Advertisement

ಬಿಕೋ ಎನ್ನುತ್ತಿದೆ ಖಾಸಗಿ ಬಸ್‌ ನಿಲ್ದಾಣ!

03:14 PM Oct 22, 2017 | Team Udayavani |

ಪುತ್ತೂರು: ನಗರದ ಕೆಎಸ್‌ಆರ್‌ ಟಿಸಿ ಬಸ್‌ ನಿಲ್ದಾಣವೇನೂ ಹೈಟೆಕ್‌ ಆಗಿದೆ. ಆದರೆ ಅಲ್ಲಿಂದ ಕೂಗಳತೆ ದೂರದಲ್ಲಿರುವ ಖಾಸಗಿ ಬಸ್‌ ನಿಲ್ದಾಣವಂತೂ ಹಾಳು ಕೊಂಪೆಯಂತಿದೆ!

Advertisement

ಸರಿಯಾದ ಶೌಚಾಲಯ ವ್ಯವಸ್ಥೆ, ವಿದ್ಯುತ್‌ ವ್ಯವಸ್ಥೆ ಇಲ್ಲಿಲ್ಲ. ನಗರದೊಳಗೆ ಈ ನಿಲ್ದಾಣ ಪ್ರಯೋಜನಕಾರಿ ಎನಿಸಿದರೂ ಅವ್ಯವಸ್ಥೆಗಳಿಂದಾಗಿ ಪ್ರಯಾ ಣಿಕರಿಗೆ ಸುರಕ್ಷಿತವಾಗಿಲ್ಲ.

ಪುರಸಭೆ ಅವಧಿಯಲ್ಲಿ 2004ರಲ್ಲಿ ನಗರಾಭಿವೃದ್ಧಿ ಮತ್ತು ಪರಿಸರ ನಿರ್ವಹಣ ಯೋಜನೆಯ ಅನುದಾನದಲ್ಲಿ ನಿರ್ಮಾಣಗೊಂಡಿರುವ ಈ ನಿಲ್ದಾಣದಲ್ಲಿ ಸೀಮಿತ ಬಸ್‌ಗಳು ಮಾತ್ರ ನಿಲುಗಡೆ ಆಗುತ್ತಿವೆ. ಶಾಲಾ ಮಕ್ಕಳು, ಇತರೆ ಪ್ರಯಾಣಿಕರು ಬಸ್‌ಗಾಗಿ ಇಲ್ಲೇ ಕಾಯಬೇಕು. ಆದರೆ ನಿಲ್ದಾಣದ ದುರ್ವಾಸನೆ, ಅಭದ್ರತೆ, ಎಲ್ಲ ಬಸ್‌ಗಳು ಬಾರದಿರುವ ಕಾರಣಗಳಿಂದಾಗಿ ಪ್ರಯೋಜನಕ್ಕೆ ದಕ್ಕುತ್ತಿಲ್ಲ.

ಎಲ್ಲ ಬಸ್‌ ಬರುತ್ತಿಲ್ಲ
ಇಲ್ಲಿ ಮುಖ್ಯವಾಗಿ ಎಲ್ಲ ಖಾಸಗಿ ಬಸ್‌ಗಳು ನಿಲ್ದಾಣಕ್ಕೆ ಬರುತ್ತಿಲ್ಲ. ಪಾಣಾಜೆ, ವಿಟ್ಲ ಕಡೆಗೆ ತೆರಳುವ ಬಸ್‌ಗಳು ಮಾತ್ರ ಬರುವುದರಿಂದ ಮಂಗಳೂರು ಮೊದಲಾದ ಭಾಗಗಳಿಗೆ ತೆರಳುವ ಪ್ರಯಾಣಿಕರು ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಬಳಿ ನಿಲ್ಲುತ್ತಾರೆ. ಮಂಗಳೂರಿಗೆ ತೆರಳುವ ಖಾಸಗಿ ಬಸ್‌ ಗಳು ನಗರದ ಮುಖ್ಯ ರಸ್ತೆ ಬದಿಯಲ್ಲೇ ಇರುತ್ತದೆ.

