Advertisement

ಬೈಕ್‌ ಸ್ಕಿಡ್‌: ಕೊಯಿಲದ ಯುವಕ ಸಕಲೇಶಪುರದಲ್ಲಿ ಸಾವು

10:56 AM Nov 02, 2018 | |

ಆಲಂಕಾರು: ಕಡಬ ತಾಲೂಕಿನ ಕೊಯಿಲ ಗ್ರಾಮದ ಯುವಕ, ಪುತ್ತೂರಿನ ವಿವೇಕಾನಂದ ಕಾನೂನು ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿ ಉಜ್ವಲ್‌ ಮಂಜುನಾಥ್‌ (22) ಅವರು ಶುಕ್ರವಾರ ಮುಂಜಾನೆ ಸಕಲೇಶಪುರ ಠಾಣಾ ವ್ಯಾಪ್ತಿಯ ಬಾಳುಪೇಟೆ ಬಳಿಯ ಕೊಂಬಾರುಗಟ್ಟೆ ಎಡೆಹಳ್ಳಿ ಕ್ರಾಸನಲ್ಲಿ  ಸಂಭವಿಸಿದ ಬೈಕ್‌ ಅಪಘಾತದಲ್ಲಿ ಮೃತಪಟ್ಟಿದ್ದಾರೆ. 

Advertisement

ಕೊಯಿಲ ಪೂರಿಂಗ ನಿವಾಸಿ ಉದಯ ಕುಮಾರ್‌ ಅವರ ಏಕೈಕ ಪುತ್ರನಾಗಿದ್ದ ಇವರು ಬುಲೆಟ್‌ನಲ್ಲಿ ಹಾಸನದಿಂದ ಊರಿಗೆ ಬರುತ್ತಿದ್ದಾಗ  ಅಪಘಾತ ಸಂಭವಿಸಿದೆ.


ಚಾರಣ ಹಾಗೂ ಛಾಯಾಚಿತ್ರಗ್ರಹಣದಲ್ಲಿ ಅತಿಯಾದ ಆಸಕ್ತಿ ಹೊಂದಿದ್ದ ಇವರು ತನ್ನ ಮೂವರು ಸಹಪಾಠಿಗಳಾದ ಬಂಟ್ವಾಳ ತಾಲೂಕಿನ ಬಾಳ್ತಿಲ ನಿವಾಸಿ ರಂಜಿತ್‌, ಬೆಳ್ತಂಗಡಿಯ ಜಾಬಿದ್‌ ಹಾಗೂ ಕುಲದೀಪ್‌ ಅವರೊಂದಿಗೆ ಹಾಸನದ ಶೆಟ್ಟಿಹಳ್ಳಿಯ ಹಳೆಯ ಚರ್ಚೊದರ ಸೂರ್ಯೋದಯದ  ದೃಶ್ಯಗಳನ್ನು ಕೆಮರಾದಲ್ಲಿ  ಸೆರೆ ಹಿಡಿಯಲು ಹೋಗಿದ್ದರು. ಗುರುವಾರ ತಮ್ಮ ಕಾಲೇಜಿನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಪೂರ್ವ ತಯಾರಿ ಮಾಡುವ ಉದ್ದೇಶದಿಂದ ಬುಧವಾರ ರಾತ್ರಿ 11 ಗಂಟೆ  ತನಕ ಕಾಲೇಜಿನಲ್ಲೇ ಇದ್ದು, ಬಳಿಕ ಎರಡು ಬೈಕಿನಲ್ಲಿ  ಹಾಸನಕ್ಕೆ ಹೊರಟಿದ್ದರು. ಶೆಟ್ಟಿಹಳ್ಳಿಗೆ ಮುಂಜಾನೆ ಐದು ಗಂಟೆ ವೇಳೆಗೆ ತಲುಪಿ ಆರು ಗಂಟೆಗೆ  ಸ್ಟೇಟಸ್‌ನಲ್ಲಿ ತಾನು ತೆಗೆದಿರುವ ಫೋಟೋವನ್ನು ಶೇರ್‌ ಮಾಡಿಕೊಂಡಿದ್ದರು. 

