ ಸಾ..’ ಅನ್ನುವ ಅವರು, ನಮ್ಮಿಬ್ರನ್ನ ಬಿಟ್ಟು, ಆ “ಬಿಲ್‌ಗೇಟ್ಸ್’ನ ಹೊಗಳ್ತಾರೆ ಅಂದರೆ, ನಾವೂನು ಬಿಲ್‌ಗೇಟ್ಸ್ ಥರ ಯಾಕೆ ಆಗ್ಬಾರ್ದು? ಈ ಪ್ರಶ್ನೆ ಇಟ್ಟುಕೊಂಡೇ ಅವ್ರು ಆ ಹಳ್ಳಿ ಬಿಟ್ಟು ಬೆಂಗಳೂರು ಸೇರ್ತಾರೆ. ಆಮೇಲೆ ಏನೆಲ್ಲಾ ಆಗುತ್ತೆ ಅನ್ನೋದೇ ಕಥೆ.
ಶೀರ್ಷಿಕೆಯೇ ಹೇಳುವಂತೆ, ಇದೊಂದು ಹಾಸ್ಯಮಯ ಸಿನಿಮಾ. ಒಂದೇ ಮಾತಲ್ಲಿ ಹೇಳುವುದಾದರೆ, ಮನರಂಜನೆ ಬಯಸಿದವರಿಗೆ “ಬಿಲ್‌ಗೇಟ್ಸ್’ ಮೋಸ ಮಾಡಲ್ಲ. ಹಾಗಂತ, ಸಿನಿಮಾದುದ್ದಕ್ಕೂ ಮನರಂಜನೆಯನ್ನೇ ನಿರೀಕ್ಷಿಸುವಂತಿಲ್ಲ. ಮನರಂಜನೆ ಜೊತೆಯಲ್ಲಿ ಒಂದು ಸಣ್ಣ ಸಂದೇಶವೂ ಇದೆ. ಆ ಸಂದೇಶದ ಬಗ್ಗೆ ಸಣ್ಣ ಕುತೂಹಲವಿದ್ದರೆ, “ಬಿಲ್‌ಗೇಟ್ಸ್’ ಕೊಡುವ ಹಾವಳಿಯನ್ನೊಮ್ಮೆ ನೋಡಲ್ಲಡ್ಡಿಯಿಲ್ಲ. ಬಿಲ್‌ಗೇಟ್ಸ್ ನಂಬಿ ಹೋದವರಿಗೆ ನಗುವಿನ ಹೂರಣ ಮಿಸ್ ಆಗಲ್ಲ. ಮೊದಲರ್ಧ ಬಿಲ್‌ಗೇಟ್ಸ್ ಮಾಡುವ ತರಲೆ, ಕೀಟಲೆಗಳು ನಗುವಿನ ಅಲೆಗೆ ಕಾರಣವಾಗುತ್ತವೆ. ಹಾಗಂತ, ದ್ವಿತಿಯಾರ್ಧ ಅದೇ ಹೂರಣವಿದೆ ಅಂದುಕೊಳ್ಳುವಂತಿಲ್ಲ. ಕೊಂಚ ತಾಳ್ಮೆಗೆಡಿಸುವ ಎಪಿಸೋಡ್ ಎದುರಾಗಿ, ನೋಡುಗರನ್ನು ಅತ್ತಿತ್ತ ನೋಡುವಂತೆ ಮಾಡುತ್ತದೆ. ಆದರೂ, ಕೊನೆಯ ಇಪ್ಪತ್ತು ನಿಮಿಷ ಬರುವ ಕ್ಲೈಮ್ಯಾಕ್ಸ್‌ನಲ್ಲಿ ಬಿಲ್ ಗೇಟ್ಸ್ ನೋಡುಗರನ್ನು ತಕ್ಕಮಟ್ಟಿಗೆ ಭಾವುಕರನ್ನಾಗಿಸುತ್ತಾರೆ. ಮೊದಲರ್ಧದ ಹಾಸ್ಯ, ದ್ವಿತಿಯಾರ್ಧವೂ ಮುಂದುವರೆದಿದ್ದರೆ, ಇದೊಂದು ಪೂರ್ಣಪ್ರಮಾಣದ ಮನರಂಜನೆ ಸಿನಿಮಾ ಆಗುತ್ತಿತ್ತು.
