Advertisement

Mangaluru ಬಿಜೈ ರಾಜ ಕೊಲೆ ಪ್ರಕರಣ: ಭೂಗತ ಪಾತಕಿ ರವಿ ಪೂಜಾರಿ ಖುಲಾಸೆ

11:59 PM Nov 08, 2023 | Team Udayavani |

ಮಂಗಳೂರು: ಬಿಜೈ ರಾಜನ ಕೊಲೆ ಪ್ರಕರಣದಲ್ಲಿ ಭೂಗತ ಪಾತಕಿ ರವಿ ಪೂಜಾರಿಯನ್ನು ಖುಲಾಸೆಗೊಳಿಸಿ ಮಂಗಳೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

Advertisement

2012 ರಲ್ಲಿ ನಗರದ ಫಳ್ನೀರ್‌ವೆಸ್ಟ್‌ ಗೇಟ್‌ ಟವರ್ಸ್‌ ಕಟ್ಟಡದಲ್ಲಿರುವ ನ್ಯಾಶನಲ್‌ ಮೆಡಿಕಲ್‌ ಬಳಿಯಲ್ಲಿ ರುವ ಕಾಯಿನ್‌ ಬೂತ್‌ ನ ಬಳಿ ರವಿಪೂಜಾರಿ ಒಳಸಂಚು ನಡೆಸಿ ಶೈಲೇಶ್‌ ರಾಜ ಆಲಿಯಾಸ್‌ ಬಿಜೈ ರಾಜನನ್ನು ತಲವಾರಿನಿಂದ ಕಡಿದು ಗಂಭೀರವಾಗಿ ಗಾಯಗೊಳಿಸಿ ಕೊಲೆ ಮಾಡಿಸಿದ್ದ ಎಂಬುದಾಗಿ ರವಿ ಪೂಜಾರಿ ಮತ್ತು ಆತನ ಸಹಚರರ ವಿರುದ್ಧ ಮಂಗಳೂರಿನ ಪೂರ್ವ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದಲ್ಲಿ ಪೊಲೀಸರು ತನಿಖೆ ನಡೆಸಿ ರವಿ ಪೂಜಾರಿ ಮತ್ತು ಅತನ ಸಹಚರರ ಮೇಲೆ ದೋಷರೋಪಣ ಪಟ್ಟಿ ಸಲ್ಲಿಸಿದ್ದರು. ಈ ಘಟನೆಗಳ ಸಮಯ ರವಿಪೂಜಾರಿ ವಿದೇಶದಲ್ಲಿ ತಲೆಮರೆಸಿಕೊಂಡಿದ್ದು, 2021ನೇ ಇಸವಿಯಲ್ಲಿ ರವಿ ಪೂಜಾರಿಯನ್ನು ಸೆನೆಗಲ್‌ನಲ್ಲಿ ಬಂಧಿಸಿ ಭಾರತಕ್ಕೆ ಹಸ್ತಾಂತರಿಸಲಾಗಿತ್ತು. ಅನಂತರ ಆತನ ವಿರುದ್ಧ ದಾಖಲಾದ ಎಲ್ಲ ಪ್ರಕರಣಗಳಲ್ಲಿ ಪೊಲೀಸರು ಹೆಚ್ಚುವರಿ ತನಿಖೆ ನಡೆಸಿ ಹೆಚ್ಚುವರಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ಬಿಜೈ ರಾಜಾ ಕೊಲೆ ಪ್ರಕರಣಗಳಲ್ಲಿ ವಿಚಾರಣೆ ನಡೆಸಿದ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಸ್ವಾಮಿ ಅವರು ರವಿ ಪೂಜಾರಿಯನ್ನು ಖುಲಾಸೆ ಗೊಳಿಸಿ ತೀರ್ಪು ನೀಡಿದ್ದಾರೆ. ರವಿ ಪೂಜಾರಿಯ ವಿರುದ್ಧ ಹಲವು ಪ್ರಕರಣಗಳು ಮಂಗಳೂರು ಹಾಗೂ ಬೆಂಗಳೂರಿನಲ್ಲಿ ತನಿಖೆಗೆ ಬಾಕಿ ಇದೆ.
ರವಿ ಪೂಜಾರಿ ಪರವಾಗಿ ಮಂಗಳೂರಿನ ವಕೀಲರಾದ ಬಿ. ಅರುಣ್‌ ಬಂಗೇರ ಮತ್ತು ರಿಹಾನಾ ಪರ್ವೀನ್‌ ವಾದಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next