ಹೊನ್ನಾಳಿ: ಸ್ವತ್ಛತೆ ವೈಯಕ್ತಿಕ ಆರೋಗ್ಯವಲ್ಲದೇ ಸಮುದಾಯದ ಆರೋಗ್ಯವನ್ನೂ ಕಾಪಾಡುತ್ತದೆ ಎಂದು ತಾ.ಪಂ ಇಒ ಕೆ.ಸಿ. ಮಲ್ಲಿಕಾರ್ಜುನ ಹೇಳಿದರು. ಸ್ವತ್ಛ ಸರ್ವೇಕ್ಷಣ ಗ್ರಾಮೀಣ-2018 ಅಡಿಯಲ್ಲಿ ರಾಜ್ಯ ಸರ್ಕಾರ, ಜಿ.ಪಂ ಮತ್ತು ತಾ.ಪಂ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಸ್ವತ್ಛ ಅಭಿಯಾನ ಬೈಕ್ ರ್ಯಾಲಿ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಂದು ಕುಟುಂಬ ವೈಯಕ್ತಿಕ ಶೌಚಾಲಯ ಬಳಕೆ ಮಾಡಬೇಕು. ಇದರಿಂದ ಕುಟುಂಬದ ಆರೋಗ್ಯ ವೃದ್ಧಿಸಿ ಸಮಾಜದ ಸ್ವಾಸ್ಥ್ಯಾ ಕಾಪಾಡಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯ ನೇಮಿಸಿರುವ ಖಾಸಗಿ ಸಂಸ್ಥೆಗಳು ಮತ್ತು ಪ್ರಾಯೋಜಕತ್ವ ಸಂಸ್ಥೆಗಳು ಸ್ವತ್ಛತೆ ಸರ್ವೇಕ್ಷಣೆಗೆ ಗ್ರಾಮಗಳಿಗೆ ಆಗಮಿಸಿ ಮುಖ್ಯವಾಗಿ ಕಸ ವಿಲೇವಾರಿ, ವೈಯಕ್ತಿಕ ಶೌಚಾಲಯ ಬಳಕೆ, ಶಾಲೆ-ಅಂಗನವಾಡಿ ಶೌಚಾಲಯ ಬಳಕೆ ಮತ್ತು ಸಾರ್ವಜನಿಕ ಸ್ಥಳಗಳ ಸ್ವತ್ಛತೆ ಪರಿಶೀಲಿಸಲಿದ್ದಾರೆ. ಈ ಕುರಿತು ಧನಾತ್ಮಕವಾಗಿ ಚಿಂತಿಸಿ ಕೆಲಸ ಮಾಡಬೇಕು ಎಂದು ಹೇಳಿದರು.
ಬೈಕ್ ರ್ಯಾಲಿ ಪ.ಪಂ ಸಾಮರ್ಥ್ಯಸೌಧ ದಿಂದ ಆರಂಭಗೊಂಡು ಸಂಗೊಳ್ಳಿ ರಾಯಣ್ಣ ವೃತ್ತ, ಕುರಿ ಸಂತೆ, ಹಳದಮ್ಮ ದೇವಸ್ಥಾನ, ಕ್ಯಾನರಾ ಬ್ಯಾಂಕ್ ರಸ್ತೆ ಮೂಲಕ ಪುನಃ ತಾ.ಪಂ ಕಚೇರಿಗೆ ಆಗಮಿಸಿತು. ಸಹಾಯಕ ಅಧಿಕಾರಿ ರಾಘವೇಂದ್ರ, ಪಿಡಿಒಗಳು ಉಪಸ್ಥಿತರಿದ್ದರು.