ಬೆಂಗಳೂರು: ಮನೆಯಲ್ಲಿ ಬೈಕ್ ಕೊಡಿಸಲಿಲ್ಲ ಎಂದು ದ್ವಿಚಕ್ರ ವಾಹನ ಕಳ್ಳತನ ಮಾಡಿ ಬಳಿಕ ಅದನ್ನೇ ವೃತ್ತಿ ಮಾಡಿಕೊಂಡಿದ್ದ ಇಬ್ಬರು ಕಳ್ಳರನ್ನು ವಿಶ್ವೇಶ್ವರಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡಿನ ಹೊಸೂರು ಮೂಲದ ಆಸೀಂ (19) ಮತ್ತು ಅಭಿಕುಮಾರ್ (20) ಬಂಧಿತರು. ಆರೋಪಿಗಳಿಂದ 12 ಲಕ್ಷ ರೂ. ಮೌಲ್ಯದ 16 ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ.
ಇತ್ತೀಚೆಗೆ ವಿಶ್ವೇಶ್ವರ ಪುರ ಠಾಣಾ ವ್ಯಾಪ್ತಿಯಲ್ಲಿ ಶಂಕಾಸ್ಪದವಾಗಿ ಓಡಾಡುತ್ತಿದ್ದರು. ಈ ವೇಳೆ ವಶಕ್ಕೆ ಪಡೆದು ವಿಚಾರಿಸಿದಾಗ ತಪ್ಪೊಪ್ಪಿಕೊಂಡಿದ್ದಾರೆ. ಆರೋಪಿಗಳು ನೆರೆಹೊರೆಯ ನಿವಾಸಿಗಳಾಗಿದ್ದು, ಕೂಲಿ ಕೆಲಸ ಮಾಡಿಕೊಂಡಿದ್ದರು. ಮನೆಯಲ್ಲಿ ದ್ವಿಚಕ್ರ ವಾಹನ ಕೊಡಿಸುವಂತೆ ಕೇಳಿದ್ದಾಗ ಪೋಷಕರು ನಿರಾಕರಿಸಿದ್ದಾರೆ. ದ್ವಿಚಕ್ರ ವಾಹನ ಓಡಿಸುವ ಶೋಕಿಗೆ ಬಿದ್ದಿದ್ದ ಆರೋಪಿಗಳು ಕೂಲಿಗಾಗಿ ಬೆಂಗಳೂರಿಗೆ ಬರುತ್ತಿದ್ದರು. ಈ ವೇಳೆ ಒಂದು ದ್ವಿಚಕ್ರ ವಾಹನ ಕದ್ದು ಪರಾರಿಯಾಗಿದ್ದರು. ಬಳಿಕ ಆ ದ್ವಿಚಕ್ರ ವಾಹನವನ್ನು ಹೊಸೂರಿನ ಸುತ್ತಮುತ್ತಲ ಹಳ್ಳಿಗಳಲ್ಲಿ 5-10 ಸಾವಿರ ರೂ. ಗೆ ಮಾರಾಟ ಮಾಡಿ ಮೋಜು-ಮಸ್ತಿ ಮಾಡುತ್ತಿದ್ದರು. ಮನೆ ಎದುರು ಅಥವಾ ಪಾರ್ಕಿಂಗ್ ಸ್ಥಳಗಳಲ್ಲಿ ನಿಲುಗಡೆ ಮಾಡಿದ್ದ ದ್ವಿಚಕ್ರವಾಹನಗಳ ಹ್ಯಾಂಡಲ್ ಲಾಕ್ ಮುರಿದು ಕಳವು ಮಾಡಿ ಪರಾರಿಯಾಗುತ್ತಿದ್ದರು ಎಂದು ಪೊಲೀಸರು ಹೇಳಿದರು. ವಿ.ವಿ.ಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.