Advertisement

ಸಾನ್ಯಾ ಅಯ್ಯರ್‌, ಗಡಿನಾಡ ಕನ್ನಡಿಗ, ಹುಲಿವೇಷ…ಮಾತು ಮನರಂಜನೆಯಿಂದಲೇ ಬಿಗ್‌ ಬಾಸ್‌ ಟ್ರೋಪಿ ಗೆದ್ದ ರೂಪೇಶ್  

11:26 AM Jan 01, 2023 | Team Udayavani |

ಬೆಂಗಳೂರು: ಕನ್ನಡದ ಬಿಗ್‌ ಬಾಸ್‌ ಸೀಸನ್‌ -9 ಯಶಸ್ವಿಯಾಗಿ ಮುಕ್ತಾಯ ಕಂಡಿದೆ. ಕರಾವಳಿಯ ಹುಡುಗ ಕರುನಾಡ ಮನ ಮೆಚ್ಚಿದ ಹುಡುಗನಾಗಿ ಬಿಗ್‌ ಬಾಸ್‌ ಕಪ್‌ ಎತ್ತಿಕೊಂಡಿದ್ದಾರೆ. ರಾಕೇಶ್ ಅಡಿಗ ರನ್ನರ್‌ ಅಪ್‌ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.‌

Advertisement

ರೂಪೇಶ್‌ ಶೆಟ್ಟಿ ಹಾಗೂ ರಾಕೇಶ್‌ ಅಡಿಗ ಇಬ್ಬರೂ ಬಿಗ್ ಬಾಸ್ ಓಟಿಟಿಯಿಂದ ಟಿವಿ ಬಾಸ್‌ ಗೆ ಜೊತೆಯಾಗಿ ಬಂದವರು. ಹಾಗಾಗಿ ವೀಕ್ಷಕರಿಗೆ ಇಬ್ಬರ ಸ್ವಭಾವ ಮೊದಲೇ ಗೊತ್ತಿತ್ತು. ಇಬ್ಬರ ಆಟ, ವ್ಯಕ್ತಿತ್ವದ ಬಗ್ಗೆ ಅರಿತಿದ್ದ ವೀಕ್ಷಕರು ಇಬ್ಬರನ್ನೂ ಫಿನಾಲೆಯಲ್ಲಿ ಟಾಪ್‌ 2 ನಲ್ಲಿ ತಂದು ನಿಲ್ಲಿಸಿದ್ದರು.

ರೂಪೇಶ್‌ ಶೆಟ್ಟಿಯ ಆರಂಭಿಕ ದಿನಗಳು..

ರೂಪೇಶ್‌ ಶೆಟ್ಟಿ ಅವರ ಆಟದತ್ತ ಗಮನ ಹರಿಸುವುದಾದರೆ ಮನೆಗೆ ಬಂದ ಹೊಸತರಲ್ಲಿ ರೂಪೇಶ್‌ ಶೆಟ್ಟಿ ಅವರೇ ಹೇಳಿದಂತೆ ಯಾರ ಹತ್ತಿರ ಮಾತಾಡಬೇಕು, ತನ್ನ ಮಾತಿಗೂ ಮನೆಯವರ ಉಳಿದವರ ಮಾತಿಗೆ ಹೊಂದಾಣಿಕೆ ಆಗುತ್ತದೋ ಇಲ್ವೋ, ನನ್ನ ಮಾತಿನಿಂದ ಯಾರಿಗಾದರೂ ಬೇಜಾರ್‌ ಆಗುತ್ತದೋ ಈ ರೀತಿಯ ಯೋಚನೆ ಮನೆಗೆ ಬಂದ ಹೊಸತರಲ್ಲಿ ಇತ್ತು. ಹಾಗಾಗಿ ಅವರು ಮೊದ ಮೊದಲು ಹೆಚ್ಚು ಮಾತಾನಾಡುತ್ತಿದದ್ದು ಓಟಿಟಿ ಬಿಗ್‌ ಬಾಸ್‌ ಮನೆಯ ಸದಸ್ಯರ ಬಳಿ ಮಾತ್ರ. ಹೀಗಾಗಿ ಓಟಿಟಿಯಲ್ಲಿ ನೋಡುವ ವೀಕ್ಷಕರಿಗೆ ರೂಪೇಶ್‌ ಶೆಟ್ಟಿ ಅವರು ಹೆಚ್ಚು ಇಷ್ಟ ಆಗುತ್ತಿದ್ದರೂ ವಿನಃ ಟಿವಿಯಲ್ಲಿ ಬಿಗ್‌ ಬಾಸ್‌ ನೋಡುತ್ತಿದ್ದ ವೀಕ್ಷಕರಿಗೆ ಭಾವನಾತ್ಮಕ ವ್ಯಕ್ತಿತ್ವವುಳ್ಳ ರೂಪೇಶ್‌ ಶೆಟ್ಟಿ ಅವರನ್ನು ನೋಡಲು ಸ್ವಲ್ಪ ವಾರಗಳು ಹೋದವು.

