ಬೆಂಗಳೂರು: ರಾಜಾಜಿನಗರದ ಒರಾಯನ್ ಮಾಲ್ ಸಮಿಪದ ಮನೆ ಒಂದರ ಮಂದೆ ಕೀ ಸಮೇತ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಂಡ ಸುಬ್ರಹ್ಮಣ್ಯನಗರ ಠಾಣೆ ಪೊಲೀಸರು, ಯಾರಾದರೂ ಕದ್ದೊಯ್ಯಬಹುದೆಂದು ಭಾವಿಸಿ ತಾವೇ ಠಾಣೆಗೆ ಕೊಂಡೊಯ್ದ ಘಟನೆ ಶುಕ್ರವಾರ ತಾತ್ರಿ ನಡೆದಿದೆ.
ಆದರೆ, ಶನಿವಾರ ಬೆಳಗ್ಗೆ ಎದ್ದು ಸಿಸಿ ಕ್ಯಾಮೆರಾ ದೃಶ್ಯಾವಳಿ ಚೆಕ್ ಮಾಡಿದ ಬೈಕ್ ಮಾಲೀಕ, ಪೊಲೀಸರೇ ಬೈಕ್ ಕದ್ದಿದ್ದಾರೆ ಎಂದು ಆರೋಪಿಸಿ ದೂರು ನೀಡಲು ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಗೆ ಹೋಗಿ, ಅಲ್ಲಿ ತಮ್ಮ ಬೈಕ್ ಕಂಡು ಶಾಕ್ ಆಗಿದ್ದಾರೆ. ಶುಕ್ರವಾರ ರಾತ್ರಿ ದ್ವಿಚಕ್ರವಾಹನವನ್ನು ಠಾಣೆಗೆ ಕೊಂಡೊಯ್ದ ಪೊಲೀಸರು, ಮರುದಿನ ಪ್ರಕರಣ ದಾಖಲಿಸಿಕೊಂಡು, ಶನಿವಾರ ಠಾಣೆಗೆ ಬಂದ ಮಾಲೀಕರಿಗೆ ವಾಹನ ಹಸ್ತಾಂತರಿಸಿದ್ದಾರೆ.
ಇತ್ತೀಚೆಗೆ ರಾಜಾಜಿನಗರ ಒರಾಯನ್ ಮಾಲ್ ಹಾಗೂ ಸ್ವಾಮಿ ವಿವೇಕಾನಂದ ಕಾಲೇಜು ಸುತ್ತಮುತ್ತ ದ್ವಿಚಕ್ರ ವಾಹನಗಳ ಕಳವು ಪ್ರಕರಣಗಳು ಹೆಚ್ಚಾಗಿದ್ದವು. ಅಲ್ಲದೆ, ಕೆಲವರು ಬೀಗವನ್ನು ಬೈಕ್‌ನಲ್ಲೇ ಬಿಟ್ಟು ಹೋಗುತ್ತಿದ್ದರು. ಇಂತಹ ವಕಾಶಕ್ಕಾಗಿ ಕಾದು ಕುಳಿತಿರುತ್ತಿದ್ದ ಕಳ್ಳರು, ಕೀ ಬಿಟ್ಟು ಹೋದ ಬೈಕ್‌ಗಳನ್ನು ಪತ್ತೆಹಚ್ಚಿ, ನಾಯಾಸವಾಗಿ ಬೈಕ್ ಕಳವು ಮಾಡಿ ಪರಾರಿಯಾಗುತ್ತಿದ್ದರು. ಹೀಗಾಗಿ ಕೆಲ ತಿಂಗಳಿಂದ ಈ ವ್ಯಾಪ್ತಿಯಲ್ಲಿ ಸಿಬ್ಬಂದಿ ನಿಯೋಜಿಸಿ ಕಳ್ಳರ ಮೇಲೆ ನಿಗಾ ಇರಿಸಲಾಗಿತ್ತು.
