ಬಿಹಾರ : ಸಂತಾನ ಹರಣ ಶಸ್ತ್ರ ಚಿಕಿತ್ಸೆಯ ನಂತರವೂ ಮಹಿಳೆಯೋರ್ವಳು ಗರ್ಭ ಧರಿಸಿರುವ ಘಟನೆ ಮುಜಾಫರ್ ಜಿಲ್ಲೆಯಲ್ಲಿ ನಡೆದಿದೆ.
ನಾಲ್ಕು ಮಕ್ಕಳ ತಾಯಿ 30 ವರ್ಷದ ಫುಲಕುಮಾರಿ ದೇವಿಗೆ ಮತ್ತೊಂದು ಮಗು ಹೊಂದುವುದು ಬೇಡವಾಗಿತ್ತು. 2019ರ ಜುಲೈ ತಿಂಗಳಿನಲ್ಲಿ ಮೋತಿಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕುಟುಂಬ ಕಲ್ಯಾಣ ಯೋಜನೆಯಡಿ ಸಂತಾನಹರಣ ಚಿಕಿತ್ಸೆಗೆ ಒಳಗಾಗಿದ್ದರು. ವೈದ್ಯ ಸುಧೀರ್ ಕುಮಾರ್ ಈಕೆಗೆ ಶಸ್ತ್ರಚಿಕಿತ್ಸೆ ಕೈಗೊಂಡಿದ್ದರು. ಆದರೆ, ಶಸ್ತ್ರ ಚಿಕಿತ್ಸೆ ಪಡೆದ ಎರಡು ವರ್ಷಗಳ ನಂತರ ಆಕೆ ಪುನಃ ಗರ್ಭವತಿಯಾಗಿದ್ದಾಳೆ.
ವೈದ್ಯರ ನಿರ್ಲಕ್ಷ್ಯದ ಪರಿಣಾಮ ತಾನು ಗರ್ಭವತಿಯಾದೆ ಎಂದು ಫುಲಕುಮಾರಿ ಆರೋಪಿಸಿದ್ದಾರೆ. ನನಗೆ ಮತ್ತೊಂದು ಮಗು ಬೇಕಾಗಿರಲಿಲ್ಲ. ಅದಕ್ಕಾಗಿಯೇ ಶಸ್ತ್ರಚಿಕಿತ್ಸೆಯ ಮೊರೆ ಹೋಗಿದ್ದೆ.ಆದರೆ, ಸರ್ಕಾರಿ ವೈದ್ಯರ ಕರ್ತವ್ಯಲೋಪದಿಂದ ಮತ್ತೊಮ್ಮೆ ಗರ್ಭಧರಿಸುವಂತಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾಳೆ.
ಗರ್ಭಿಣಿ ಫುಲಕುಮಾರಿ ಸರ್ಕಾರಿ ಆಸ್ಪತ್ರೆಯ ವೈದ್ಯರ ವಿರುದ್ಧ ಕಾನೂನು ಸಮರ ಸಾರಿದ್ದಾರೆ. ಈ ಬಗ್ಗೆ ದೂರು ನೀಡಿರುವ ಆಕೆ, ತನಗೆ ಸರ್ಕಾರ 11 ಲಕ್ಷ ರೂ. ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾಳೆ.
ಇನ್ನು ಕೂಲಿನಾಲಿ ಮಾಡಿಕೊಂಡು ಜೀವನ ಸಾಗಿಸುವ ನಮಗೆ ಹೆಚ್ಚು ಮಕ್ಕಳ ಸಾಕುವ ಸಾಮರ್ಥ್ಯ ಇಲ್ಲ. ಈ ಹಿನ್ನೆಲೆ ನನ್ನ ಪತ್ನಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಿಸಿದ್ದೆ. ಆದರೆ, ವ್ಯದ್ಯರ ನಿರ್ಲಕ್ಷ್ಯದಿಂದ ಅವಳು ಪುನಃ ತಾಯಿಯಾಗುತ್ತಿದ್ದಾಳೆ. ಈ ಬಗ್ಗೆ ವ್ಯದ್ಯ ಸುಧೀರ್ ಕುಮಾರ್ ಅವರನ್ನ ಪ್ರಶ್ನಿಸಿದ್ದರೆ ಸರಿಯಾಗಿ ಪ್ರತಿಕ್ರಿಯಿಸಿಲ್ಲ. ಆದ್ದರಿಂದ ದೂರು ನೀಡಿದ್ದು, ಪರಿಹಾರ ನೀಡಬೇಕು ಎಂದು ಫುಲಕುಮಾರಿ ಪತಿ ಮಾಧ್ಯಮಗಳ ಎದುರು ಹೇಳಿಕೊಂಡಿದ್ದಾರೆ.