ಗದಗ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಕ್ಷೇತ್ರದ ಜನತೆಗಾಗಿ ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ ಅವರು ಮಾನವೀಯತೆಗಾಗಿ ಭಿಕ್ಷೆ ಅಭಿಯಾನ ಕೈಗೊಂಡಿದ್ದು, ಸಾವಿರಾರು ಕುಟುಂಬಗಳಿಗೆ ಆಹಾರ ಸಾಮಗ್ರಿ ಒದಗಿಸುತ್ತಿದ್ದಾರೆ. ಅವರ ಕಾರ್ಯಕ್ಕೆ ಸರಕಾರದ ಪರವಾಗಿ ಸಚಿವನಾಗಿ ತುಂಬು ಹೃದಯದಿಂದ ಅಭಿನಂದನೆ ಸಲ್ಲಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಮೆಚ್ಚುಗೆ ಸೂಚಿಸಿದರು.
ನಗರದ ಎಪಿಎಂಸಿ ಹಿಂಭಾಗದ ಹುಮನಾಬಾದಿ ಅವರ ಜಿನ್ನಿಂಗ್ ಫ್ಯಾಕ್ಟರಿಯಲ್ಲಿ ಕಿಟ್ ವಿತರಣಾ ಕಾರ್ಯಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಸಚಿವರು, ದೇಶದಲ್ಲಿ ಕೊರೊನಾ ನಿಯಂತ್ರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಹಲವು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಒಂದು ತಿಂಗಳಿಂದ ಲಾಕ್‌ಡೌನ್ ಜಾರಿಯಲ್ಲಿದ್ದು, ಎಲ್ಲ ಕೆಲಸ ಕಾರ್ಯಗಳು ಸ್ಥಗಿತಗೊಂಡಿವೆ. ಪರಿಣಾಮ ನಿತ್ಯ ದುಡಿಮೆಯನ್ನೇ ನಂಬಿದ್ದ ಬಡವರು ಆಹಾರ ಸಾಮಗ್ರಿಗಳಿಗಾಗಿ ಪರದಾಡುವಂತಾಗಿದೆ. ಇಂತಹ ಸಂದರ್ಭದಲ್ಲಿ ಪ್ರತಿಯೊಬ್ಬರೂ ನೆರವಾಗಬೇಕು ಎಂದು ಕರೆ ನೀಡಿದರು.
ಗದಗ ಮತಕ್ಷೇತ್ರದ ಬಡವರಿಗೆ ನೆರವಾಗುವ ಉದ್ದೇಶದಿಂದ ಬಿಜೆಪಿ ಯುವ ಮುಖಂಡ ಅನಿಲ್ ಮೆಣಸಿನಕಾಯಿ ಅವರು ಪಕ್ಷದ ಕಾರ್ಯಕರ್ತರು ಹಾಗೂ ತಮ್ಮ ಬೆಂಬಲಿಗರೊಂದಿಗೆ ಉಣ್ಣುವವರು ಹಾಗೂ ಉಳ್ಳವರ ಮಧ್ಯೆ ಸಂಪರ್ಕ ಸೇತುವೆಯಾಗಿ ಶ್ರಮಿಸುತ್ತಿದ್ದಾರೆ. ಈವರೆಗೆ 300 ಚೀಲ ಜೋಳ, 100 ಚೀಲ ಕಡ್ಲಿ, ಸುಮಾರು 500 ಚೀಲ ದಿನಸಿ ನೀಡಿ, ಸಾರ್ವಜನಿಕರು ಮಾನವೀಯತೆ ಪ್ರದರ್ಶಿಸಿದ್ದಾರೆ ಎಂದು ಕೃತಜ್ಞತೆ ಸಲ್ಲಿಸಿದರು.
ಬಿಜೆಪಿಯಿಂದ ದಿನಸಿ ವಸ್ತುಗಳ ವಿತರಣೆಯಲ್ಲದೇ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಅವರ ನೇತೃತ್ವದಲ್ಲಿ ಬಡವರಿಗಾಗಿ ಉಚಿತವಾಗಿ ಔಷ ಧಿ ಒದಗಿಸಲಾಗುತ್ತಿದೆ. ಅದಕ್ಕೆ ಜಿಲ್ಲೆಯಲ್ಲಿ ಮೂವರು ಸಂಚಾಲಕರಾಗಿದ್ದು, ಗದಗಿನಲ್ಲಿ ಸುಧಿಧೀರ್ ಕಾಟಿಗೇರ್, ರೋಣದ ಮುತ್ತುಕಡಗದ, ನರಗುಂದದ ಉಮೇಶಗೌಡ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.
ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ ಮಾತನಾಡಿ, ಕ್ಷೇತ್ರದ ಯಾರೊಬ್ಬರೂ ಹಸಿವಿನಿಂದ ಮಲಗುವಂತೆ ಆಗಬಾರದು ಎಂಬ ಉದ್ದೇಶದಿಂದ ಮಾನವೀಯತೆಗಾಗಿ ಭಿಕ್ಷೆ ಆರಂಭಿಸಿದ್ದು, ಕ್ಷೇತ್ರದ ಜನರಿಂದ ಉತ್ತಮ ಸ್ಪಂದನೆ ದೊರಕಿದೆ. ಅವುಗಳನ್ನು ಅರ್ಹರಿಗೆ ಒದಗಿಸಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಮೋಹನ ಮಾಳಶೆಟ್ಟಿ, ವಿಜಯ ಮಹಾಂತೇಶ, ನಗರ ಸಂಘಚಾಲಕ ಬಸವರಾಜ ನಾಗಲಾಪುರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ಕುರಡಗಿ, ಕಾಂತಿಲಾಲ್ ಬನ್ಸಾಲಿ, ಪ್ರೇಮನಾಥ ಬಣ್ಣದ, ಸಂಗೇಶ ದುಂದೂರು, ಜಗನ್ನಾಥಸಾ ಬಾಂಡೆ, ಶಂಕ್ರಪ್ಪ ಹಿಂಡಿ, ಭದ್ರೇಶ ಕುಸಲಾಪುರ, ಬಸವಣ್ಣಯ್ಯ ಹಿರೇಮಠ, ಅಮರೇಶ ಹಿರೇಮಠ ಇದ್ದರು.