ಉಳ್ಳಾಲ: ದೇರಳಕಟ್ಟೆ ಯೇನಪೊಯ ಆಸ್ಪತ್ರೆ ಬಳಿ ನಿಲ್ಲಿಸಿದ್ದ ಬೈಕ್ ಕಳವು ಮಾಡಿದ ಇಬ್ಬರು ಆರೋಪಿಗಳನ್ನು ಉಳ್ಳಾಲ ಪೊಲೀಸರು ಬುಧವಾರ ಬಂಧಿಸಿ ಬೈಕ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಕಾಸರಗೋಡಿನ ಚೆರ್ಕಳ ನಿವಾಸಿ ಅಬ್ದುಲ್ ರಶೀದ್ (23), ಕುಂಜಾರುಪ್ಪಾರ ನಿವಾಸಿ ಅಬ್ದುಲ್ ಶಬೀರ್ (21) ಬಂಧಿತರು.
ಎ. 25ರಂದು ದೇರಳಕಟ್ಟೆಯ ಯೇನಪೊಯ ಆಸ್ಪತ್ರೆ ಪಾರ್ಕಿಂಗ್‌ನಲ್ಲಿ ನಿಲ್ಲಿಸಲಾಗಿದ್ದ ಬಗಂಬಿಲ ನಿವಾಸಿ ರಂಜಿತ್ ಅವರ ಬೈಕ್ ಕಳವು ನಡೆದಿತ್ತು. ಈ ಕುರಿತು ಉಳ್ಳಾಲ ಠಾಣೆಯಲ್ಲಿ ದೂರು ದಾಖಲಾಗಿತ್ತು. ಜೂ. 1ರಂದು ಉಚ್ಚಿಲ ಬ್ರಿಡ್ಜ್ ಬಳಿ ಉಳ್ಳಾಲ ಠಾಣೆಯ ಪಿಎಸ್‌ಐ ಪ್ರದೀಪ್ ಟಿ.ಆರ್. ಮತ್ತು ಸಿಬಂದಿ ವಾಹನ ತಪಾಸಣೆ ನಡೆಸುತ್ತಿರುವಾಗ ಬೈಕ್ ಪತ್ತೆಯಾಗಿದೆ. ಮುಂಭಾಗದಲ್ಲಿ ನಂಬರ್ ಪ್ಲೇಟ್ ಇಲ್ಲದೆ ತೆರಳುತ್ತಿರುವುದನ್ನು ಗಮನಿಸಿ ಸಂಶಯಗೊಂಡು ಬೈಕ್ ಅನ್ನು ತಡೆದು ದಾಖಲೆಗಳನ್ನು ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಇಬ್ಬರು ಕಳವು ನಡೆಸಿದ ಬೈಕ್ ಅನ್ನು ಕೆಲಕಾಲ ಉಪಯೋಗಿಸಿ ಅನಂತರ ಮಾರಾಟ ಮಾಡುವ ಯೋಚನೆಯಲ್ಲಿದ್ದರೆಂದು ತನಿಖೆಯಲ್ಲಿ ತಿಳಿದು ಬಂದಿದೆ.
ಎಸಿಪಿ ದಿನಕರ ಶೆಟ್ಟಿ ಮಾರ್ಗದರ್ಶನದಂತೆ ಆರೋಪಿಗಳ ಪತ್ತೆ ಕಾರ್ಯದಲ್ಲಿ ಉಳ್ಳಾಲ ಠಾಣೆಯ ನಿರೀಕ್ಷಕ ಸಂದೀಪ್ ಜಿ.ಎಸ್., ಉಪನಿರೀಕ್ಷಕರ ಪ್ರದೀಪ್ ಟಿ.ಆರ್., ಪಿಎಸ್‌ಐ ರೇವಣ್ಣ ಸಿದ್ದಪ್ಪ, ಎಎಸ್‌ಐ ಶೇಖರ್ ಗಟ್ಟಿ, ಸಿಬಂದಿ ಪ್ರವೀಣ್ ಶೆಟ್ಟಿ, ರಂಜಿತ್ ಕುಮಾರ್, ಅಶೋಕ್, ಚಿದಾನಂದ್, ವಾಸುದೇವ,ಅಕºರ್ ಭಾಗವಹಿಸಿದ್ದರು.