ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ರೂಪದ ತಿರುವು ಪಡೆದುಕೊಳ್ಳುತ್ತಿದೆ. ಸುಶಾಂತ್ ಸಿಂಗ್ ಅವರದ್ದು ಆತ್ಮಹತ್ಯೆಯಲ್ಲ, ಕೊಲೆ ಎಂದು ಕೂಗು ಕೇಳಿ ಬರುತ್ತಿರುವಾಗಲೇ ಬಿಹಾರ ಪೊಲೀಸರ ತಂಡವೊಂದು ಮುಂಬೈಗೆ ಬಂದಿಳಿದಿದೆ.
ಬಿಹಾರ ಪೊಲೀಸರು ತನಿಖೆ ಆರಂಭಿಸಿದ್ದು, ಶನಿವಾರ ಸಂಜೆ ಮುಂಬೈನ ಮಲ್ವಾನಿ ಠಾಣೆಗೆ ಭೇಟಿ ನೀಡಿದ್ದರು. ಸುಶಾಂತ್ ಸಾವಿಗೆ ಕೆಲವೇ ದಿನಗಳ ಮೊದಲು ಆತ್ಮಹತ್ಯೆ ಮಾಡಿಕೊಂಡಿದ್ದ ಸುಶಾಂತ್ ನ ಮಾಜಿ ಮ್ಯಾನೇಜರ್ ದಿಶಾ ಸಾಲ್ಯಾನ್ ಸಾವಿನ ಬಗ್ಗೆ ವಿವರಣೆ ಕೇಳಿದ್ದಾರೆ. ಆದರೆ ಮುಂಬೈ ಪೊಲೀಸರು ಮಾಹಿತಿ ನೀಡದೆ ಸಬೂಬು ಹೇಳಿದ್ದಾರೆ ಎಂದು ವರದಿಯಾಗಿದೆ.
ಬಿಹಾರ ಪೊಲೀಸ್ ತಂಡದ ಕೋರಿಕೆಯಂತೆ ಮಾಹಿತಿ ನೀಡಲು ಮುಂಬೈ ಪೊಲೀಸರು ಮೊದಲು ಮುಂದಾಗಿದ್ದರು. ಆದರೆ ತನಿಖಾಧಿಕಾರಿಗೆ ಬಂದ ಒಂದು ಫೋನ್ ಕರೆಯ ನಂತರ ಅವರು ಮಾಹಿತಿ ನೀಡಲಿಲ್ಲ. ಬದಲಾಗಿ ಆಕಸ್ಮಿಕವಾಗಿ ನಮ್ಮ ಕಂಪ್ಯೂಟರ್ ನಲ್ಲಿದ್ದ ದಾಖಲೆಗಳು ಡಿಲೀಟ್ ಆಗಿದೆ. ಅದನ್ನು ಮರಳಿ ತೆಗೆಯಲು ಸಾಧ್ಯವಿಲ್ಲ ಎಂದು ಕಾರಣ ಹೇಳಿದ್ದಾರೆ ಎಂದು ಆಂಗ್ಲ ಮಾಧ್ಯಮಗಳು ವರದಿ ಮಾಡಿದೆ.
ದಿಶಾ ಸಾಲ್ಯಾನ್ ಸಾವಿನ ಬಗ್ಗೆ ಮಾಹಿತಿ ಪಡೆಯಲು ಬಿಹಾರ ಪೊಲೀಸ್ ತಂಡ ಆಕೆಯ ಮನೆಗೆ ಇಂದು ತೆರಳಿದ್ದು ಆದರೆ ಆಕೆಯ ಮನೆಯಲ್ಲಿ ಯಾರೂ ಇರಲಿಲ್ಲ ಎಂದು ವರದಿಯಾಗಿದೆ.
ಜೂನ್ 8ರಂದು ದಿಶಾ ಸಾಲ್ಯಾನ್ ಅವರು ಮಲಾಡ್ ನ ಬಹುಮಹಡಿಯ ಕಟ್ಟಡ 14ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಾದ ಒಂದು ವಾರದ ನಂತರ ಅಂದರೆ ಜೂನ್ 14ರಂದು ಸುಶಾಂತ್ ಸಿಂಗ್ ತನ್ನ ಮುಂಬೈ ನಿವಾಸದಲ್ಲಿ ಸಾವನ್ನಪ್ಪಿದ್ದರು.