ಬೀಳಗಿ: ಇಲ್ಲಿಯ ತಾಪಂ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಲ್ಲಿ ಪೈಪೋಟಿ ಶುರುವಾಗಿದೆ. ಜು. 12ರಂದು ನಡೆಯುವ ಚುನಾವಣೆ ನಡೆಯಲಿದ್ದು, ತಾಪಂನಲ್ಲಿ ಸ್ಪಷ್ಟ ಬಹುಮತ ಹೊಂದಿರುವ ಕಾಂಗ್ರೆಸ್‌ನಲ್ಲಿ ಅಧ್ಯಕ್ಷ ಸ್ಥಾನಕ್ಕಾಗಿ ಗುಂಪುಗಾರಿಕೆ ನಡೆಯುತ್ತಿದ್ದು, ಪಕ್ಷದ ಮುಖಂಡರನ್ನು ನಿದ್ದೆಗೆಡಿಸಿದೆ.
ಒಟ್ಟು ಸದಸ್ಯ ಬಲ: ಸ್ಥಳೀಯ ತಾಪಂ ಒಟ್ಟು 15 ಸದಸ್ಯ ಬಲ ಹೊಂದಿದೆ. ಕಾಂಗ್ರೆಸ್ 11 ಹಾಗೂ ಬಿಜೆಪಿ 4 ಸದಸ್ಯ ರನ್ನು ಹೊಂದಿದ್ದು, ತಾಪಂ ಅಧಿಕಾರ ನಡೆಸಲು ಕಾಂಗ್ರೆಸ್ ನಿಚ್ಚಳ ಬಹುಮತ ಹೊಂದಿದೆ. ಈಗಾಗಲೇ ಕಾಂಗ್ರೆಸ್‌ನ ಶ್ರೀಶೈಲ ಸೂಳಿಕೇರಿ 33 ತಿಂಗಳು ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದು, ಪಕ್ಷದ ಒಳ ಒಪ್ಪಂದದಂತೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇನ್ನುಳಿದ 20 ತಿಂಗಳ ಅವಧಿಗೆ ಕಾಂಗ್ರೆಸ್ ಸ್ವಪಕ್ಷಿಯರ ಲ್ಲಿಯೇ ಪೈಪೋಟಿ ನಡೆಯುತ್ತಿದೆ.
ಬಿಡಿಸದ ಕಗ್ಗಂಟು: ಪ್ರವರ್ಗ 2 ಅ ಸಾಮನ್ಯ ವರ್ಗಕ್ಕೆ ಮೀಸಲಾಗಿರುವ ತಾಪಂ ಅಧ್ಯಕ್ಷ ಸ್ಥಾನಕ್ಕಾಗಿ ಕಾಂಗ್ರೆಸ್‌ನಲ್ಲಿ ನಾಲ್ವರು ಆಕಾಂಕ್ಷಿಗಳು ಇರುವ ಕುರಿತು ಕಾಂಗ್ರೆಸ್ ಪಡಸಾಲೆಯಲ್ಲಿ ಕೇಳಿ ಬರುತ್ತಿರುವ ಮಾತು. ಈ ಬಾರಿ ಅಧ್ಯಕ್ಷ ಸ್ಥಾನ ಅಲ್ಪಸಂಖ್ಯಾತರಿಗೆ ನೀಡಬೇಕೆಂದು ಕೆಲವರು ತೀವ್ರ ಜಿದ್ದಿಗೆ ಬಿದ್ದಿದ್ದಾರೆ ಹಾಗೂ ಹಿಂದುಳಿದ ವರ್ಗದವರಿಗೆ ಅಧ್ಯಕ್ಷ ಸ್ಥಾನ ಬೇಕೆಂದು ಕೆಲವರು ಪಟ್ಟು ಹಿಡಿದಿದ್ದಾರೆ. ಹೀಗಾಗಿ ಕಾಂಗ್ರೆಸ್ ವಲಯದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಗುದ್ದಾಟ ಜೋರಾಗಿದೆ.
ಯಾರಾಗಲಿದ್ದಾರೆ ಅಧ್ಯಕ್ಷ?: ಅಲ್ಪಸಂಖ್ಯಾತ ಸಮುದಾಯದ ಶರೀಫ್‌ಬೇಗಂ ಬಾವಾಖಾನ್, ಡೋಂಗ್ರಿಸಾಬ ಕುದರಿ, ನೂರಜಾನ್ ನದಾಫ ಹಾಗೂ ಹಿಂದುಳಿದ ವರ್ಗದ ರಾಮಣ್ಣ ಬಿರಾದಾರ ಅಧ್ಯಕ್ಷ ಗಾದಿಯ ರೇಸ್‌ನಲ್ಲಿದ್ದಾರೆ. ಒಟ್ಟು 15 ಸದಸ್ಯ ಬಲದ ತಾಪಂನಲ್ಲಿ ಬಹುಮತಕ್ಕೆ 8 ಸದಸ್ಯರು ಬೇಕು. ಆದರೆ, ರಾಜಕೀಯ ಕ್ಷೀಪ್ರ ಬೆಳವಣಿಗೆಯಲ್ಲಿ ಯಾರಿಗೆ ಅದೃಷ್ಟ ಒಲಿಯುತ್ತದೆ ಎನ್ನುವುದು ಮಾತ್ರ ನಿಗೂಢ.
•ರವೀಂದ್ರ ಕಣವಿ