ಹರಿಹರ: ಹೊಸ ವಸಂತದ ಚಿಲುಮೆಯನ್ನು ಹೊತ್ತು ತರುವ ಯುಗಾದಿ ಸಂಭ್ರಮಕ್ಕೆ ಶ್ಯಾವಿಗೆ ಸವಿ ಅತ್ಯಗತ್ಯ. ಅದರಲ್ಲೂ ಯುಗಾದಿಯ ಸಡಗರಕ್ಕೆಂದೇ ಸಿದ್ಧಗೊಳ್ಳುವ ಶ್ಯಾವಿಗೆ ಬಗ್ಗೆ ಪುರಾಣಗಳಲ್ಲೂ ಉಲ್ಲೇಖವಿದ್ದು, ಇದೊಂದು ಸಾಂಪ್ರದಾಯಿಕ ಭೋಜನ ಪದ್ಧತಿಯಾಗಿದೆ. ಇಂದಿನ ಆಧುನಿಕ ಯುಗದಲ್ಲೂ ತಾಲೂಕಿನ ಬಿಳಸನೂರು ಗ್ರಾಮದಲ್ಲಿ ಯುಗಾದಿ ಹಬ್ಬದಂದು ಗ್ರಾಮಸ್ಥರೆಲ್ಲಾ ಒಟ್ಟಾಗಿ ದೊಡ್ಡ ಒತ್ತು ಮಣೆಯಲ್ಲಿ ನೇಯುವ ರಾಗಿ ಹಿಟ್ಟಿನ ಶ್ಯಾವಿಗೆ ಮಾಡಿಕೊಂಡು ಊಟ ಮಾಡುವುದು ಮಾಸದ ಗ್ರಾಮೀಣ ಸೊಗಡಿಗೆ ಸಾಕ್ಷಿಯಾಗಿದೆ.
ಏನಿದು ಶ್ಯಾವಿಗೆ ಸಂಭ್ರಮ: ಹಬ್ಬಕ್ಕೆ ಮೂರ್‍ನಾಲ್ಕು ದಿನವಿದ್ದಾಗ ರಾಗಿ ತಂದು ಸ್ವತ್ಛಗೊಳಿಸಿ, ಅರ್ಧ ದಿನ ನೆನೆಸಿ, ಅರ್ಧ ದಿನ ನೆರಳಲ್ಲಿ ಒಣಗಿಸಿ, ಗಿರಿಣಿಯಲ್ಲಿ ಹಿಟ್ಟು ಮಾಡಿಸಿದಾಗ ಅದಕ್ಕೆ ಗ್ರಾಮ್ಯ ಭಾಷೆಯಲ್ಲಿ ವಡ್ಡರಾಗಿ ಹಿಟ್ಟು ಎನ್ನುತ್ತಾರೆ. ಹಬ್ಬದ ದಿನ ಬೆಳಗಾಗುತ್ತಲೆ ದೊಡ್ಡ ಪಾತ್ರೆಯ ಕುದಿಯುವ ನೀರಿನೊಳಗೆ ಹಿಟ್ಟು ಸುರುವಿ, ಮುಚ್ಚಳ ಹಾಕಿ, ಕುದಿ ನೀರು ಹಾಗೂ ಆವಿಯಲ್ಲಿ ಬೇಯಿಸಲಾಗುತ್ತದೆ.
ನಂತರ ಹೊರತೆಗೆದು ದೊಡ್ಡ ಮುಟಿಗೆ ಗಾತ್ರದ ಉಂಡೆ ಮಾಡಿ, ಅವುಗಳನ್ನು ಮತ್ತೆ ನೀರಿನಲ್ಲಿ ಹದವಾಗಿ ಬೇಯಿಸಿದಾಗ, ಅವುಗಳಿಗೆ ಸಿದ್ದಪ್ಪ ಎಂದು ಕರೆಯುತ್ತಾರೆ.
ಒತ್ತು ಶ್ಯಾವಿಗೆ ತಯಾರಿಗೆಂದೆ ಗ್ರಾಮದಲ್ಲಿ ಹಿಂದೆ ಹಿರಿಯರು ನಿರ್ಮಿಸಿರುವ ಬೃಹತ್ ಗಾತ್ರದ ಕಟ್ಟಿಗೆಯ ಎರಡು, ಮೂರು ಅಚ್ಚು ಅಥವಾ ಶ್ಯಾವಿಗೆ ಮಣೆಗಳಿದ್ದು, ಅವುಗಳನ್ನು ಯುಗಾದಿಯಂದು ಮಾತ್ರ ಹೊರತೆಗೆದು ಸ್ವಚ್ಛಗೊಳಿಸಿ ವಿಶಾಲ ಜಾಗದಲ್ಲಿ ಹೂಡುತ್ತಾರೆ. ಈ ಮಣೆಯ ಮಧ್ಯ ಭಾಗದಲ್ಲಿರುವ ಅಚ್ಚಿನಲ್ಲಿ ಸಿದ್ದಪ್ಪಗಳನ್ನು (ಬೇಯಿಸಿದ ರಾಗಿ ಉಂಡೆ) ತುಂಬಿ ಮೇಲಿರುವ ಮರದ ಹಿಡಿಕೆಯನ್ನು ಬಿಗಿಯಾಗಿ ಕೆಳಗೆ ಒತ್ತಿದಾಗ, ಬಿಸಿ ಬಿಸಿ ಶ್ಯಾವಿಗೆಯು ಎಳೆ ಎಳೆಯಾಗಿ ತಳದಲ್ಲಿ ಬೀಳುತ್ತವೆ. ಶ್ಯಾವಿಗೆ ಒತ್ತುವುದು 8-10 ಜನರು ಸೇರಿ ಮಾಡುವ ಕಠಿಣ ಕಾರ್ಯವಾದ್ದರಿಂದ ಹರೆಯದ ಹುಡುಗರನ್ನೆ ಇದಕ್ಕೆ ನೇಮಿಸಲಾಗುತ್ತದೆ. ಹೀಗೆ ವಿಶಿಷ್ಟವಾಗಿ ತಯಾರಿಸುವ ಈ ಶ್ಯಾವಿಗೆಯನ್ನು ಬೇವು-ಬೆಲ್ಲದ ಹಾಲು ಬೆರೆಸಿಕೊಂಡು ತಿನ್ನುವುದು ಬಾಯಿಗೆ ಬಲು ರುಚಿ, ದೇಹಕ್ಕೂ ತಂಪು, ಜೀರ್ಣ ಕ್ರಿಯೆಗಂತೂ ಸಿದ್ದ ಔಷಧ. ಇಂತಹ ಶ್ಯಾವಿಗೆ ಮಾಡುವುದು ಅಪರೂಪವಾದ್ದರಿಂದ ಪರಸ್ಥಳದ ಬಂಧು-ಬಾಂಧವರಿಗೂ ಒಯ್ದು ಕೊಡುವುದು ನಡೆದು ಬಂದಿದೆ.