ಗಾಂಜಾ ಅಡ್ಡೆ
ನಗರಸಭೆಯ ಖಾಸಗಿ ಬಸ್‌ ನಿಲ್ದಾಣ ಗಾಂಜಾ ದಂಧೆಕೋರರ ಅಡ್ಡೆಯಾಗಿದೆ. ಇಲ್ಲಿ ಗಾಂಜಾ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ. ಪ್ರಯಾಣಿಕರಿಗಿಂತಲೂ ಹೆಚ್ಚು ಮಾದಕದ್ರವ್ಯ ವ್ಯಸನಿಗಳು ಇಲ್ಲಿಗೆ ಬರುತ್ತಾರೆ ಎನ್ನುವುದು ಸಾರ್ವಜನಿಕರ ದೂರು. ಮಾದಕದ್ರವ್ಯ ವ್ಯಸನಿಗಳ ಹಾವಳಿಯಿಂದ ಈ ಪರಿಸರವೇ ಅಸಹ್ಯವೆನಿಸಿದೆ. ಇಲ್ಲಿ ಸಂಜೆಯ ಬಳಿಕ ಖಾಸಗಿ ಬಸ್‌ಗಳ ಓಡಾಟ ಇಲ್ಲ ಮತ್ತು ಬಸ್‌ ನಿಲ್ದಾಣಕ್ಕೆ ಯಾವುದೇ ಭದ್ರತಾ ವ್ಯವಸ್ಥೆ ಇಲ್ಲದ ಕಾರಣ ಇದು ಅಕ್ರಮಗಳ ಬೀಡಾಗಿದೆ ಎಂಬ ಅನೇಕ ವರ್ಷಗಳ ದೂರಿಗೆ ಸ್ಪಂದನೆ ಸಿಕ್ಕಿಲ್ಲ.

Advertisement

ಜನರೇ ಬರುತ್ತಿಲ್ಲ
ಮಂಗಳೂರಿಗೆ ಸಂಚರಿಸುವ ಖಾಸಗಿ ಬಸ್‌ಗಳು, ಇತರೆ ಟೂರಿಸ್ಟ್‌ ವಾಹನಗಳು ನಿಲ್ದಾಣಕ್ಕೆ ಬಂದರೆ ಮಾತ್ರ ಇಲ್ಲಿಗೆ ಪ್ರಯಾಣಿಕರು ಬರಬಹುದು. ಈಗ ಬೆರಳೆಣಿಕೆಯ ಬಸ್‌ಗಳು ಬರುತ್ತಿದೆ. ಇಲ್ಲಿನ ಅಂಗಡಿ, ಹೊಟೇಲ್‌ಗ‌ಳಿಗೆ ವ್ಯಾಪಾರ, ವ್ಯವಹಾರವೂ ಇಲ್ಲ. ವಿದ್ಯುತ್‌, ಶೌಚಾಲಯ ಸಮಸ್ಯೆಗೂ ಮುಕ್ತಿ ಸಿಕ್ಕಿಲ್ಲ.
ಚಂದ್ರಶೇಖರ,
ಹೊಟೇಲ್‌ ಮಾಲಕ

ಪರಿಶೀಲಿಸಲಾಗಿದೆ
ಖಾಸಗಿ ಬಸ್‌ ನಿಲ್ದಾಣದ ಅವ್ಯವಸ್ಥೆಯ ಕುರಿತು ಗಮನಕ್ಕೆ ಬಂದಿದೆ. ಎಡಬ್ಲ್ಯುಡಿ ನೇತೃತ್ವದಲ್ಲಿ ಪರಿಶೀಲನೆ ನಡೆದಿದ್ದು, ಅಲ್ಲಿನ ಮೂಲ ವ್ಯವಸ್ಥೆ ಸರಿಪಡಿಸಲು ಯೋಜನೆ ರೂಪಿಸಲಾಗುತ್ತಿದೆ. 
ರೂಪಾ ಶೆಟ್ಟಿ
  ಪೌರಾಯುಕ್ತೆ, ನಗರಸಭೆ, ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next