Advertisement
ಬಿಹಾರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದ ಪಿಡಿಎ (ಪ್ರೊಗ್ರೇಸ್ಸಿವ್ ಡೆಮೋಕ್ರಟಿಕ್ ಅಲೈಯನ್ಸ್) ಜನ್ ಅಧಿಕಾರ್ ಪಕ್ಷ(ಲೋಕ್ ತಾಂತ್ರಿಕ್)ದ ಅಧ್ಯಕ್ಷ ರಾಜೇಶ್ ರಂಜನ್ ಅಲಿಯಾಸ್ ಪಪ್ಪು ಯಾದವ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂಬುದಾಗಿ ಘೋಷಿಸಿದೆ. ಪಪ್ಪು ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮಾಧೇಪುರ್ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ತಿಳಿಸಿದ್ದಾರೆ.
Related Articles
Advertisement
ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಪಪ್ಪು ಯಾದವ್ ಅವರ ಹೆಸರು ಘೋಷಣೆಯಾದ ನಂತರ ನಿತೀಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದು, ನಿತೀಶ್ ಕುಮಾರ್ ಅವರಿಗೆ ಅಭಿವೃದ್ಧಿ ವಿಚಾರ ಯಾಕೆ ಮುಖ್ಯವಾಗುತ್ತಿಲ್ಲ? ಈ ಚುನಾವಣೆಯಲ್ಲಿ ಲಾಲು ಪ್ರಸಾದ್ ಅವರನ್ನೇ ಯಾಕೆ ವಿಷಯವನ್ನಾಗಿ ನಿತೀಶ್ ಆಯ್ಕೆ ಮಾಡಿಕೊಂಡಿದ್ದಾರೆ? ಪ್ರವಾಹ ಮತ್ತು ವಲಸಿಗರ ಬಗ್ಗೆ ನಿತೀಶ್ ಯಾಕೆ ಮಾತನಾಡುತ್ತಿಲ್ಲ ಎಂದು ಪಪ್ಪು ಹರಿಹಾಯ್ದಿದ್ದಾರೆ.
ಬಿಹಾರದಲ್ಲಿ ಆರು ಪಥದ ರಸ್ತೆ ನಿರ್ಮಾಣಗೊಂಡಿದ್ದರೆ ಅದರ ಶ್ರೇಯಸ್ಸು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಸಲ್ಲಬೇಕು. ಆದರೆ ಹದಿನೈದು ವರ್ಷಗಳ ಕಾಲ ಆಡಳಿತ ನಡೆಸಿರುವ ನಿತೀಶ್ ಕುಮಾರ್ ಏನು ಮಾಡಿದ್ದಾರೆ? ಬಿಹಾರದಲ್ಲಿ ಹೆಲ್ತ್ ಕೇರ್ ವ್ಯವಸ್ಥೆ ದುರ್ಬಲವಾಗಿದೆ. ನಿತೀಶ್ ಕುಮಾರ್ ಅವರಿಗೆ ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಚುನಾವಣಾ ವಿಷಯವಾಗಿದೆಯೇ? ಎಂದು ವಾಗ್ದಾಳಿ ನಡೆಸಿದ್ದಾರೆ.
ಲೋಕಸಭಾ ಮಾಜಿ ಸಂಸದ ಪಪ್ಪು ಯಾದವ್ ಸೆಪ್ಟೆಂಬರ್ ನಲ್ಲಿ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದ್ದರು. ಪ್ರತಿಜ್ಞಾ ಪತ್ರ್ ಹೆಸರಿನ ಪ್ರಣಾಳಿಕೆಯಲ್ಲಿ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಒಂದು ವೇಳೆ ಪಕ್ಷ ಅಧಿಕಾರಕ್ಕೆ ಬಂದರೆ ಆರು ತಿಂಗಳಲ್ಲಿ ಬಿಹಾರವನ್ನು ಭ್ರಷ್ಟಾಚಾರ ಮುಕ್ತ ರಾಜ್ಯವನ್ನಾಗಿ ಮಾಡುವುದಾಗಿ ಭರವಸೆ ನೀಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಮಳೆಯ ರೌದ್ರಾವತಾರ: ಆಂಧ್ರಪ್ರದೇಶ, ತೆಲಂಗಾಣದಲ್ಲಿ ಜನಜೀವನ ಅಸ್ತವ್ಯಸ್ತ: 22 ಸಾವು
“ಕೇವಲ ಮೂರು ವರ್ಷಗಳಲ್ಲಿ ಬಿಹಾರ ಚಿತ್ರಣ ಬದಲಾಯಿಸುವುದಾಗಿ ರಾಜಕೀಯವಾಗಿ ಪ್ರಭಾವ ಹೊಂದಿರುವ ಕೋಶಿ ಮತ್ತು ಸೀಮಾಂಚಲ್ ಪ್ರದೇಶದಲ್ಲಿ ಪಪ್ಪು ಯಾದವ್ ಭರವಸೆ ನೀಡಿದ್ದಾರೆ. ಇದು ಆರ್ ಜೆಡಿ ಮತ್ತು ಎನ್ ಡಿಎ ವಿರುದ್ಧದ 30 ವರ್ಷ ವರ್ಸಸ್ ಮೂರು ವರ್ಷದ ನಡುವಿನ ಆಡಳಿತದ ಹೋರಾಟ ಎಂದಿರುವ ಪಪ್ಪು ಒಂದು ವೇಳೆ ಬಿಹಾರದ ಚಿತ್ರಣ ಬದಲಿಸಲು ವಿಫಲವಾದರೆ ರಾಜೀನಾಮೆ ಕೊಡುವುದಾಗಿ ಘೋಷಿಸಿದ್ದಾರೆ.
ಈ ಬಾರಿಯ ಬಿಹಾರ ವಿಧಾನಸಭಾ ಚುನಾವಣೆ ಅಧಿಕ ಸಂಖ್ಯೆಯ ಮುಖ್ಯಮಂತ್ರಿ ಅಭ್ಯರ್ಥಿಗಳಿಗೆ ಸಾಕ್ಷಿಯಾಗಿದೆ. ಈಗಾಗಲೇ ಹಾಲಿ ಸಿಎಂ ನಿತೀಶ್ ಕುಮಾರ್, ತೇಜಸ್ವಿ ಯಾದವ್, ಉಪೇಂದ್ರ ಕುಶ್ವಾಹ್ ಇದೀಗ ಪಪ್ಪು ಯಾದವ್ ಹೆಸರು ಕೂಡಾ ಸಿಎಂ ಅಭ್ಯರ್ಥಿಗಳ ಪಟ್ಟಿಗೆ ಸೇರ್ಪಡೆಯಾಗಿದೆ ಎಂದು ವರದಿ ತಿಳಿಸಿದೆ.