ಕುಷ್ಟಗಿ: ತಾಲೂಕಿನ ಕಬ್ಬರಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಪುರಾತನ ಬೀಳಗಿ ಕೆರೆ ಭಾರೀ ಪ್ರಮಾಣದ ಹೂಳಿನಿಂದಾಗಿ ಚಿಂತಾಜನಕ ಸ್ಥಿತಿ ತಲುಪಿದೆ. ಕೆರೆಯನ್ನು ಆವರಿಸಿಕೊಂಡಿರುವ ಹೂಳು ತೆಗೆಯದ ಹೊರತು ಕೆರೆಗೆ ಮರುಜೀವದ ಕಾಯಕಲ್ಪಿಸುವುದು ಅಸಾಧ್ಯವೆನಿಸಿದೆ.
1964ರಲ್ಲಿ ನಿರ್ಮಾಣವಾಗಿರುವ ಬೀಳಗಿ ಕೆರೆ 57 ವರ್ಷದ ಹಿನ್ನೆಲೆ ಇದೆ. ಸದರಿ ಕೆರೆ 25 ಎಕರೆ 9 ಗುಂಟೆ ವಿಸ್ತೀಣವಿದ್ದು, 15 ಹೆಕ್ಟೇರ್ ನೀರಿನ ಸಾಂದ್ರತೆ ಪ್ರದೇಶ ಹೊಂದಿದೆ. 540 ಮೀಟರ್ ಉದ್ದ ಹಾಗೂ 5 ಮೀಟರ್ ಬಂಡ್ (ತಡೆಗೋಡೆ) ಹೊಂದಿದ್ದು, ಕೆರೆಯ ಸಂಗ್ರಹ ಸಾಮಾರ್ಥ್ಯ 3.83 ಎಂಸಿಎಫ್‌ಟಿ ಇದೆ ಸದರಿ ಕೆರೆ ಭರ್ತಿಯಾದಾಗ ಹೊರ ಹರಿವು 2,430 ಕ್ಯೂಸೆಕ್ಸ್ ಆಗಿದೆ.
ಹೂಳಿನದ್ದೇ ಸಮಸ್ಯೆ: ಶ್ರೀ ಚಂದಾಲಿಂಗ ಹಾಗೂ ಚಂದ್ರಗಿರಿ, ವೆಂಕಟಾಪುರ ಗುಡ್ಡಗಾಡು ಪ್ರದೇಶದಲ್ಲಿ ಬೀಳುವ ಮಳೆ ನೀರು, ಕಣಿವೆಗಳಲ್ಲಿ ಹರಿದು, ಬೀಳಗಿ ಕೆರೆ ಕಟ್ಟೆ ಸೇರುತ್ತಿದೆ. ಈ ಕೆರೆಯಲ್ಲಿ ನೀರಿನ ಸಂಗ್ರಹಗಿಂತ ಹೂಳಿನ ಸಂಗ್ರಹವೇ ಹೆಚ್ಚಿದ್ದು, ಬಹುಪಾಲು ಹೂಳು ತುಂಬಿಕೊಂಡಿರುವ ಹಿನ್ನೆಲೆಯಲ್ಲಿ ಕೆರೆಯ ಸಂಗ್ರಹ ಸಾಮಾರ್ಥ್ಯ ಕ್ಷೀಣಿಸಿದೆ. ಇದರಲ್ಲಿನ ಹೂಳು ಉದ್ಯೋಗ ಖಾತ್ರಿ ಯೋಜನೆಯಿಂದ ಹೂಳಿನಿಂದ ಮುಕ್ತಿ ಹೊಂದುವುದು ಅಸಾಧ್ಯವಾಗಿದೆ. ನಿಡಶೇಸಿ, ತಾವರಗೇರಾ, ಯಲಬುರ್ಗಾ ತಾಲೂಕಿನ ತಲ್ಲೂರು, ಕೊಪ್ಪಳ ತಾಲೂಕಿನ ಗಿಣಗೇರಾ ಕೆರೆಗಳನ್ನು ಸಾರ್ವಜನಿಕರು ಹಾಗೂ ಸರ್ಕಾರ ಸಹಭಾಗಿತ್ವದಲ್ಲಿ ಮಾದರಿಯ ಹೂಳೆತ್ತುವ ಅಭಿವೃದ್ಧಿ ಕೆಲಸದಿಂದ ಮಾತ್ರ ನೀರಿನ ಸಂಗ್ರಹ ಸಾಮಾರ್ಥ್ಯ ಹೆಚ್ಚಿಸಿಕೊಳ್ಳಲು ಸಾಧ್ಯವಿದೆ.
