Advertisement
ಅಸಾದುದ್ದೀನ್ ಒವೈಸಿ ಮತ್ತು ಉಪೇಂದ್ರ ಕುಶ್ವಾಹ ಮೈತ್ರಿ ಮಾಡಿಕೊಂಡು ಗ್ರ್ಯಾಂಡ್ ಡೆಮೋಕ್ರಟಿಕ್ ಸೆಕ್ಯುಲರ್ ಫ್ರಂಟ್ ರಚಿಸಿದ್ದು, ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ 243 ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಿರುವುದಾಗಿ ವರದಿ ವಿವರಿಸಿದೆ.
Related Articles
Advertisement
ಬಿಹಾರ ಚುನಾವಣೆಯಲ್ಲಿ ಜಾತಿ ಲೆಕ್ಕಾಚಾರ:
2014ಸಾರ್ವತ್ರಿಕ ಚುನಾವಣೆಯಿಂದಲೂ ಒವೈಸಿ ಬಿಹಾರದಲ್ಲಿ ತಳವೂರಲು ಹೆಚ್ಚು ಒಲವು ತೋರಿದ್ದರು. ಅಲ್ಲದೇ ಮುಸ್ಲಿಂ ಜನಸಂಖ್ಯೆ ಹೆಚ್ಚಿರುವ ಪ್ರದೇಶಗಳಲ್ಲಿ ಅಭಿಪ್ರಾಯ ಸಂಗ್ರಹಿಸಿ, ಪ್ರಚಾರ ಕೂಡಾ ನಡೆಸಿದ್ದರು. ಇದರ ಪರಿಣಾಮ 2019ರಲ್ಲಿ ಒವೈಸಿಯ ಎಐಎಂಐಎಂ 2019ರಲ್ಲಿ ಕಿಶನ್ ಗಂಜ್ ಕ್ಷೇತ್ರಕ್ಕೆ ನಡೆದಿದ್ದ ಉಪಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಯಶಸ್ಸು ಪಡೆದಿರುವುದಾಗಿ ವರದಿ ಹೇಳಿದೆ.
ಬಿಹಾರದ ಜನಸಂಖ್ಯೆಯಲ್ಲಿ ಶೇ.17ರಷ್ಟು ಮುಸ್ಲಿಂ ಜನಸಂಖ್ಯೆ ಇದೆ. ಇನ್ನು ಕೆಲವು ಜಿಲ್ಲೆಗಳಲ್ಲಿ ಕಿಶನ್ ಗಂಜ್ ನಲ್ಲಿ ಶೇ.68, ಕಾತಿಹಾರ್ ಶೇ.45, ಅರಾರಿಯಾ ಶೇ.43, ಪುರ್ನೆಯಾ ಶೇ.38ರಷ್ಟು ಇದ್ದು ಇಲ್ಲಿ ಅಭ್ಯರ್ಥಿಯ ಗೆಲುವಿಗೆ ಮುಸ್ಲಿಂ ಮತಗಳೇ ನಿರ್ಣಾಯಕ. ಬಿಹಾರ ಸೀಮಾಂಚಲ್ ನ ಸುಮಾರು 40 ಕ್ಷೇತ್ರಗಳಲ್ಲಿ ಶೇ.25ರಷ್ಟು ಮುಸ್ಲಿಂ ಜನಸಂಖ್ಯೆ ಇದ್ದಿರುವುದಾಗಿ ವರದಿ ವಿವರಿಸಿದೆ.
ಇದನ್ನೂ ಓದಿ:ಫುಟ್‌ಬಾಲ್ ಮಾಜಿ ನಾಯಕ ಚಾಪ್‌ಮನ್ ನಿಧನ: ದೇಶ ಕಂಡ ಖ್ಯಾತ ಆಟಗಾರನಿಗೆ ಹೃದಯಾಘಾತ
ಬಿಹಾರದ ಒಟ್ಟು ಜನಸಂಖ್ಯೆಯಲ್ಲಿ ಕುಶ್ವಾಹ, ಕೊಯೆರಿ, ಕುರ್ಮಿ ಜಾತಿಯ ಜನಸಂಖ್ಯೆ ಶೇ.12ರಿಂದ 14ರಷ್ಟಿದೆ. ಆದರೆ ಬಿಹಾರದಲ್ಲಿ ನಿತೀಶ್ ಕುಮಾರ್ ಅವರು ಜಾತಿಯನ್ನು ಮೀರಿ ಬೆಳೆದ ನಾಯಕರಾಗುವ ಮೂಲಕ ಬಿಹಾರದ ಜನತೆ ಅವರನ್ನು ಒಪ್ಪಿಕೊಂಡಿದ್ದರು. ಕುಶ್ವಾಹ ಜಾತಿ ಲೆಕ್ಕಾಚಾರದಲ್ಲಿ ನಾಯಕರಾಗಲು ಹೊರಟಿರುವುದು ದೊಡ್ಡ ಯಶಸ್ಸಿಗೆ ತೊಡಕಾಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಬಿಹಾರ ಜನಸಂಖ್ಯೆಯಲ್ಲಿ ಶೇ.17-18ರಷ್ಟು ದಲಿತ ಸಮುದಾಯದ ಮತಗಳಿವೆ. ಮಾಯಾವತಿ ನಿತೀಶ್ ಕುಮಾರ್ ಅವರನ್ನು ಚುನಾವಣೆಯಲ್ಲಿ ಹಣಿಯಲು ಕಳೆದ 15 ವರ್ಷಗಳಲ್ಲಿ ಬಿಎಸ್ಪಿಯನ್ನು ಸಂಘಟನಾತ್ಮಕವಾಗಿ ಬಳಸಿಕೊಂಡಿಲ್ಲ. ಇದರಿಂದಾಗಿ ಬಿಎಸ್ಪಿಗೂ ಹಿನ್ನಡೆಯಾಗಬಹುದಾಗಿದೆ.
ಬಿಹಾರದಲ್ಲಿ ಒವೈಸಿ ಗುರಿ ಏನು?
ಒವೈಸಿ ಹಾಗೂ ಕುಶ್ವಾಹ ಮೈತ್ರಿ ಮಾಡಿಕೊಳ್ಳುವ ಮೂಲಕ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮತದಾರರಲ್ಲಿ ಗೊಂದಲ ಹುಟ್ಟಿಸುವುದಾಗಿದೆ. ಇದರಿಂದಾಗಿ ನಿತೀಶ್ ಕುಮಾರ್ ನೇತೃತ್ವದ ಎನ್ ಡಿಎ ಮತ್ತು ತೇಜಸ್ವಿ ಯಾದವ್ ನೇತೃತ್ವದ (ಆರ್ ಜೆಡಿ, ಕಾಂಗ್ರೆಸ್, ಎಡಪಕ್ಷ) ಮಹಾಘಟಬಂಧನ್ ಮೈತ್ರಿಯ ಗೆಲುವಿನ ಓಟಕ್ಕೆ ತಡೆಯೊಡ್ಡುವುದು ಮುಖ್ಯ ಉದ್ದೇಶವಾಗಿದೆ. ಇದರಲ್ಲಿಯೂ ಮುಸ್ಲಿಂ ಮತ್ತು ಯಾದವ್ ಸೂತ್ರ ಮುರಿಯುವುದು ಮುಖ್ಯ ಗುರಿಯಾಗಿದೆ. 1990ರಲ್ಲಿ ಲಾಲು ಪ್ರಸಾದ್ ಯಾದವ್ ಕೂಡಾ ಸೋಶಿಯಲ್ ಎಂಜಿನಿಯರಿಂಗ್ ಪ್ರಯೋಗ ಮಾಡುವ ಮೂಲಕ ಫಲಿತಾಂಶ ಪಡೆದಿದ್ದರು. ಮುಸ್ಲಿಂ ಮತ್ತು ಯಾದವರು(ಶೇ.14) ಒಟ್ಟುಗೂಡುವ ಮೂಲಕ ಬಿಹಾರದ ಎಲ್ಲಾ ಮತದಾರರ ಶೇ,32ರಷ್ಟಾಗಲಿದ್ದಾರೆ. ಇದೊಂದು ಗೆಲುವಿನ ಸೂತ್ರವಾಗಿದೆ. ಈ ಮೂಲಕವೇ ಲಾಲು ಪ್ರಸಾದ್ ಯಾದವ್ ಅವರು ಆರ್ ಜೆಡಿ ಮೂಲಕ 15 ವರ್ಷಗಳ ಕಾಲ ಬಿಹಾರದ ಆಡಳಿತ ನಡೆಸಿದ್ದರು. ಅಲ್ಲದೇ ಪಕ್ಷದೊಳಗೆ ಮೊಹಮ್ಮದ್ ಶಹಾಬುದ್ಧೀನ್ (ಜೀವಾವಧಿ ಶಿಕ್ಷೆಗೆ ಗುರಿ) ರಂತಹ ನಾಯಕ ಬೆಳೆದಿರುವುದಾಗಿ ವರದಿ ತಿಳಿಸಿದೆ.
