ಬೆಂಗಳೂರು: ಪ್ರೇಯಸಿಯ ಕಣ್ಣಿನ ಆಪರೇಷನ್‌ಗಾಗಿ ಹಣ ಹೊಂದಿಸಲು ದ್ವಿಚಕ್ರ ವಾಹನಗಳ ಕಳ್ಳತನ ಮಾಡು ತ್ತಿದ್ದ ಕುಂದಾಪುರ ಮೂಲದ ಆರೋಪಿಯನ್ನು ಮಹಾಲಕ್ಷಮೀ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕುರುಬರಹಳ್ಳಿಯ ಸಚಿನ್ (28) ಬಂಧಿತ ಆರೋಪಿ. ಈತನಿಂದ 6.18 ಲಕ್ಷ ರೂ. ಮೌಲ್ಯದ 1 ಆಟೋ ಹಾಗೂ 9 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯ ಲಾಗಿದೆ. ಇತ್ತೀಚೆಗೆ ಠಾಣೆ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರು ಅಕ್ಕಮಹಾದೇವಿ ಪಾರ್ಕ್ ಬಳಿ ನಿಲುಗಡೆ ಮಾಡಿದ್ದ ದ್ವಿಚಕ್ರ ವಾಹನ ಕಳ್ಳತನವಾಗಿತ್ತು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.
ಉಡುಪಿ ಜಿಲ್ಲೆ ಕುಂದಾಪುರದ ಸಚಿನ್ ನಗರದ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಕುರುಬರಹಳ್ಳಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಕೆಲ ವರ್ಷಗಳಿಂದ ನಗರದಲ್ಲಿ ವಾಸವಾಗಿರುವ ಕುಂದಾಪುರದ ಯುವತಿಯನ್ನು ಪ್ರೀತಿಸುತ್ತಿದ್ದು, ಆಕೆಗೆ ಕಣ್ಣಿನ ಸಮಸ್ಯೆ ಇತ್ತು. ಈ ಹಿನ್ನೆಲೆಯಲ್ಲಿ ಆಪರೇಷನ್ ಮಾಡಿಸಬೇಕಿತ್ತು. ಹೀಗಾಗಿ ಆಪರೇಷನ್‌ಗೆ ಸುಲಭವಾಗಿ ಹಣ ಹೊಂದಿಸಲು ಸಚಿನ್ ದ್ವಿಚಕ್ರ ವಾಹನಗಳ ಕಳ್ಳತನಕ್ಕೆ ಇಳಿದಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ಹ್ಯಾಂಡಲ್ ಲಾಕ್ ಮುರಿದು ಕಳವು: ಹಗಲು ಮತ್ತು ರಾತ್ರಿ ವೇಳೆ ಮನೆ, ಪಾರ್ಕ್ ಬಳಿ ನಿಲುಗಡೆ ಮಾಡಿದ್ದ ದ್ವಿಚಕ್ರ ವಾಹನಗಳನ್ನು ಗುರುತಿಸುತ್ತಿದ್ದ. ಕೆಲ ಹೊತ್ತಿನ ಬಳಿಕ ಹ್ಯಾಂಡಲ್ ಲಾಕ್ ಮುರಿದು ಕಳವು ಮಾಡಿ, ಪರಿಚಿತರ ಮೂಲಕ ಮಾರಾಟ ಮಾಡಿಸಿ ಹಣ ಪಡೆಯುತ್ತಿದ್ದ. ಇದೇ ಮಾದರಿಯಲ್ಲಿ ಮಹಾಲಕ್ಷ್ಮೀ ಲೇಔಟ್‌ನ ಅಕ್ಕಮಹಾದೇವಿ ಪಾರ್ಕ್ ಬಳಿ ಹಾಡಹಗಲೇ ದ್ವಿಚಕ್ರ ವಾಹನ ಕಳ್ಳತನ ನಡೆದಿತ್ತು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಘಟನಾ ಸ್ಥಳದ ಸುತ್ತಮುತ್ತಲ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಆರೋಪಿ ಸಚಿನ್ ಸುಳಿವು ಸಿಕ್ಕಿತು. ಅದರ ಆಧಾರದ ಮೇಲೆ ಕುರುಬರಹಳ್ಳಿ ಸರ್ಕಲ್‌ನಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯ ಬಂಧನದಿಂದ ಉತ್ತರ ವಿಭಾಗದ ಐದು ಠಾಣೆಗಳಲ್ಲಿ ದಾಖಲಾಗಿದ್ದ 9 ದ್ವಿಚಕ್ರ ವಾಹನಗಳ ಕಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದರು.