ಬೆಂಗಳೂರು: ವ್ಹೀಲಿಂಗ್ ಮಾಡುತ್ತಿದ್ದವರನ್ನು ತಡೆಯಲು ಹೋದ ಪೊಲೀಸ್ ಪೇದೆಗೇ ಬೈಕ್ ಡಿಕ್ಕಿ ಹೊಡೆಸಿ ದುಷ್ಕರ್ಮಿ ಪರಾರಿಯಾದ ಘಟನೆ ಯಲಹಂಕದಲ್ಲಿ ನಡೆದಿದೆ.
ಬೈಕ್ ಡಿಕ್ಕಿಯಿಂದ ಗಾಯಗೊಂಡಿರುವ ಪೊಲೀಸ್ ಪೇದೆ ಮರ್ತಾಂಡಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಯಲಹಂಕ ಸಂಚಾರ ಠಾಣೆ ಪೊಲೀಸರು, ದುಷ್ಕರ್ಮಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಇತ್ತೀಚೆಗೆ ಯುವಕರು ಬೈಕ್ ವ್ಹೀಲಿಂಗ್ ಮಾಡುತ್ತಿದ್ದು, ವಾಹನಸವಾರರು ತೊಂದರೆ ಅನುಭವಿಸುತ್ತಿದ್ದಾರೆ ಎಂಬ ದೂರುಗಳು ಬಂದಿದ್ದವು.
ಈ ಹಿನ್ನೆಲೆಯಲ್ಲಿ ಮಾರ್ತಾಂಡಪ್ಪ ಹಾಗೂ ಇತರೆ ಸಿಬ್ಬಂದಿ ಭಾನುವಾರ ಮುಂಜಾನೆ 3.30ರ ಸುಮಾರಿಗೆ ಜಕ್ಕೂರು ಜಂಕ್ಷನ್ ಸಮೀಪ ಗಸ್ತಿನಲ್ಲಿದ್ದರು. ಈ ವೇಳೆ ಯುವಕರ ಗುಂಪು ಬೈಕ್ ವ್ಹೀಲಿಂಗ್ ಮಾಡಿಕೊಂಡು ಬಂದಿದೆ.
ಪೊಲೀಸರನ್ನು ಕಂಡ ಕೂಡಲೇ ಹಲವರು ಬೈಕ್ ತಿರುಗಿಸಿಕೊಂಡು ಪರಾರಿಯಾಗಿದ್ದಾರೆ. ಒಬ್ಬ ಮುಂದೆ ಬರುತ್ತಿದ್ದ ಯುವಕನನ್ನು ಪೊಲೀಸರು ತಡೆಯಲು ಯತ್ನಿಸಿದಾಗಲೇ ಪೇದೆ ಮಾರ್ತಾಂಡಪ್ಪನಿಗೆ ಡಿಕ್ಕಿ ಹೊಡೆಸಿದ ಯುವಕ ಪರಾರಿಯಾಗಿದ್ದಾನೆ.
ಬೈಕ್ ಡಿಕ್ಕಿಯಾಗಿ ಕೆಳಗೆ ಬಿದ್ದ ಮಾರ್ತಾಂಡಪ್ಪ ಅವರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ. ಆರೋಪಿ ಬೈಕ್ ನಂಬರ್ ಆಧರಿಸಿ ಆತನ ಬಂಧನಕ್ಕೆ ಕ್ರಮ ವಹಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.