ಬೆಂಗಳೂರು: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಆರು ಮಂದಿ ದ್ವಿಚಕ್ರ ವಾಹನಗಳ ಕಳ್ಳರನ್ನು ಆಗ್ನೇಯ ವಿಭಾಗದ ಪೊಲೀಸರು ಬಂಧಿಸಿ 39 ವಾಹನಗಳನ್ನು ವಶಕ್ಕೆ ಪಡೆ ದಿದ್ದಾರೆ.
ದ್ವಿಚಕ್ರ ವಾಹನಗಳ ಕಳವು ಮಾಡುತ್ತಿದ್ದ ನಾಲ್ವರು ಅಂತಾರಾಜ್ಯ ಕಳ್ಳರನ್ನು ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ನಿವಾಸಿ ಶಾನ್, ತಮಿಳುನಾಡು ಮೂಲದ ರಂಜಿತ್ ಕುಮಾರ್, ಶಾಹೇನ್ ಶಾ ಮತ್ತು ಶಿವ ಬಂಧಿತರು. ಆರೋಪಿಗಳಿಂದ 15 ಲಕ್ಷ ರೂ. ಮೌಲ್ಯದ 29 ದ್ವಿಚಕ್ರ ವಾಹನಗಳು ಹಾಗೂ 1 ಆಟೋವನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ತಮ್ಮದೇ ಆದ ತಂಡ ಕಟ್ಟಿಕೊಂಡು ಕೋರಮಂಗಲ, ಮಡಿವಾಳ, ಎಚ್‌ಎಸ್‌ಆರ್ ಲೇಔಟ್, ಹುಳಿಮಾವು, ಬೊಮ್ಮ ನ ಹಳ್ಳಿ, ಆನೇಕಲ್ ಹಾಗೂ ತಮಿಳು ನಾಡು ಸೇರಿ ರಾಜ್ಯದ ವಿವಿಧೆಡೆ ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದರು.
ಕಳವು ಮಾಡಿದ ವಾಹನಗಳನ್ನು ತಮಿಳುನಾಡಿನ ತಿರುವಣ್ಣಾಮಲೈನ ಸುತ್ತಮುತ್ತಲ ಹಳ್ಳಿಗಳಲ್ಲಿ ಮಾರಾಟ ಮಾಡಿ ಬಂದ ಹಣದಿಂದ ಮೋಜು-ಮಸ್ತಿ ಮಾಡುತ್ತಿದ್ದರು. ಬೈಕ್‌ಗಳ ಹ್ಯಾಂಡಲ್ ಲಾಕ್ ಮುರಿದು ಕಳ್ಳತನ ಮಾಡು ತ್ತಿದ್ದ ಆರೋಪಿಗಳು, ಇತ್ತೀಚೆಗೆ ಕೋರಮಂಗಲ ದಲ್ಲಿ ಬೈಕ್‌ಗಳ ಕಳವು ಮಾಡುತ್ತಿದ್ದರು. ಆರೋಪಿಗಳ ಬಂಧನದಿಂದ ನಗರದ ವಿವಿಧ ಠಾಣೆಗಳಲ್ಲಿ ಹಾಗೂ ತಮಿಳುನಾಡಿನ ಇತರೆ ಠಾಣೆಗಳಲ್ಲಿ ದಾಖಲಾಗಿದ್ದ 30 ವಾಹನ ಕಳವು ಪ್ರಕರಣಗಳು ಪತ್ತೆಯಾಗಿದೆ.
9 ದ್ವಿಚಕ್ರ ವಾಹನ ಜಪ್ತಿ: ಮತ್ತೂಂದು ಪ್ರಕರಣದಲ್ಲಿ ಬಂಡೆಪಾಳ್ಯ ಪೊಲೀಸ್ ಠಾಣೆಯ ಗಸ್ತು ಸಿಬ್ಬಂದಿಯ ವಾಹನಗಳ ತಪಾಸಣೆಯಲ್ಲಿ ಇಬ್ಬರು ಅಂತಾರಾಜ್ಯ ಬೈಕ್ ಕಳ್ಳರನ್ನು ಬಂಧಿಸಲಾಗಿದೆ. ಆರೋಪಿಗಳಿಂದ 15 ಲಕ್ಷ ಮೌಲ್ಯದ 9 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ತಮಿಳುನಾಡಿನ ಹೊಸೂರು ಮೂಲದ ರೋಪ್ ಮತ್ತು ಖಲೀಂ ಬಂಧಿತರು.
ಸೆ. 7 ರಂದು ಮಂಗಮ್ಮನ ಪಾಳ್ಯದ ಮುಖ್ಯರಸ್ತೆಯಲ್ಲಿ ವಾಹನ ತಪಾಸಣೆ ಮಾಡುತ್ತಿದ್ದ ಬಂಡೆಪಾಳ್ಯ ಠಾಣಾ ಸಿಬ್ಬಂದಿ μರೋಜ್ ಘಜ್ನಿ ಹಾಗೂ ಸಂದೀಪ್ ಕಾಂಬ್ಲೆ ಅನುಮಾನಾಸ್ಪದವಾಗಿ ಬಂದ ಹೊಸೂರು ಮೂಲದ ಇಬ್ಬರನ್ನು ವಶಕ್ಕೆ ಪಡೆದು, ಠಾಣೆಗೆ ಕರೆದೊಯ್ದ ವಿಚಾರಣೆ ನಡೆಸಿದ್ದಾರೆ.
ಆಗ ಬೈಕ್ ಕಳ್ಳತನ ಬೆಳಕಿಗೆ ಬಂದಿದೆ. ಅಲ್ಲದೆ, ವಿಚಾರಣೆ ವೇಳೆ ಸೂರ್ಯನಗರ, ಹೆಬ್ಬಗೋಡಿ, ಪರಪ್ಪನ ಅಗ್ರಹಾರ, ಸಂಪಂಗಿ ರಾಮನಗರ, ಬಂಡೇಪಾಳ್ಯ ಠಾಣೆಗಳ ವ್ಯಾಪ್ತಿಯಲ್ಲಿ 9 ಬೈಕ್ ಕಳವು ಮಾಡಿರುವುದನ್ನು ಬಾಯ್ಬಿಟ್ಟಿದ್ದರು ಎಂದು ಪೊಲೀಸರು ಹೇಳಿದರು.