ಕೊಂಬಾರುಗಟ್ಟೆ ಎಡೆಹಳ್ಳಿ ಕ್ರಾಸ್‌ ಬಳಿ ಹೆದ್ದಾರಿ ಅಭಿವೃದ್ಧಿ ಕಾರ್ಯ ನಡೆಯುತ್ತಿದ್ದು, ರಸ್ತೆಯಲ್ಲಿದ್ದ ಗುಂಡಿ ಗಮನಕ್ಕೆ ಬಾರದೆ ಬೈಕ್‌  ಸ್ಕಿಡ್‌ ಆಗಿ ಎಸೆಯಲ್ಪಟ್ಟಿದೆ. ಪರಿಣಾಮ ಉಜ್ವಲ್‌ ಮಂಜನಾಥ್‌ ಅವರ ಎದೆಗೆ ಬೈಕಿನ ಹ್ಯಾಂಡಲ್‌ ತಾಗಿ ಬಲವಾದ ಪೆಟ್ಟಾಗಿದೆ. ಎಡಗೈ ಮುರಿದಿದ್ದು, ತಲೆ ಹಾಗೂ  ಹೊಟ್ಟೆಗೂ ಗಂಭೀರ ಗಾಯಗಳಾಗಿದ್ದವು. ಇನ್ನೊಂದು ಬೈಕಿನಲ್ಲಿದ್ದವರು ತತ್‌ಕ್ಷಣ ಹಾಸನ ಸರಕಾರಿ ಆಸ್ಪತ್ರೆಗೆ ದಾಖಲಿಸಿದರೂ ಫ‌ಲಕಾರಿಯಾಗಿಲ್ಲ.  ಹಿಂಬದಿ ಸವಾರ ರಂಜಿತ್‌ಗೂ ಗಾಯವಾಗಿದೆ.  ಸಕಲೇಶಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಂಜೆ ವೇಳೆಗೆ ಮೃತದೇಹವನ್ನು ಕೊಯಿಲ ಮನೆಗೆ ತರಲಾಯಿತು.ಅವರು ಓರ್ವ ಸಹೋದರಿ  ಹಾಗೂ ತಂದೆ ತಾಯಿಯನ್ನು ಅಗಲಿದ್ದಾರೆ. 

ಮೃತರ ಮನೆಗೆ ಆರೆಸ್ಸೆಸ್‌ ಮುಖಂಡ ಡಾ| ಪ್ರಭಾಕರ ಭಟ್‌ ಕಲ್ಲಡ್ಕ,  ವಿವೇಕಾನಂದ ಕಾನೂನು ಕಾಲೇಜಿನ ಸಂಚಾಲಕ ಗಣೇಶ್‌ ಜೋಷಿ, ತಾಲೂಕು ಪಂಚಾಯತ್‌ ಸದಸ್ಯೆ ಜಯಂತಿ ಆರ್‌ ಗೌಡ, ಕೊಯಿಲ ಗ್ರಾಮ ಪಂಚಾಯತ್‌ ಅಧ್ಯಕ್ಷೆ ಹೇಮಾ ಮೋಹನ್‌ದಾಸ್‌ ಶೆಟ್ಟಿ, ರಾಮಕುಂಜ ಗ್ರಾಮ ಪಂಚಾಯತ್‌ ಅಧ್ಯಕ್ಷ ಪ್ರಶಾಂತ್‌ ಆರ್‌.ಕ., ಆಲಂಕಾರು ಸಿಎ ಬ್ಯಾಂಕ್‌ ಅಧ್ಯಕ್ಷ ರಮೇಶ್‌ ಭಟ್‌ ಉಪ್ಪಂಗಳ, ವಿವೇಕಾನಂದ ಕಾಲೇಜಿನ ಪ್ರಿನ್ಸಿಪಾಲ್‌, ಉಪನ್ಯಾಸಕ ವರ್ಗ ಹಾಗೂ ನೂರಾರು ವಿದ್ಯಾರ್ಥಿಗಳು ಭೇಟಿ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next