ಬೈಲಹೊಂಗಲ: ಅಪಘಾತಕ್ಕೆ ಬಲಿಯಾಗಿದ್ದ ಬೆಳಗಾವಿಯ ಮರಾಠಾ ಇನ್ ಫೆಂಟ್ರಿಯಲ್ಲಿ (ಎಂಎಲ್‌ಐಆರ್‌ಸಿಯಲ್ಲಿ) ಸೇವೆ ಸಲ್ಲಿಸುತ್ತಿದ್ದ, ಪ್ರಕಾಶ ಮಡಿವಾಳಪ್ಪ ಸಂಗೊಳ್ಳಿ (28) ಅವರ ಅಂತ್ಯಸಂಸ್ಕಾರ ಸವದತ್ತಿ ತಾಲೂಕಿನ ಹೊಸೂರ ಗ್ರಾಮದಲ್ಲಿ ಸರಕಾರಿ ಗೌರವದೊಂದಿಗೆ ಶುಕ್ರವಾರ ನೆರವೇರಿತು.
ಪತ್ನಿಯ ಸೀಮಂತಕ್ಕೆಂದು ರಜೆಯ ಮೇಲೆ ತೆರಳುತ್ತಿದ್ದ ಯೋಧ ಪ್ರಕಾಶ ಅವರು ಗುರುವಾರ ಅಪಘಾತಕ್ಕೆ ಬಲಿಯಾಗಿದ್ದರು.
ಭಾನುವಾರ ನಡೆಯಬೇಕಾಗಿದ್ದ ಪತ್ನಿಯ ಸೀಮಂತ ಕಾರ್ಯಕ್ರಮಕ್ಕಾಗಿ ರಜೆಯ ಮೇಲೆ ಊರಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ದ್ವಿಚಕ್ರ ವಾಹನಕ್ಕೆ ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಹತ್ತಿರ ಗುರುವಾರ ಅಪರಿಚಿತ ವಾಹನವೊಂದು ಢಿಕ್ಕಿ ಹೊಡೆದು ಹೋದ ಪರಿಣಾಮ ಪ್ರಕಾಶ ಸ್ಥಳದಲ್ಲೇ ಸಾವಿಗೀಡಾಗಿದ್ದರು. ಹಿರೇಬಾಗೇವಾಡಿಯ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
2013 ಸೆಪ್ಟಂಬರ್ ನಲ್ಲಿ ಸೇವೆಗೆ ಸೇರಿದ್ದ ಪ್ರಕಾಶ ವಿವಿಧೆಡೆ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಪ್ರಕಾಶ ಅವರ ಪಾರ್ಥಿವ ಶರೀರವನ್ನು ಹಿರೇಬಾಗೇವಾಡಿಯಿಂದ ರಸ್ತೆಯ ಮೂಲಕ ಗ್ರಾಮಕ್ಕೆ ಮೆರವಣಿಗೆ ಮಾಡಿ ತರಲಾಯಿತು. , ಗ್ರಾಪಂ ಅಧ್ಯಕ್ಷರು, ಸದಸ್ಯರು, ಪಿಡಿಒ, ಪುಷ್ಪ ನಮನ ಸಲ್ಲಿಸಿದರು.
ತಹಶೀಲ್ದಾರ್ ಪ್ರಶಾಂತ ಪಾಟೀಲ, ಉಪತಹಶೀಲ್ದಾರ ಡಿ.ಬಿ.ಅಲ್ಲಯ್ಯನವರಮಠ, ಕಂದಾಯ ನೀರಿಕ್ಷಕ ಆರ್.ಎಸ್.ಪಾಟೀಲ, ಗ್ರಾಮ ಲೆಕ್ಕಿಗ ಸತೀಶ್, ಗ್ರಾಮ ಸಹಾಯಕ ಮಹಾದೇವಪ್ಪ ಇಂಗಳಗಿ ಯೋಧನ ಮನೆಗೆ ಪಾರ್ಥಿವ ಶರೀರ ಆಗಮಿಸಿದಾಗ ಗೌರವ ನಮನ ಸಲ್ಲಿಸಿದರು.
ಅದ್ದೂರಿ ಮೆರವಣಿಗೆ
ಪಾರ್ಥಿವ ಶರೀರವನ್ನು ಸಕಲ ಸರಕಾರಿ ಗೌರವಗಳೊಂದಿಗೆ ವಾಹನದ ಮೂಲಕ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಯುವಕರು ಸೇರಿದಂತೆ ಗ್ರಾಮಸ್ಥರು ಅಮರ್ ಹೇ .. ಅಮರಹೇ .ಪ್ರಕಾಶ ಅಮರ ಹೇ ..ಎಂಬ ಘೋಷಣೆಗಳು ಮುಗಿಲು ಮುಟ್ಟಿದವು. ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿದ್ದ, ರಸ್ತೆ ಪಕ್ಕದಲ್ಲಿ ನಿಂತಿದ ಜನರು ಕಣ್ಣೀರು ಸುರಿಸಿದರು. ಮಾಜಿ ಶಾಸಕ ಜಗದೀಶ ಮೆಟಗುಡ್ಡ, ಕಾಂಗ್ರೆಸ್ ಮುಖಂಡ ಬಸವರಾಜ ಕೌಜಲಗಿ, ವಿವಿಧ ಜನ ಪ್ರತಿನಿಧಿಗಳು ಗೌರವ ವಂದನೆ ಸಲ್ಲಿಸಿದರು.
ಮುಗಿಲು ಮುಟ್ಟಿದ ರೋದನ
ಯೋಧನ ಪಾರ್ಥಿವ ಶರೀರ ಗ್ರಾಮಕ್ಕೆ ತಲಪುತ್ತಿದಂತೆ ಕುಟುಂಬದ ಸದಸ್ಯರ ರೋದನ ಮುಗಿಲು ಮುಟ್ಟಿತು. ಪತ್ನಿ, ತಾಯಿ, ತಂದೆ, ಸಂಬಂಧಿಕರ ರೋದನ ಮುಗಿಲು ಮುಟ್ಟಿತು.
ಇತ್ತಿಚಿಗೆ ಬೆಳಗಾವಿಗೆ ವರ್ಗವಾಗಿದ್ದ ಪ್ರಕಾಶ ಅವರು ತಂದೆ ಮಡಿವಾಳಪ್ಪ, ತಾಯಿ ಕಸ್ತೂರೆವ್ವ, ತುಂಬು ಗರ್ಭಿಣಿ ಪತ್ನಿ ಚೆನ್ನಮ್ಮ ಅವರನ್ನು ಅಗಲಿದ್ದಾರೆ.