ಶಹಾಬುದ್ದೀನ್ ಜೈಲಿನಿಂದ ಬಿಡುಗಡೆಯಾದ ನಂತರ ಈ ಜಾತಿ ಸಂಪರ್ಕ ಮತ್ತಷ್ಟು ಬಲಿಷ್ಠವಾಗಿತ್ತು. ಆರ್ ಜೆಡಿ, ಜೆಡಿಯು ಮತ್ತು ಕಾಂಗ್ರೆಸ್ ಮೈತ್ರಿಕೂಟ ಅಧಿಕಾರದಲ್ಲಿದ್ದಾಗ ಶಹಾಬುದ್ದೀನ್ ಸಿಎಂ ನಿತೀಶ್ ಅವರನ್ನು ಮಹಾಘಟಬಂಧನದ ಮುಖಂಡ ಎಂಬುದನ್ನು ಒಪ್ಪಿಕೊಳ್ಳಲು ತಿರಸ್ಕರಿಸಿದ್ದರು.
ಇದನ್ನೂ ಓದಿ:ಟೈಮ್ಸ್ ನೌ- ಸಿ ವೋಟರ್ ಸಮೀಕ್ಷೆ: ಬಿಹಾರದಲ್ಲಿ ಮತ್ತೆ ಎನ್‌ಡಿಎಗೆ ಜಯ
ಏತನ್ಮಧ್ಯೆ ಆರ್ ಜೆಡಿ ಯಾದವರ ಬೆಂಬಲ ಕಳೆದುಕೊಂಡಿತ್ತು. ಇವರೆಲ್ಲಾ ಬಿಜೆಪಿಯ ಕೈಹಿಡಿದಿದ್ದರು. ಮತ್ತೊಂದೆಡೆ ಮುಸ್ಲಿಂ ಸಮುದಾಯದ ಮತದಾರರು ನಿತೀಶ್ ಕುಮಾರ್ ಅವರ ಜಾತ್ಯತೀತ (ಸೆಕ್ಯುಲರ್) ನಿಲುವನ್ನು ಬೆಂಬಲಿಸಿದ್ದರು. ಅಷ್ಟೇ ಅಲ್ಲ ಮುಸ್ಲಿಂ ಯಾದವ್ ಫಾರ್ಮುಲಾ ಆರ್ ಜೆಡಿ ನೇತೃತ್ವದ ಮಹಾಘಟಬಂಧನ್ ಗೆ ಭಾರೀ ಹಿನ್ನಡೆ ತರಲಿದೆ.
ಚುನಾವಣೆಯ ಮೈತ್ರಿಯಲ್ಲಿ ಜಾತಿ, ಸಮುದಾಯದ ಲೆಕ್ಕಾಚಾರ ದೀರ್ಘಕಾಲದವರೆಗೆ ಉಳಿಯಬಾರದು ಅದನ್ನು ಅಳಿಸಬೇಕೆಂಬ ಲೆಕ್ಕಾಚಾರ ಒವೈಸಿಯದ್ದಾಗಿದೆ. ಅಲ್ಲದೇ ಸೀಮಾಂಚಲ್ ಪ್ರದೇಶದಲ್ಲಿಯೇ ಹೆಚ್ಚು ಗಮನ ಕೇಂದ್ರೀಕರಿಸಿದ್ದು, ಸುಮಾರು 50 ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಿದೆ.