ನೆಲಮಂಗಲ: ತಾಲೂಕಿನ ಡಾಬಸ್‌ಪೇಟೆ ಪಟ್ಟಣದಲ್ಲಿ ವಾಹನ ಕಳ್ಳತನ ಪ್ರಕರಣಗಳು ಹೆಚ್ಚಾಗಿದ್ದರಿಂದ ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿತ್ತು. ಈ ಬಗ್ಗೆ ಕಾರ್ಯಪ್ರವೃತ್ತರಾದ ದಾಬಸ್‌ಪೇಟೆ ಪೊಲೀಸರು ಕೊನೆಗೂ ಕಳ್ಳರನ್ನು ಹಿಡಿದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದು, ಸಾರ್ವಜನಿಕರು ವಾಹನಕಳ್ಳತನದಿಂದ ನಿಟ್ಟುಸಿರು ಬಿಟ್ಟಿದ್ದಾರೆ.
ತುಮಕೂರಿನ ಶಾಂತಿನಗರ ವಾಸಿ ಮುಬಾರಕ್ (27), ಎನ್.ಆರ್. ಕಾಲೋನಿಯ ನಂದೀಶ್(19), ಅರವಿಂದ ನಗರದ ಅಭಿಷೇಕ್(26) ಆರೋಪಿಗಳು ತಮ್ಮ ಮೋಜು-ಮಸ್ತಿಗಾಗಿ ಸುಲಭವಾಗಿ ಹಣ ಗಳಿಸಲು ಬೈಕ್ ಕಳ್ಳತನವನ್ನೇ ಉದ್ಯೋಗವಾಗಿಸಿಕೊಂಡಿರುವ ವಿಚಾರ ಪೊಲೀಸರ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾರೆ.
ಇಲಾಖೆಯ ಹಿರಿಯ ಅಧಿಕಾರಿಗಳ ಮೇರೆಗೆ ವಾಹನಗಳ ಕಳ್ಳತನ ಪ್ರಕರಣ ಭೇದಿಸಲು ದಾಬಸ್ ಪೇಟೆ ಪೊಲೀಸರು ಇನ್ಸ್‌ಪೆಕ್ಟರ್ ಎಸ್.ರವಿ ನೇತೃತ್ವದಲ್ಲಿ ತಂಡವನ್ನು ರಚನೆ ಮಾಡಿಕೊಂಡು ಆಯ್ದ ಸಿಸಿ ಕ್ಯಾಮೆರಾ, ಮೊಬೈಲ್ ಸಿಮ್ ಟ್ರ್ಯಾಕಿಂಗ್ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡುವಿವಿಧ ಆಯಾಮದಲ್ಲಿ ತೀವ್ರ ತನಿಖೆ ನಡೆಸಿದ್ದು, ಖಚಿತ ಮಾಹಿತಿ ಮೇರೆಗೆ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.
ದಾಬಸ್ ಪೇಟೆ, ನರಸೀಪುರ, ತುಮಕೂರು, ಬೆಂಗಳೂರು ಸೇರಿದಂತೆ ವಿವಿಧೆಡೆ ವಾಹನ ಕಳ್ಳತನ ಮಾಡಿರುವುದನ್ನು ಬಂಧಿತರು ಬಾಯಿಬಿಟ್ಟಿದ್ದಾರೆ. ಬಂಧಿತರಿಂದಒಟ್ಟು 9.50 ಲಕ್ಷ ರೂ. ಮೌಲ್ಯದ ವಿವಿಧ ಕಂಪನಿಯ 12 ಬೈಕ್ ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಮೋಜು-ಮಸ್ತಿಗಾಗಿ ಕಳ್ಳತನ: ಆರೋಪಿಗಳು ಬೆಂಗಳೂರು ಹೊರವಲಯಗಳಲ್ಲಿ ಬೈಕ್‌ಗಳನ್ನು ಕಳ್ಳತನ ಮಾಡಿಕೊಂಡು ದಾಖಲಾತಿ ತಂದು ಕೊಡುವುದಾಗಿ ನಂಬಿಸಿ ಹಲವರಿಗೆ ಮಾರಾಟ ಮಾಡಿದ್ದು ಹಾಗೂ ಇನ್ನು ಹಲವು ಬೈಕ್‌ಗಳ ನಂಬರ್ ಪ್ಲೇಟ್ ತೆಗೆದು ಗ್ಯಾರೇಜುಗಳಲ್ಲಿ ಬಿಟ್ಟಿದ್ದು, ಅವುಗಳನ್ನು ವಶಕ್ಕೆ ಪಡೆಯಲಾಗಿದೆ.
ಪೊಲೀಸರ ಕಾರ್ಯಕ್ಕೆ ಅಭಿನಂದನೆ: ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ,ಅಪರ ಪೊಲೀಸ್ ಅಧೀಕ್ಷಕ ಪುರುಷೊತ್ತಮ್, ಡಿವೈಎಸ್‌ಪಿ ಗೌತಮ್ ಅವರ ಮಾರ್ಗದರ್ಶನಲ್ಲಿ ಕಾರ್ಯಾಚರಣೆ ನಡೆಸಿದ ದಾಬಸ್‌ಪೇಟೆ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಎಸ್. ರವಿ. ಸಬ್‌ಇನ್ಸ್‌ಪೆಕ್ಟರ್ ವಿಜಯಕುಮಾರಿ, ಸಿಬ್ಬಂದಿ ಗಂಗಾಧರ್, ಇಮ್ರಾನ್ ಖಾನ್, ಲಕ್ಷ್ಮಣ್, ಶಿವಕುಮಾರ ನಾಯ್ಕ, ಗೌತಮ್ ಕಾಳಿ, ಸಂತೋಷ್ ಕುಮಾರ್ . ಪೀರ್ ಸಾಬ್, ಉಮೇಶ್, ಆನಂದ್ ಅವರನ್ನೊಳಗೊಂಡ ತಂಡಕ್ಕೆ ಅಧಿಕಾರಿಗಳು ಹಾಗೂ ಸಾರ್ವಜನಿಕರಿಂದ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.