ಕಾಪು : ಪ್ರಯಾಣಿಕರನ್ನು ಹತ್ತಿಸಲು ರಾ. ಹೆ. 66ರಲ್ಲಿ ಹಠಾತ್ತನೇ ನಿಂತ ಬಸ್‌ಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲೆತ್ನಿಸಿದ ಬೈಕ್‌ಗೆ ಹಿಂದಿನಿಂದ ಲಾರಿ ಢಿಕ್ಕಿ ಹೊಡೆದ ಪರಿಣಾಮ ಬೈಕ್‌ನಿಂದ ಕೆಳಗೆ ಬಿದ್ದ ಸಹ ಸವಾರೆ ಸ್ಥಳದಲ್ಲೇ ಮೃತಪಟ್ಟ ಘಟನೆ ರವಿವಾರ ಸಂಜೆ ಕಟಪಾಡಿ ಜಂಕ್ಷನ್‌ನಲ್ಲಿ ನಡೆದಿದೆ.
ಕಟೀಲು ಸಮೀಪದ ಅಜಾರು – ಜಳಕದಕಟ್ಟೆ ನಿವಾಸಿ ವಸಂತ ಆಚಾರ್ಯ ಅವರ ಪುತ್ರಿ ಸುಶ್ಮಿತಾ ಆಚಾರ್ಯ (11) ಮೃತ ಬಾಲಕಿ.
ಮೃತ ಬಾಲಕಿ ಸುಶ್ಮಿತಾ ಆಚಾರ್ಯ ಅವರ ಚಿಕ್ಕಪ್ಪ ನಾರಾಯಣ ಆಚಾರ್ಯ ಅವರು ಕಾಪೆìಂಟರ್ ವೃತ್ತಿಯನ್ನು ಮಾಡುತ್ತಿದ್ದು, ಉಡುಪಿ ಕೊಳಂಬೆಯಲ್ಲಿ ನಡೆಸುತ್ತಿದ್ದ ಕೆಲಸವನ್ನು° ವೀಕ್ಷಿಸಲೆಂದು ಅವರೊಂದಿಗೆ ಬೈಕ್‌ನಲ್ಲಿ ಉಡುಪಿ ಕಡೆಗೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.
ಲಾರಿಯಡಿ ಸಿಲುಕಿದ ಬಾಲಕಿ: ಮಂಗಳೂರಿ ನಿಂದ ಉಡುಪಿಗೆ ತೆರಳುತ್ತಿದ್ದ ಬಸ್‌ನ ಚಾಲಕ ಕಟಪಾಡಿ ಜಂಕ್ಷನ್‌ನಲ್ಲಿ ಪ್ರಯಾಣಿಕರನ್ನು ಹತ್ತಿಸಲು ಹೆದ್ದಾರಿಯಲ್ಲೇ ನಿಲ್ಲಿಸಿದ್ದು ಅದೇ ಸಮಯದಲ್ಲಿ ಹಿಂದಿನಿಂದ ಬಂದ ಬೈಕ್ ಸವಾರ ಗಲಿಬಿಲಿಗೊಂಡು ಬ್ರೇಕ್ ಹಾಕಿದ್ದರು. ಇದೇ ಸಂದರ್ಭ ಹಿಂದಿನಿಂದ ಬಂದ ಲಾರಿ ಬೆೈಕ್ ಮೇಲೆ ಹರಿದಿದ್ದು, ಲಾರಿಯಡಿಗೆ ಸಿಲುಕಿದ ಸಹ ಸವಾರೆ ಸುಶ್ಮಿತಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಅಪಘಾತದದಿಂದಾಗಿ ರಾ. ಹೆ. 66ರಲ್ಲಿ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಕಟಪಾಡಿ ಹೊರ ಠಾಣಾ ಪೊಲೀಸರು ಸ್ಥಳಕ್ಕೆ ಧಾವಿಸಿ ಸಂಚಾರವನ್ನು ಸುಗಮಗೊಳಿಸಿದ್ದಾರೆ.ಸವಾರ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.ಕಾಪು ಪೊಲೀ ಸರು ಪ್ರಕರಣ ದಾಖಲಿಸಿಕೊಂದ್ದಾರೆ.
ಪ್ರತಿಭಾನ್ವಿತ ವಿದ್ಯಾರ್ಥಿನಿ: ವಸಂತ ಆಚಾರ್ಯ ಮತ್ತು ಶಕುಂತಳಾ ಆಚಾರ್ಯ ಅವರ ಒಬ್ಬಳೇ ಮಗಳಾಗಿರುವ ಸುಶ್ಮಿತಾ ಆಚಾರ್ಯ ಕಟೀಲು ದುರ್ಗಾಪರಮೇಶ್ವರಿ ಕನ್ನಡ ಮಾಧ್ಯಮ ಶಾಲೆಯ ಏಳನೇ ತರಗತಿಯ ವಿದ್ಯಾರ್ಥಿನಿಯಾಗಿದ್ದು, ಪ್ರತಿಭಾನ್ವಿತಳಾಗಿ ಶಾಲೆಯಲ್ಲಿ ಅಚ್ಚುಮೆಚ್ಚಿನ ವಿದ್ಯಾರ್ಥಿನಿಯಾಗಿ ಗುರುತಿಸಲ್ಪಟ್ಟಿದ್ದಳು.