ಪಾಟ್ನಾ/ ಹೊಸದಿಲ್ಲಿ: ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ ಎನ್ ಡಿಎ ಮೈತ್ರಿ ಕೂಟ ಮತ್ತೊಂದು ಸರ್ಕಾರ ರಚಿಸಲು ಸಿದ್ದತೆ ನಡೆಸುತ್ತಿದೆ. ಏಳನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ನಿತೀಶ್ ಕುಮಾರ್ ಅವರು ಸಜ್ಜಾಗಿದ್ದಾರೆ.
ಮುಂದಿನ ಸೋಮವಾರ (ನವೆಂಬರ್ 16) ರಂದು ನಿತೀಶ್ ಕುಮಾರ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ವರದಿಗಳು ತಿಳಿಸಿದೆ.
ಮುಂದಿನ ಸರ್ಕಾರದ ಸಂಪುಟವನ್ನು ಅಂತಿಮಗೊಳಿಸಲು ಬಿಜೆಪಿ ಮತ್ತು ಜೆಡಿಯು ಹಿರಿಯ ನಾಯಕರು ಪರಸ್ಪರ ಸಂಪರ್ಕದಲ್ಲಿದ್ದಾರೆ.
ಇದನ್ನೂ ಓದಿ:ಸಂಪುಟ ಕಸರತ್ತು ಬಿರುಸು; ಸಿಎಂ ನಿವಾಸಕ್ಕೆ ದೌಡಾಯಿಸಿದ ಆಕಾಂಕ್ಷಿಗಳು
ಬಿಹಾರದ 243 ವಿಧಾನಸಭೆ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ 125 ಸ್ಥಾನಗಳನ್ನು ಎನ್ ಡಿಎ ಕೂಟ ಗೆದ್ದುಕೊಂಡಿದೆ. ಎನ್‌ಡಿಎನಲ್ಲಿರುವ ಬಿಜೆಪಿ 74, ಜೆಡಿಯು 43, ವಿಕಾಸ್‌ಶೀಲ್ ಇನ್ಸಾನ್ ಪಾರ್ಟಿ 4 ಮತ್ತು ಹಿಂದೂಸ್ತಾನಿ ಅವಾಮ್ ಮೋರ್ಚಾ 4 ಸ್ಥಾನಗಳಲ್ಲಿ ಜಯ ಗಳಿಸಿವೆ. ಲೆಕ್ಕಾಚಾರದಲ್ಲಿ ಎನ್‌ಡಿಎದಲ್ಲಿ ಬಿಜೆಪಿಯೇ ದೊಡ್ಡ ಪಕ್ಷ. ಆದರೆ, ಚುನಾವಣೆಗೂ ಮುನ್ನವೇ ನಿತೀಶ್ ಕುಮಾರ್ ಅವರೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಹೇಳಿರುವುದರಿಂದ ಅವರೇ 4ನೇ ಬಾರಿಗೆ ಪೂರ್ಣಪ್ರಮಾಣದ ಸಿಎಂ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಬಿಜೆಪಿ ಹೇಳಿದೆ.
ಕಡಿಮೆ ಸ್ಥಾನ ಗೆದ್ದಿದ್ದರೂ ನಿತೀಶ್ ಗೆ ಮುಖ್ಯಮಂತ್ರಿ ಸ್ಥಾನ ನೀಡುತ್ತಿರುವ ಕಾರಣ ಸಚಿವ ಸಂಪುಟದಲ್ಲಿ ಪ್ರಮುಖ ಸ್ಥಾನಗಳನ್ನು ಬಿಜೆಪಿ ಪಡೆಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.