Advertisement

ಕುಡಿದು ದ್ವಿಚಕ್ರ ವಾಹನ ಓಡಿಸಿ ವೃದ್ಧೆ ಬಲಿ ಪಡೆದ ಸವಾರ ಸೆರೆ

12:05 PM Jun 10, 2024 | Team Udayavani |

ಬೆಂಗಳೂರು: ಮದ್ಯದ ಅಮಲಿನಲ್ಲಿ ದ್ವಿಚಕ್ರ ವಾಹನ ಸವಾರ ಅತೀ ವೇಗವಾಗಿ ಬೈಕ್‌ ಚಾಲನೆ ಮಾಡಿ ಪಾದಚಾರಿ ವೃದ್ಧೆಗೆ ಡಿಕ್ಕಿ ಹೊಡೆದ ಪರಿಣಾಮ ಆಕೆ ಮೃತಪಟ್ಟಿರುವ ಘಟನೆ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಹೇರೋಹಳ್ಳಿ ನಿವಾಸಿ ಶಿವಮ್ಮ (66) ಮೃತರು. ಶನಿವಾರ ಬೆಳಗ್ಗೆ ಸುಮಾರು 8.45ಕ್ಕೆ ಅಂದ್ರಹಳ್ಳಿ ಮುಖ್ಯರಸ್ತೆಯ ಹೇರೋಹಳ್ಳಿ ಕೆರೆ ಮೋರಿ ಬಳಿ ಈ ಘಟನೆ ನಡೆದಿದೆ.

ಶನಿವಾರ ಬೆಳಗ್ಗೆ ಶಿವಮ್ಮ ವಾಯುವಿಹಾರ ಮುಗಿಸಿಕೊಂಡು ಮನೆ ಕಡೆಗೆ ತೆರಳುತ್ತಿದ್ದರು. ಅದೇ ಸಮಯಕ್ಕೆ ಅಂದ್ರಹಳ್ಳಿ ಮುಖ್ಯರಸ್ತೆಯಲ್ಲಿ ಪಾನಮತ್ತ ಸುನೀಲ್‌ ದ್ವಿಚಕ್ರ ವಾಹನವನ್ನು ವೇಗವಾಗಿ ಚಾಲನೆ ಮಾಡಿಕೊಡಿಕೊಂಡು ಬಂದು ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಶಿವಮ್ಮಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ರಭಸಕ್ಕೆ ಗಂಭೀರವಾಗಿ ಗಾಯಗೊಂಡ ಶಿವಮ್ಮರನ್ನು ಸ್ಥಳೀಯರು ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ತಲೆಗೆ ಗಂಭೀರ ಪೆಟ್ಟು ಬಿದ್ದಿದ್ದ ಪರಿಣಾಮ ತೀವ್ರ ರಕ್ತಸ್ರಾವವಾಗಿ ಚಿಕಿತ್ಸೆ ಫ‌ಲಿಸದೆ ಶಿವಮ್ಮ ಮೃತಪಟ್ಟಿದ್ದಾರೆ. ಬಳಿಕ ಆಟೋ ಚಾಲಕರೊಬ್ಬರು ನೀಡಿದ ದೂರಿನ ಮೇರೆಗೆ ತನಿಖೆ ಕೈಗೊಂಡ ಸಂಚಾರ ಪೊಲೀಸರು, ದ್ವಿಚಕ್ರ ವಾಹನ ಸವಾರ ಸುನೀಲ್‌ನನ್ನು ವಶಕ್ಕೆ ಪಡೆದು ಆಲ್ಕೋಮೀಟರ್‌ನಲ್ಲಿ ಪರೀಕ್ಷೆ ಮಾಡಿದಾಗ ಆತ ಮದ್ಯ ಸೇವಿಸಿರುವುದು ದೃಢಪಟ್ಟಿದೆ. ಬಳಿಕ ಆತನನ್ನು ಬಂಧಿಸಿ ವೈದ್ಯಕೀಯ ಪರೀಕ್ಷೆ ಮಾಡಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆರೋಪಿಯನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದರು.

ಈ ಸಂಬಂಧ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next