ಆದರೂ, ಸಮಾಜಕ್ಕೊಂದು ಸಂದೇಶ ಸಾರುವ ಅಂಶ ಕೂಡ ಕೆಲಹೊತ್ತು, ನೋಡುಗರನ್ನು ಕಾಡುತ್ತದೆ. ಆ ಕಾಡುವಿಕೆಗೆ ಕಾರಣ, ನೂರಾರು ಆಸೆ, ಆಕಾಂಕ್ಷೆ ಹೊತ್ತ ಹುಡುಗಿಯೊಬ್ಬಳ ಆಕಸ್ಮಿಕ ಸಾವು. ಆಕೆ ಯಾಕೆ ಸತ್ತಳು, ಮುಂದೇನಾಗುತ್ತೆ ಎಂಬುದಕ್ಕೆ “ಬಿಲ್‌ಗೇಟ್ಸ್’ ನೋಡಿದರೆ ಉತ್ತರ ಸಿಗುತ್ತೆ. ಚಿತ್ರದಲ್ಲಿ ಏನಿಲ್ಲ, ಏನಿದೆ ಎನ್ನುವುದಕ್ಕಿಂತ ನೋಡುಗರನ್ನು ಎಷ್ಟರಮಟ್ಟಿಗೆ ನಗಿಸುತ್ತದೆ ಅನ್ನೋದು ಮುಖ್ಯ. ಅದನ್ನು “ಬಿಲ್‌ಗೇಟ್ಸ್’ ಚಾಚು ತಪ್ಪದೆ ತಮ್ಮ ಕೆಲಸವನ್ನು ನಿರ್ವಹಿಸಿದ್ದಾರೆ. ಒಬ್ಬರಿಗಿಂತ ಒಬ್ಬರು ನಗಿಸುವಲ್ಲಿ ಯಶಸ್ವಿ ಎನ್ನಬಹುದು. ಆ ನಗುವಿಗೆ ಕಾರಣ, ಸಂಭಾಷಣೆ ಹಾಗು ಸಮಯಕ್ಕೆ ಸರಿಯಾಗಿ ಸಿಂಕ್ ಆಗುವ ಸೀನ್‌ಗಳು. ಕೇವಲ 8 ನೇ ತರಗತಿ ಓದಿದ ಆ ಹಳ್ಳಿ ಹುಡುಗರು, ಸಾಫ್ಟ್ವೇರ್ ಎಂಜಿನಿಯರ್ ಆಗುವ ಕನಸು ಕಾಣುವುದೇ ಅದ್ಭುತ. ಆ ಹಾಸ್ಯ ಪ್ರಸಂಗವನ್ನು ಅಷ್ಟೇ ನೀಟ್ ಆಗಿ ತೋರಿಸಿರುವುದು ನಿರ್ದೇಶಕರ ಶ್ರಮಕ್ಕೆ ಸಾಕ್ಷಿ.