ಎಲ್ಲರಂತಲ್ಲ ಈ ರಾಕಿ ಹಾಗೂ ಆತನ ಮೌನ..

Advertisement

ಓಟಿಟಿಯಿಂದ ಟಿವಿ ಬಿಗ್‌ ಬಾಸ್‌ ಗೆ ಬಂದ ಮತ್ತೊಬ್ಬ ಸ್ಪರ್ಧಿ ಎಂದರೆ ಅದು ರಾಕೇಶ್‌ ಅಡಿಗ. ಕರುನಾಡಿನ ಜನರಿಗೆ, ಬಣ್ಣದ ಲೋಕದವರಿಗೆ ರಾಕೇಶ್‌ ಮುಖದ ಪರಿಚಯ ಮೊದಲೇ ಇತ್ತು. ಆದರೆ ರಾಕಿಯನ್ನು ಒಂದು ವ್ಯಕ್ತಿಯಾಗಿ, ಆತನ ಸ್ವಭಾವವನ್ನು ಜನರಿಗೆ ಅರ್ಥೈಸಿದ್ದು ಬಿಗ್‌ ಬಾಸ್‌ ನ ದಿನಗಳು. ಮೊದ ಮೊದಲಿಗೆ ಮನೆಯ ಸದಸ್ಯರಿಗೆ ಏನಾದರು ಆದರೆ, ಅವರ ಬೆನ್ನಿಗೆ ನಿಂತು ಅವರ ನೋವು, ಮಾತು ಕೇಳಿ, ಸಲಹೆ, ಸಹಕಾರ ನೀಡುತ್ತಿದ್ದ ರಾಕಿಗೆ ಮನೆಯ ಸದಸ್ಯರೇ ʼಸೇಫ್‌ ಗೇಮ್‌ʼ ಆಡುತ್ತಾ ಇದ್ದಾರೆ ಎನ್ನುವ ಕಾರಣ ಕೊಟ್ಟು ನಾಮಿನೇಟ್‌ ಮಾಡಿದ್ದುಂಟು. ಆ ಬಳಿಕ ರಾಕಿಯಂತಹ ವ್ಯಕ್ತಿಯ ನಿಜವಾದ ವ್ಯಕ್ತಿತ್ವ ಇರುವುದೇ ಹಾಗೇ ಅದು ಈ ಶೋಗೆ ಮಾತ್ರ ಸೀಮಿತವಲ್ಲ ಎನ್ನುವುದು ಜನರಿಗೂ,ಮನೆಯ ಸದಸ್ಯರಿಗೂ ದಿನ ಕಳೆದಂತೆ ಅರಿವಾಗುತ್ತಾ ಹೋಯಿತು. ಕೆಲವೊಮ್ಮೆ ರಾಕಿ ಮೌನವನ್ನೇ ಸಂಚು ಎಂದು ಮನೆಯ ಸದಸ್ಯರು ಮಾತಾನಾಡಿಕೊಂಡದಿದೆ.

ಆರಂಭಿಕ ದಿನಗಳಲ್ಲಿ ಒಬ್ಬರನ್ನು ಒಬ್ಬರು ಅಷ್ಟಾಗಿ ಮಾತಾನಾಡಿಸಿಕೊಳ್ಳದೇ ಇದ್ದರೂ ಆ ಬಳಿಕ ರಾಕಿ ಹಾಗೂ ಅಮ್ಯೂಲ ಬೆಸ್ಟ್‌ ಫ್ರೆಂಡ್‌ ಆಗಿ ಕಾಣಿಸಿಕೊಂಡಿದ್ದಾರೆ. ಈ ವಿಚಾರವೂ ರಾಕೇಶ್‌ ಅವರನ್ನು ಸ್ಪರ್ಧೆಯಲ್ಲಿ ಮುಂದೆ ಹೋಗುವಂತೆ ಪ್ಲಸ್‌ ಆಗಿ ಪರಿಣಾಮಿಸಿತ್ತು.

