ಹೊಸದಿಲ್ಲಿ : ಬಿಹಾರದ ಆಳುವ ಮಹಾ ಘಟಬಂಧನದಲ್ಲಿ ಬಿರುಕುಗಳು ಎದ್ದಿವೆ ಎಂಬ ಮಾಧ್ಯಮ ಊಹಾಪೋಹಗಳನ್ನು ತಳ್ಳಿ ಹಾಕಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ರಾಜ್ಯದಲ್ಲಿನ ಮೈತ್ರಿ ಕೂಟವು ಈಗಲೂ ಬಲಶಾಲಿಯಾಗಿದೆ ಎಂದು ಹೇಳಿದ್ದಾರೆ.
ಮಾಧ್ಯಮಗಳು ಕೇಳಿದ ಸರಮಾಲೆಯ ಪ್ರಶ್ನೆಗಳಿಗೆ ಉತ್ತರಿಸುತ್ತಾ ನಿತೀಶ್ ಕುಮಾರ್, “ಬಿಹಾರ ಆಳುವ ಮೈತ್ರಿ ಕೂಟದಲ್ಲಿ ಯಾವುದೇ ಬಿರುಕಿಲ್ಲ; ಮಾಧ್ಯಮಗಳು ಯಾವುದನ್ನೂ ತಪ್ಪಾಗಿ ಅರ್ಥೈಸಿಕೊಳ್ಳಬಾರದು’ ಎಂದು ಹೇಳಿದರು.
ಜಿಎಸ್‌ಟಿಗೆ ಚಾಲನೆ ನೀಡುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಜೆಡಿಎಸ್‌ನ ಅನುಪಸ್ಥಿತಿಯ ಕಾರಣವನ್ನು ಮಾಧ್ಯಮದವರು ಪ್ರಶ್ನಿಸಿದಾಗ, “ನನ್ನನ್ನು ಅಧಿವೇಶನಕ್ಕೆ ಆಹ್ವಾನಿಸಲಾಗಿಲ್ಲ; ಹಾಗಾಗಿ ಜೆಡಿಎಸ್ ಅನುಪಸ್ಥಿತಿಯ ಬಗ್ಗೆ ನನ್ನನ್ನು ಕೇಳಿ ಪ್ರಯೋಜನವಿಲ್ಲ’ ಎಂದು ನಿತೀಶ್ ನೇರವಾಗಿ ಉತ್ತರಿಸಿದರು.
ವಿರೋಧ ಪಕ್ಷಗಳಲ್ಲಿ ಕಾಂಗ್ರೆಸ್ ಅತ್ಯಂತ ದುರ್ಬಲ ಕೊಂಡಿಯಾಗಿದೆ ಎಂಬ ತನ್ನ ಈ ಮೊದಲಿನ ಹೇಳಿಕೆಗೆ ನಿತೀಶ್ ಅಂಟಿಕೊಂಡರು.
ಭಾನುವಾರ ನಡೆದಿದ್ದ ಜೆಡಿಎಸ್ ನಾಯಕರ ಸಭೆಯಲ್ಲಿ ನಿತೀಶ್, “ವಿರೋಧ ಪಕ್ಷದಲ್ಲಿನ ಈಗಿನ ಗೊಂದಲಕ್ಕೆ ಕಾಂಗ್ರೆಸ್ ಪಕ್ಷವೇ ಕಾರಣ’ ಎಂದು ಹೇಳಿದ್ದರು.
“ಕಾಂಗ್ರೆಸ್ ಒಂದು ದೊಡ್ಡ ಪಕ್ಷ; ಅದಕ್ಕೆ ಅದರದ್ದೇ ಆದ ಆಲೋಚನಾ ಪ್ರಕ್ರಿಯೆ ಇದೆ; 2019ರ ಮಹಾ ಚುನಾವಣೆಯಲ್ಲಿ ನಾವು ಮೋದಿಗೆ ಸಮರ್ಥವಾದ ಸವಾಲು ಹಾಕಬೇಕೆಂದು ಕಾಂಗ್ರೆಸ್ ಬಯಸುವುದಾದರೆ ನಾವೆಲ್ಲ ಅದಕ್ಕೆ ತಕ್ಕಂತೆ ಕೆಲಸ ಮಾಡಬೇಕಾಗುತ್ತದೆ’ ಎಂದು ಕುಮಾರ್ ಹೇಳಿದ್ದರು. ಆದರೆ ತಾನು ಪ್ರಧಾನಿ ಹುದ್ದೆ ಅಭ್ಯರ್ಥಿಯಾಗುವ ಆಕಾಂಕ್ಷೆ ಹೊಂದಿಲ್ಲ ಎಂದು ನಿತೀಶ್ ಸ್ಪಷ್ಟಪಡಿಸಿದರು.