Advertisement

Bilagi ಭೀಕರ ಅಪಘಾತ; ಯಮನಂತೆ ಬಂದ ಟಿಪ್ಪರ್ ; ಒಂದೇ ಕುಟುಂಬದ ಐವರು ಸಾವು

10:03 PM Apr 14, 2024 | Team Udayavani |

ಬಾಗಲಕೋಟೆ : ಹೊಲದಲ್ಲಿ ಕೃಷಿ ಕೂಲಿ ಕಾರ್ಯ ಮುಗಿಸಿ, ಸಂಜೆ ಮನೆಗೆ ಹೊರಟ್ಟಿದವರ ಬಾಳಿಗೆ ಯಮನಂತೆ ಬಂದ ಮಣ್ಣು ತುಂಬಿದ್ದ ಟಿಪ್ಪರ್ ಪಲ್ಟಿಯಾಗಿ ಒಂದೇ ಕುಟುಂಬದ ಐವರು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಜಿಲ್ಲೆಯ ಬೀಳಗಿ ತಾಲೂಕಿನ ಯತ್ನಟ್ಟಿ ಕ್ರಾಸ್ ಬಳಿ ರವಿವಾರ ತಡರಾತ್ರಿ ಸಂಭವಿಸಿದೆ.

Advertisement

ಮೃತಪಟ್ಟವರನ್ನು ಬೀಳಗಿ ತಾಲೂಕು ಬಾದರದಿನ್ನಿ ಗ್ರಾಮದ ಯಂಕಪ್ಪ ಶಿವಪ್ಪ ತೋಳಮಟ್ಟಿ (72), ಪತ್ನಿ ಯಲ್ಲವ್ವ ಯಂಕಪ್ಪ ತೋಳಮಟ್ಟಿ (66), ಪುತ್ರ ಪುಂಡಲೀಕ ಯಂಕಪ್ಪ ತೋಳಮಟ್ಟಿ (40), ಪುತ್ರಿ ನಾಗವ್ವ ಅಶೋಕ ಬಮ್ಮನ್ನವರ, ನಾಗವ್ವಳ ಪತಿ ಮತ್ತು ಯಂಕಪ್ಪ ಅವರ ಅಳಿಯ ಅಶೋಕ ನಿಂಗಪ್ಪ ಬಮ್ಮನ್ನವರ (48) ಎಂದು ಗುರುತಿಸಲಾಗಿದೆ.

ಯಂಕಪ್ಪ ತೋಳಮಟ್ಟಿ ಅವರ ಮಗಳು, ಅಳಿಯ ಸಹಿತ ಐವರೂ, ಹೊಲದಲ್ಲಿ ಕೆಲಸ ಮುಗಿಸಿಕೊಂಡು, ಮರಳಿ ತಮ್ಮೂರು ಬಾದರದಿನ್ನಿಗೆ ತೆರಳಲು ಯತ್ನಟ್ಟಿ ಕ್ರಾಸ್ ಬಳಿ ರಸ್ತೆಯ ಪಕ್ಕದಲ್ಲಿ ನಿಂತಿದ್ದರು.

ಆಗ ಮಣ್ಣು ತುಂಬಿಕೊಂಡು ವೇಗವಾಗಿ ಬರುತ್ತಿದ್ದ ಟಿಪ್ಪರ್ ವಾಹನದ ಟೈರ್ ಸ್ಪೋಟಗೊಂಡು, ರಸ್ತೆ ಪಕ್ಕದಲ್ಲಿ ನಿಂತಿದ್ದ ಐವರ ಮೇಲೆ ಪಲ್ಟಿಯಾಗಿದೆ. ಮಣ್ಣಿನಡಿ ಸಿಲುಕಿದ ಐವರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಟಿಪ್ಪರ್ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಯಮನಂತೆ ಬಂದ ಟಿಪ್ಪರ್ :
ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಬಾದರದಿನ್ನಿ, ಯತ್ನಟ್ಟಿಯ ನೂರಾರು ಜನರು ಸ್ಥಳಕ್ಕೆ ಧಾವಿಸಿ, ಮಣ್ಣಿನಡಿ ಸಿಲುಕಿದ್ದ ಶವಗಳನ್ನು ಹೊರ ತಗೆಯಲು ಪೊಲೀಸರಿಗೆ ನೆರವಾದರು. ಬಾದರದಿನ್ನಿ ಗ್ರಾಮದ ನೂರಾರು ಜನರು, ಶವಗಳ ಎದುರು, ರೋಧಿಸುತ್ತಿದ್ದರು. ಎಲ್ಲಿಂದ ಬಂತೋ ಯಪ್ಪಾ ಈ ಟಿಪ್ಪರ್ ಎಂದು ಕಣ್ಣೀರು ಹಾಕಿದರು. ಇನ್ನೇನು 10 ನಿಮಿಷ ಕಳೆದಿದ್ದರೆ, ಅವರೆಲ್ಲ ಮನೆ ಸೇರುವವರಿದ್ದರು. ಆದರೆ, ಯಮನಂತೆ ಬಂದ ಟಿಪ್ಪರ, ಐವರ ಬಲಿ ಪಡೆದಿದೆ.

Advertisement

ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ, ಬೀಳಗಿ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಮಣ್ಣಿನಡಿ ಸಿಲುಕಿದ್ದ ಶವ ಹೊರ ತಗೆದು, ಮರಣೋತ್ತರ ಪರೀಕ್ಷೆಗೆ ಬೀಳಗಿ ತಾಲೂಕು ಆಸ್ಪತ್ರೆಗೆ ಕಳುಹಿಸಿದರು.
ಬೀಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next