ಪಾಟ್ನಾ: ಲೋಕಸಭೆ ಚುನಾವಣೆ ವೇಳೆ ಹನುಮಂತನ ಜಾತಿಯ ಬಗ್ಗೆ ಪ್ರಸ್ತಾಪವಾಗಿ ಭಾರಿ ವಿವಾದವಾಗಿ ತಣ್ಣಗಾಗಿತ್ತು. ಇದೀಗ ಶಿವ ದೇವರು “ಭಿಂಡ್’ ಜಾತಿಗೆ ಸೇರಿದವ ಎಂದು ಬಿಹಾರದ ಸಚಿವ ಬೃಜ್‌ಕಿಶೋರ್ ಬಿಂಡ್ ಹೇಳಿದ್ದಾರೆ. ಮಂಗಳವಾರ ಪಾಟ್ನಾದಲ್ಲಿ ನೂತನ ರಾಜ್ಯಪಾಲ ಫಗು ಚೌಹಾಣ್ ಅವರಿಗೆ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿದ ವೇಳೆ ಅವರು ಈ ಮಾತುಗಳನ್ನಾಡಿದ್ದಾರೆ. ಈ ಸಂದರ್ಭದಲ್ಲಿ ಬಿಜೆಪಿಯ ಹಿರಿಯ ನಾಯಕ ಮತ್ತು ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಸೇರಿದಂತೆ ಹಲವರು ಇದ್ದರು. ಈ ಬಗ್ಗೆ ಮಾಧ್ಯಮದವರು ಬುಧವಾರ ಸ್ಪಷ್ಟನೆ ಬಯಸಿದಾಗ ಬಿಂಡ್ ಪ್ರತಿಕ್ರಿಯೆ ನೀಡಿ, ಶಿವಪುರಾಣದಲ್ಲಿಯೂ ಈ ಅಂಶ ಉಲ್ಲೇಖವಾಗಿದೆ. ಇದರ ಜತೆಗೆ ಇತಿಹಾಸಕಾರ ವಿದ್ಯಾಧರ ಮಹಾಜನ್ ಕೂಡ ತಮ್ಮ ಪುಸ್ತಕದಲ್ಲಿ ಈ ಅಂಶ ಉಲ್ಲೇಖೀಸಿದ್ದಾರೆ ಎಂದು ಸಮರ್ಥನೆ ನೀಡಿದ್ದಾರೆ. ಶ್ರೀರಾಮನನ್ನು ಕ್ಷತ್ರಿಯ, ಶ್ರೀಕೃಷ್ಣನನ್ನು ಯಾದವ ಸಮುದಾಯಕ್ಕೆ ಸೇರಿದವ ಎಂದು ಗುರುತಿಸುವಾಗ ಶಿವ ದೇವರನ್ನು ಭಿಂಡ್ ಜಾತಿಗೆ ಸೇರಿದವ ಎಂದು ಗುರುತಿಸುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.