ಈ ಮಧ್ಯೆ ಶುಕ್ರವಾರ ರಾತ್ರಿ ಪಾಳಿಯಲ್ಲಿದ್ದ ಇಬ್ಬರು ಪೊಲೀಸ್ ಸಿಬ್ಬಂದಿ, ಒರಾಯನ್ ಮಾಲ್ ಪಕ್ಕದ ಆರ್.ಪಿ.ರಸ್ತೆಯಲ್ಲಿ ಗಸ್ತು ತಿರುಗುತ್ತಿದ್ದರು. ಈ ವೇಳೆ ಕೀ ಸಮೇತ ಬೈಕ್‌ವೊಂದು ಮನೆ ಮುಂಭಾಗ ನಿಂತಿತ್ತು. ಕಳ್ಳರ ಕಣ್ಣಿಗೆ ಬೀಳುವ ಮುನ್ನವೇ ಬೈಕನ್ನು ಠಾಣೆಗೆ ಕೊಂಡೊಯ್ದ ಸಿಬ್ಬಂದಿ, ಠಾಣೆಯ ಹಿರಿಯ ಸಿಬ್ಬಂದಿಗೆ ಮಾಹಿತಿ ನೀಡಿ ಮನೆಗೆ ತೆರಳಿದ್ದರು.
ಶನಿವಾರ ಬೆಳಗ್ಗೆ ಮನೆಯಿಂದ ಹೊರಬಂದ ಬೈಕ್ ಮಾಲೀಕ, ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಇಲ್ಲದಿರುವುದನ್ನು ಕಂಡು ಗಾಬರಿಗೊಂಡಿದ್ದಾರೆ. ಬಳಿಕ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಪೊಲೀಸ್ ಸಿಬ್ಬಂದಿ ಬೈಕ್ ತೆಗೆದುಕೊಂಡು ಹೋಗುತ್ತಿರುವ ದೃಶ್ಯ ಸೆರೆಯಾಗಿತ್ತು. ಈ ಸಂಬಂಧ ದೂರು ನೀಡಲು ಠಾಣೆಗೆ ಬಂದ ಬೈಕ್ ಮಾಲೀಕನಿಗೆ ಅಚ್ಚರಿ ಕಾದಿತ್ತು. ಏಕೆಂದರೆ, ಅವರ ಬೈಕ್ ಠಾಣೆಯ ಆವರಣದಲ್ಲೇ ನಿಂತಿತ್ತು.
ಬಳಿಕ ಪ್ರಕರಣ ದಾಖಲಿಸಿಕೊಂಡು ಕೀ ಸಮೇತ ಬೈಕ್ ನಿಲ್ಲಿಸದಂತೆ ಎಚ್ಚರಿಕೆ ನೀಡಿ ಕಳುಹಿಸಲಾಗಿದೆ. ಕೀ ಬೈಕ್‌ನಲ್ಲೇ ಇದ್ದಿದ್ದರಿಂದ ಕಳ್ಳರು ಅದನ್ನು ಸುಲಭವಾಗಿ ಕದ್ದೊಯ್ಯಬಹುದೆಂಬ ಕಾರಣಕ್ಕೆ ಮುಂಜಾಗ್ರತೆ ವಹಿಸಿದ ಪೊಲೀಸ್ ಸಿಬ್ಬಂದಿ, ದ್ವಿಚಕ್ರವಾಹನವನ್ನು ಪೊಲೀಸ್ ಠಾಣೆಗೆ ತಂದು ನಿಲ್ಲಿಸಿದ್ದಾರೆ. ಅವರು ಬೈಕ್ ಕಳವು ಮಾಡಿಲ್ಲ ಎಂದು ಸುಬ್ರಹ್ಮಣ್ಯನಗರ ಪೊಲೀಸರು ಸ್ಪಷ್ಟಪಡಿಸಿದ್ದಾರೆ.