ವಿಜಯಪುರ: ಹೋಬಳಿಯ ಬಿಜ್ಜವಾರ ಗ್ರಾಪಂಗೆ ಅಧ್ಯಕ್ಷರಾಗಿ ಅಂಬಿಕಾ ಅವಿರೋಧ ಆಯ್ಕೆಯಾಗಿದ್ದಾರೆ.
ಬಿಜ್ಜವಾರ ಗ್ರಾಪಂ 12 ಸದಸ್ಯರನ್ನೊಳಗೊಂಡಿದ್ದು, 6 ಜೆಡಿಎಸ್ ಬೆಂಬಲಿತರು, 5 ಕಾಂಗ್ರೆಸ್ ಬೆಂಬಲಿತರು ಮತ್ತು 1 ಪಕ್ಷೇತರ ಸದಸ್ಯರಾಗಿ ಆಯ್ಕೆಯಾಗಿದ್ದು, ಕಳೆದ ಸಾಲಿನಲ್ಲಿ ಅಧ್ಯಕ್ಷರಾಗಿದ್ದ ಭಾಗ್ಯ ರಾಜೀನಾಮೆ ನೀಡಿದ ಹಿನ್ನೆಲೆ ಚುನಾವಣೆ ನಡೆದು ಒಬ್ಬರೇ ಅಭ್ಯರ್ಥಿ ನಾಮಪತ್ರ ಸಲ್ಲಿಸಿದ್ದರಿಂದ ಅಂಬಿಕಾ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಅಮೃತಾ ಘೋಷಿಸಿದರು.
ಮೂಲ ಸೌಲಭ್ಯಕ್ಕೆ ಆದ್ಯತೆ: ನೂತನ ಅಧ್ಯಕ್ಷೆ ಅಂಬಿಕಾ ಮಾತನಾಡಿ, ನನಗೆ ಸಿಕ್ಕಿರುವ ಜವಾಬ್ದಾರಿಯುತ ಅಧಿಕಾರವನ್ನು ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ಪಡೆದು ಗ್ರಾಪಂ ವ್ಯಾಪ್ತಿಯಲ್ಲಿ ಮೂಲ ಸೌಲಭ್ಯಕ್ಕೆ ಆದ್ಯತೆ ನೀಡಿ, ಬಿಜ್ಜವಾರ ಪಂಚಾಯತಿಮಾದರಿಯಾಗಲು ಶಕ್ತಿ ಮೀರಿ ಶ್ರಮಿಸುತ್ತೇನೆ ಎಂದು ತಿಳಿಸಿದರು.
ಗ್ರಾಪಂ ಉಪಾಧ್ಯಕ್ಷ ಬಿಜ್ಜವಾರ ನಾಗರಾಜ್ ಮಾತನಾಡಿ, ಸರ್ಕಾರಿ ಸೌಲಭ್ಯಗಳನ್ನುಕಟ್ಟಕಡೆಯ ವ್ಯಕ್ತಿಗೂ ತಲುಪುವಂತಾಗಬೇಕು. ಬಡ ಮತ್ತು ಮಧ್ಯಮ ವರ್ಗದ ಜನ ಪಂಚಾಯತಿಗೆ ಸಮಯಕ್ಕೆ ಸರಿಯಾಗಿ ತೆರಿಗೆ ಪಾವತಿ ಮಾಡುತ್ತಾರೆ. ಆದರೆ, ಉಳ್ಳವರು ತೆರಿಗೆ ಪಾವತಿ ಮಾಡುತ್ತಿಲ್ಲ. ಮುಂದಿನ ದಿನಗಳಲ್ಲಿ ಅವರ ಬಳಿಯೂ ಪಾವತಿ ಮಾಡಿಸಲು ಕ್ರಮ ವಹಿಸುವುದಾಗಿ ತಿಳಿಸಿದರು.
ಬಿಜ್ಜವಾರ ಗ್ರಾಪಂ ಅಭಿವೃದ್ಧಿ ಅಧಿಕಾರಿ ಸತೀಶ್ ಕುಮಾರ್ ಮತ್ತು ಗ್ರಾಪಂ ಸದಸ್ಯರು, ಮುಖಂಡರು ಉಪಸ್ಥಿತರಿದ್ದರು.