ಮಾ.20ರ ಜಿಲ್ಲಾ ಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಫಲಶ್ರುತಿ ಹಿನ್ನೆಲೆಯಲ್ಲಿ ಜನತೆ ಕೆರೆಯ ಪುನಶ್ಚೇತನ ನಿರೀಕ್ಷೆಯಲ್ಲಿದ್ದಾರೆ. ಅಂದುಕೊಂಡಾಂತಾದರೆ ಕೆರೆಗೆ ಪುನಶ್ಚೇತನ ಭಾಗ್ಯ ಕಲ್ಪಿಸಿದರೆ ಮಾತ್ರ ಮನ್ನೇರಾಳ, ಸೇಬಿನಕಟ್ಟಿ, ಕಬ್ಬರಗಿ, ಹೂಲಗೇರಿ, ಬಂಡ್ರಗಲ್ಲ, ಹನುಮಸಾಗರ ಪ್ರದೇಶಕ್ಕೂ ಅಂತರ್ಜಲದ ವಿಸ್ತಾರದ ಸಾಧ್ಯತೆಗಳಿವೆ.
ಕೆರೆಯ ದುಸ್ಥಿತಿ: ಕೆರೆಕಟ್ಟೆಯ ಬಂಡ್ (ತಡೆಗೋಡೆ) ಭಾಗದಲ್ಲಿ ಕಲ್ಲುಗಳು ಅಲ್ಲಲ್ಲಿ ಜರಿದಿವೆ. ಅಲ್ಲದೇ ಕೆರೆಗೆ ಹೊಂದಿಕೊಂಡಿರುವ ಪಕ್ಕದ ಬೆಟ್ಟದಲ್ಲಿ ಸೈಜು ಕಲ್ಲುಗಳ ಗಣಿಗಾರಿಕೆ ನಡೆಯುತ್ತಿದ್ದು, ಈ ಕಲ್ಲುಗಳ ಸಾಗಾಣಿಕೆಗೆ ದಾರಿಗೆ ಕೆರೆಯ ಒಡ್ಡು ಹಾಗೂ ಸರ್ವಿಸ್ ರಸ್ತೆ ಬಳಸಿಕೊಳ್ಳಲಾಗಿದ್ದು, ನಿತ್ಯ ಲಾರಿ, ಟ್ರಕ್‌ಗಳ ಸಂಚಾರದಿಂದ ಕೆರೆಯ ಒಡ್ಡು ದುರ್ಬಲಗೊಳ್ಳುವ ಆತಂಕವಿದೆ. ಅಲ್ಲದೇ ಕೆರೆಯ ವೇಸ್ಟ್‌ವೇರ್ ತಳಭಾಗದಲ್ಲಿ ಬಿರುಕು ಬಿಟ್ಟ ಪರಿಣಾಮ ಕೆರೆಯ ನೀರು ನಿರಂತರ ಸೋರಿಕೆಗೆ ಕಾರಣವಾಗಿದ್ದು, ಸಣ್ಣ ನೀರಾವರಿ ಸಕಾಲಿಕ ಕ್ರಮ ಕೈಗೊಳ್ಳದೇ ಇದ್ದಲ್ಲಿ ವೇಸ್ ವೇರ್ ಕೊಚ್ಚಿಹೋಗುವ ಸಾಧ್ಯತೆಗಳಿವೆ. ವೇಸ್ rವೇರ್ ಕೆಳಭಾಗ ನಾಲೆಯಲ್ಲಿ ಮುಳ್ಳುಕಂಟಿ ಬೆಳೆದಿದ್ದು, ವೇಸ್ಟ್‌ವೇರ್ ನಿಂದ ಹೊರ ಹರಿವಿನ ನೀರು, ಜಮೀನುಗಳಿಗೆ ನುಗ್ಗಿ ಬೆಳೆ ಹಾನಿಯ ಅಪಾಯವಿದೆ.
ಮಂಜುನಾಥ ಮಹಾಲಿಂಗಪುರ