ಬರೀ ಮಾತುಗಳಲ್ಲೇ ನಗಿಸುವ ಧೈರ್ಯ ಮೆಚ್ಚಲೇಬೇಕು. ಅಲ್ಲಲ್ಲಿ ಡಬ್ಬಲ್ ಮೀನಿಂಗ್ ಮಾತುಗಳ ಸದ್ದು ಕೂಡ ಜೋರಾಗಿದೆ. ದ್ವಿತಿಯಾರ್ಧದಲ್ಲಿ ಬರುವ ಯಮಲೋಕದ ಸೆಟ್ ಮತ್ತು ಗ್ರಾಫಿಕ್ಸ್ ಮೆಚ್ಚಲೇಬೇಕು. ಆದರೆ, ಆ ಎಪಿಸೋಡ್ ಗೆ ಸ್ವಲ್ಪ ಕತ್ತರಿ ಹಾಕಬಹುದಿತ್ತು. ನೋಡ ನೋಡುತ್ತಿದ್ದಂತೆಯೇ, ಚಿತ್ರ ಹೊಸ ತಿರುವು ಪಡೆದುಕೊಳ್ಳುತ್ತೆ. ಹಾಸ್ಯವಾಗಿಯೇ ಸಾಗುವ ಸಿನಿಮಾ, ಇದ್ದಕ್ಕಿದ್ದಂತೆಯೇ ಹಾರರ್ ಅಂಶಗಳಿಂದ ತನ್ನ ದಿಕ್ಕನ್ನೇ ಬದಲಿಸುತ್ತೆ. ಅಲ್ಲೂ ಭಯಾನಕ ಅಂಶಗಳಿವೆ ಅಂದುಕೊಂಡರೆ, ಆ ಊಹೆ ತಪ್ಪು. ಒಂದು ಹೆಣ್ಣು ದೆವ್ವ ಮತ್ತು ಒಂದು ಮನೆ. ಆ ಮನೆಯೊಳಗೆ ಸೇರಿಕೊಳ್ಳುವ ಹೀರೋಗಳು, ಒಂದಷ್ಟು ಪಾತ್ರಗಳ ನಡುವಿನ ಮಾತುಕತೆಗಳು ಇನ್ನಷ್ಟು ಮಜ ಎನಿಸುತ್ತವೆ. ಕೆಲ ಸೀನ್‌ಗಳಿಗೆ ಕತ್ತರಿ ಬಿದ್ದಿದ್ದರೆ, “ಬಿಲ್‌ಗೇಟ್ಸ್’ ಇನ್ನಷ್ಟು ಮಜ ಎನಿಸುತ್ತಿದ್ದರು.
ಆದರೂ, ಒಂದು ಫೈಟ್ ಕೂಡ ಇಲ್ಲದೆಯೇ, ನಗಿಸುತ್ತಲೇ, ಸಣ್ಣ ಸಂದೇಶಕ್ಕೆ ಕಾರಣವಾಗುವ ಬಿಲ್‌ಗೇಟ್ಸ್ ಇಡುವ ಕಚಗಳಿಯನ್ನು ಅನುಭವಿಸಬಹುದು. ಚಿಕ್ಕಣ್ಣನ ಕಾಮಿಡಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಈ ಹಿಂದಿನ ಚಿತ್ರಗಳಲ್ಲಿನ ಹಾವ-ಭಾವ ಇಲ್ಲೂ ಮುಂದುವರೆದಿದೆ. ಶಿಶಿರ ಡ್ಯಾನ್ಸ್ ಹಾಗೂ ನಟನೆಯಲ್ಲಿ ಗಮನಸೆಳೆಯುತ್ತಾರೆ. ರೋಜಾ, ಅಕ್ಷರಾ ಇರುವಷ್ಟು ಕಾಲ ಇಷ್ಟವಾಗುತ್ತಾರೆ. ಉಳಿದಂತೆ ಕಾಣಿಸಿಕೊಳ್ಳುವ ಪ್ರತಿ ಪಾತ್ರ ಕೂಡ “ಬಿಲ್ ಗೇಟ್ಸ್’ ವೇಗಕ್ಕೆ ಹೆಗಲು ಕೊಡುತ್ತವೆ. ನೋಬಿನ್ ಪೌಲ್ ಹಾಡಿಗಿಂತ ಹಿನ್ನೆಲೆ ಸಂಗೀತದಲ್ಲಿ ಸ್ಕೋರ್ ಮಾಡಿದ್ದಾರೆ. ರಾಕೇಶ್ ಸಿ.ತಿಲಕ್ ಕ್ಯಾಮೆರಾ ಪರವಾಗಿಲ್ಲ.
-ವಿಭ