ಬೆಂಗಳೂರು: ವಿಚಿತ್ರ ವೇಷ ಧರಿಸಿ ಸ್ಟಂಟ್ ಮಾಡುವ ಭರದಲ್ಲಿ ಪಕ್ಕದಲ್ಲಿ ಹೋಗುತ್ತಿದ್ದ ಕಾರಿನ ಮೀರರ್ ಹೊಡೆದು ಹಾಕಿದ್ದ “ಮಿಸ್ಟರ್ ಕ್ರೇಜಿವ್ಲಾಗ್ಸ್’ ನನ್ನು ಯಲಹಂಕ ಸಂಚಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮೊಹಮ್ಮದ್ ಜಾವೇದ್ ಬಂಧಿತ. ಆರೋಪಿ ರೀಲ್ಸ್ ಮಾಡುವುದನ್ನು ವೃತ್ತಿಯನ್ನಾಗಿಸಿಕೊಂಡು, ವಿಚಿತ್ರ ವೇಷ ಧರಸಿ ತನ್ನ ಐಷಾರಾಮಿ ಬೈಕ್‌ನಲ್ಲಿ ಏರ್‌ಪೋರ್ಟ್ ರಸ್ತೆಯಲ್ಲಿ ಹೋಗುತ್ತಾನೆ. ಮಾರ್ಗ ಮಧ್ಯೆ ಸಾರ್ವಜನಿಕರು ಹಾಗೂ ಇತರೆ ವಾಹನಗಳ ಸವಾರರಿಗೆ ಸಿಹಿ ಕೊಟ್ಟು ಸಂಭ್ರಮಿಸುತ್ತಾನೆ. ಅದೇ ರೀತಿ ಕೆಲ ದಿನಗಳ ಹಿಂದೆ ವಿಮಾನ ನಿಲ್ದಾಣ ರಸ್ತೆಯಲ್ಲಿ ವಿಚಿತ್ರ ವೇಷ ಧರಿಸಿ ಬೈಕ್‌ನಲ್ಲಿ ಸ್ಟಂಟ್ ಮಾಡಿ, ಪಕ್ಕದಲ್ಲಿ ಹೋಗುತ್ತಿದ್ದ ಕಾರಿನ ಮೀರರ್ ಹೊಡೆದು ಹಾಕಿ, ಒನ್ ವೇನಲ್ಲಿ ಪರಾರಿಯಾಗಿದ್ದ.
ಹೆಲ್ಮೆಟ್‌ಗೆ ವಿಶೇಷವಾದ ಅರಿಶಿನ ಬಟ್ಟೆಯಿಂದ ಹೊಲಿಸಿದ್ದಾನೆ. ಹಾಗೆಯೇ ಅರಿಶಿನ ಬಟ್ಟೆಯನ್ನು ಧರಿಸಿಕೊಂಡು ಸ್ಟಂಟ್ ಮಾಡುತ್ತಿದ್ದ. “ಮೀಸ್ಟರ್ ಕ್ರೇಜಿವ್ಲಾಗ್ಸ್’ ಎಂಬ ಇನ್‌ಸ್ಟ್ರಾಗ್ರಾಂ ಖಾತೆಯಲ್ಲಿ ವಿಡಿಯೋ ಅಪ್‌ಲೋಡ್ ಮಾಡಿಕೊಳ್ಳುತ್ತಿದ್ದ. ಈ ಸಂಬಂಧ ಕಾರಿನ ಮಾಲಿಕ ಹಾಗೂ ಸ್ಥಳೀಯರು ಸಂಚಾರ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಸಂಚಾರ ಪೊಲೀಸರು ಹೇಳಿದರು. ಯಲಹಂಕ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Toby movie; ಉದಯವಾಣಿಯಲ್ಲಿ ಟೋಬಿ…: ರಾಜ್- ಚೈತ್ರ ಜತೆ ಮಾತುಕತೆ