ಬೆಂಗಳೂರು: ಬಹು ಅಂಗಾಂಶ ಗಟ್ಟಿಯಾಗುವ (ಮಲ್ಟಿಪಲ್ ಸ್ಕೆರಾಸಿಸ್) ರೋಗ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಮಲ್ಟಿಪಲ್ ಸ್ಕೆರಾಸಿಸ್ ಸೊಸೈಟಿ ಆಫ್ ಇಂಡಿಯ (ಎಂಎಸ್‌ಎಸ್‌ಐ) ಹಾಗೂ ಒಮೇಗಾ ಹೆಲ್ತ್‌ಕೇರ್ ವತಿಯಿಂದ ನಗರದಲ್ಲಿ ಶನಿವಾರ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು.
ಬೆಳಗ್ಗೆ 8 ಗಂಟೆಗೆ ಎನ್‌ಎಎಲ್ ಎಂಡ್ ಟನೆಲ್ ರಸ್ತೆಯ ಒಮೇಗಾ ಹೆಲ್ತ್‌ಕೇರ್ ಕಚೇರಿಯ ಬಳಿ ಆರಂಭವಾದ ಈ ರ್ಯಾಲಿಗೆ ರಾಜ್ಯ ಅಂಗವಿಕಲರ ನಿರ್ದೇಶನಾಲಯದ ಆಯುಕ್ತರಾದ ವಿ.ಎಸ್.ಬಸವರಾಜು ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ರೋಗಗಳು ಮತ್ತು ಅವುಗಳ ಚಿಕಿತ್ಸೆ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳಿಗೆ ಸರ್ಕಾರ ಸದಾ ನೆರವು ನೀಡುತ್ತದೆ.
ನಿರ್ದಿಷ್ಟ ವೈಕಲ್ಯ ಹೊಂದಿರುವ ಜನರಿಗೆ ಬೆಂಬಲ ನೀಡುವುದು ನಮಗೆ ಮುಖ್ಯಗುರಿಯಾಗಿದೆ. ಇತ್ತೀಚೆಗೆ ಹೆಚ್ಚಾಗಿರುವ ಬಹು ಅಂಗಾಂಶ ಗಟ್ಟಿಯಾಗುವ ರೋಗ ಬಗ್ಗೆ ಪ್ರಚಾರ ನಡೆಸಲು ಮುಂದಾಗಿರುವ ಎಂಎಸ್‌ಎಸ್‌ಐ ಹಾಗೂ ಒಮೇಗಾ ಹೆಲ್ತ್‌ಕೇರ್ ಸಂಸ್ಥೆಗೆ ನಮ್ಮ ಬೆಂಬಲವಿದೆ. ಸರ್ಕಾರದ ಇಲಾಖೆಗಳು, ಎನ್‌ಜಿಒಗಳು ಹಾಗೂ ಕಾರ್ಪೋರೇಟ್ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡಿದರೆ ಸಮಾಜದಲ್ಲಿ ಹೆಚ್ಚಿನ ಬದಲಾವಣೆ ತರಬಹುದು ಎಂದರು.
ಎಂಎಸ್‌ಎಸ್‌ಐ ಬೆಂಗಳೂರು ಚಾಪ್ಟರ್‌ನ ಗೌರವ ಕಾರ್ಯದರ್ಶಿ ಪಂಕಜ್ ಗುಪ್ತಾ ಮಾತನಾಡಿ, ನರಗಳು ದೀರ್ಘಕಾಲದಲ್ಲಿ ಹಂತ ಹಂತವಾಗಿ ಕ್ಷೀಣಿಸುವಂತಹ ಸ್ಥಿತಿಯೇ ಈ ಬಹು ಅಂಗಾಂಶ ಗಟ್ಟಿಯಾಗುವ ರೋಗ (ಎಂಎಸ್). ಇದು ದೇಹದ ಕೇಂದ್ರ ನರ ವ್ಯವಸ್ಥೆಯ ಬೇರೆ ಬೇರೆ ಭಾಗಗಳ ಮೇಲೆ ಪರಿಣಾಮ ಉಂಟು ಮಾಡುತ್ತದೆ. 20 ರಿಂದ 40 ವರ್ಷ ವಯೋಮಿತಿಯವರನ್ನು ಸಾಮಾನ್ಯವಾಗಿ ಕಾಡುತ್ತದೆ.
ದೈನಂದಿನ ಸರಳ ಚಟುವಟಿಕೆಗಳನ್ನು ಕೂಡ ಈ ರೋಗಿಗೆ ಮಾಡಲು ಸಾಧ್ಯವಾಗುವುದಿಲ್ಲ. ದೇಹದ ಹಲವಾರು ಭಾಗಗಳ ಮೇಲೆ ಇದು ಪರಿಣಾಮ ಉಂಟು ಮಾಡುತ್ತದೆ. ರೋಗಿಯ ಜೀವನದ ಗುಣಮಟ್ಟದ ಮೇಲೆ ಬಹಳಷ್ಟು ಪರಿಣಾಮ ಬೀರುತ್ತದೆ ಎಂದರು.
ಇಂದು ಜಗತ್ತಿನಲ್ಲಿ ಸುಮಾರು 2.3 ದಶಲಕ್ಷ ಜನರು ಈ ರೋಗದಿಂದ ಬಳಲುತ್ತಿದ್ದಾರೆ. ಭಾರತದಲ್ಲಿ ಬಹು ಅಂಗಾಂಶ ಗಟ್ಟಿಯಾಗುವ ರೋಗದಿಂದ ಬಳಲುತ್ತಿರುವ ರೋಗಿಗಳ ಸಂಖ್ಯೆ ಸುಮಾರು 1,80,000 ಎಂದು ಅಂದಾಜು ಮಾಡಲಾಗಿದೆ ಎಂದು ತಿಳಿಸಿದರು. ರ್ಯಾಲಿಯಲ್ಲಿ 200 ಬೈಕ್ ಸವಾರರು ಭಾಗವಹಿಸಿದ್ದು, ಹೊಸೂರು ರಸ್ತೆಯ ನಿಮ್ಹಾನ್ಸ್ ಆಸ್ಪತ್ರೆ ಸಮೀಪ ರ್ಯಾಲಿ ಮುಕ್ತಾಯಗೊಂಡಿತು.
ಒಮೇಗಾ ಹೆಲ್ತ್‌ಕೇರ್ ಮ್ಯಾನೇಜ್‌ಮೆಂಟ್ ಸರ್ವೀಸಸ್ ಪ್ರ„ವೇಟ್ ಲಿ. ಹಣಕಾಸು ವಿಭಾಗದ ಉಪಾಧ್ಯಕ್ಷರು ಪುರುಷೋತ್ತಮ ರೆಡ್ಡಿ, ಈ ರೋಗದಿಂದ ಬಳುತ್ತಿರುವವರು, ಒಮೇಗಾ ಹೆಲ್ತ್‌ಕೇರ್‌ನ ಉದ್ಯೋಗಿಗಳು, ರೋಟರಿ ಕ್ಲಬ್ ಸದಸ್ಯರು ಉಪಸ್ಥಿತರಿದ್ದರು.