ವಾದ – ವಿವಾದ ಹಾಗೂ ಮನರಂಜನೆಯಲ್ಲಿ ಹಿಂದೆ ಬೀಳದ ರೂಪೇಶ್:‌

ರೂಪೇಶ್‌ ಶೆಟ್ಟಿ ಅವರು ಸ್ಪರ್ಧಿಯಾಗಿ ಉಳಿದ ಸದಸ್ಯರಿಗೆ ಟಫ್‌ ಕಾಂಪಿಟೇಷನ್ ನೀಡುತ್ತಿದ್ದರು. ಎಷ್ಟೋ ಟಾಸ್ಕ್‌ ಗಳಲ್ಲಿ ಮೇಲುಗೈ ಸಾಧಿಸುತ್ತಿದ್ದ ರೂಪೇಶ್‌ ಶೆಟ್ಟಿ, ಅದೊಂದು ಸಂದರ್ಭದಲ್ಲಿ ಜಗಳವನ್ನೇ ಮಾಡಿ ಬಿಟ್ಟರು. ಗೊಂಬೆಗಳನ್ನು ಹೊಲಿಯುವ ಚಟುವಟಿಕೆಯಲ್ಲಿ ಪ್ರಶಾಂತ್ ಸಂಬರಗಿ ಅವರೊಂದಿಗೆ ಶುರುವಾದ ವಾದ ಶರ್ಟ್‌ ತೆಗೆದು ಮೈ ಕೈ ಹಾಕುವಷ್ಟರ ಮಟ್ಟಿಗೆ ಬೆಳೆದಿತ್ತು. ಇದಾದ ಬಳಿಕ ಸಾನ್ಯಾ ಅಯ್ಯರ್‌ ಅವರೊಂದಿಗೆ ಆತ್ಮೀಯತೆಯಿಂದ ಇದ್ದ ಕಾರಣಕ್ಕೆ ವಿವಾದವೊಂದು ಹುಟ್ಟಿಕೊಂಡಿತ್ತು. ಇದಾದ ನಂತರ ರೂಪೇಶ್‌ ಅವರು ಹೇಳಿದ ಒಂದು ಮಾತು ತುಳು ಜನರನ್ನು ಕೆಲ ದಿನಗಳ ಕಾಲ ಕೆರಳಿಸಿತ್ತು. ನಾನು ಗಡಿನಾಡ ಕನ್ನಡಿಗ ಎಂದು ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಹೇಳಿದ್ದ ಮಾತು ತುಳುನಾಡಿನ ವೀಕ್ಷಕರಿಗೆ ಸ್ವಲ್ಪ ಬೇಸರ ತಂದಿತ್ತು.

ಮನರಂಜನೆ ವಿಚಾರಕ್ಕೆ ಬಂದರೆ ರೂಪೇಶ್‌ ಶೆಟ್ಟಿ ಅವರು ಮಂಗಳೂರು ಕನ್ನಡದ ಮಾತಿನ ಶೈಲಿ, ಹುಲಿ ವೇಷ ಬಂದಾಗ ತಾಸೆಯ ಪೆಟ್ಟಿಗೆ ಕುಣಿದು ಕುಪ್ಪಳಿಸಿದ್ದು, ಮೀನಿನ ಫ್ರೈ ಬಂದಾಗ ತಿಂದು ಖುಷಿ ಪಟ್ಟದ್ದು,ಆ ವೇಳೆ ನಡೆದ ತಮಾಷೆಯ ಸನ್ನಿವೇಶಗಳು. ಮನೆಯ ಸ್ಪರ್ಧಿಗಳ ಸವಾಲು ಸ್ವೀಕರಿಸಿ ಮಾಡಿದ ಬೆಲ್ಲಿ ಡ್ಯಾನ್ಸ್‌, ಯಕ್ಷಗಾನ ಹೀಗೆ ಕರಾವಳಿ ಹುಡುಗನ ವ್ಯಕ್ತಿತ್ವ ಎಲ್ಲರನ್ನೂ ಇಷ್ಟವಾಗಿಸಿತ್ತು.

ರೂಪಿ – ಸಾನ್ಯಾರನ್ನು ಇಷ್ಟಪಟ್ಟ ವೀಕ್ಷಕರು..

ಈ ಬಾರಿ ಬಿಗ್‌ ಬಾಸ್‌ ಮನೆಯಲ್ಲಿ ಅತೀ ಹೆಚ್ಚು ಗಮನ ಸೆಳೆದದ್ದು ರೂಪೇಶ್‌ ಶೆಟ್ಟಿ ಹಾಗೂ ಸಾನ್ಯಾ ಅಯ್ಯರ್‌ ಅವರ ಆತ್ಮೀಯತೆಯನ್ನು ಇಬ್ಬರೂ ಬೆಸ್ಟ್‌ ಫ್ರೆಂಡ್‌ ಗಳೆಂದು ಆತ್ಮೀಯವಾಗಿ ದಿನಗಳನ್ನು ಕಳೆದಿದ್ದಾರೆ. ಇಬ್ಬರ ನಡುವಿನ ಸ್ನೇಹ ಪ್ರೀತಿಯೂ ಆಗಿರಬಹುದು. ನೇರವಾಗಿ ಇಬ್ಬರೂ ಮನೆಯಲ್ಲಿ ಇದನ್ನು ಹೇಳಿಕೊಳ್ಳದೆ ಇದ್ದರೂ ಇನ್‌ ಡೈರೆಕ್ಟ್‌ ಆಗಿ ಆಗುತ್ತಿದ್ದ ಮಾತುಗಳೂ, ಸಂಭಾಷಣೆಗಳು, ಹಾಡುಗಳು ವೀಕ್ಷಕರನ್ನು ಸೆಳೆದಿತ್ತು. ಸಣ್ಣ ಸಣ್ಣ ವಿಚಾರಕ್ಕೂ ಸಿಟ್ಟಾಗಿ, ಬೇಜಾರ್‌ ಆಗುತ್ತಿದ್ದ ಸಾನ್ಯಾರನ್ನು ಮನವೊಲಿಸುತ್ತಿದ್ದ ರೂಪಿ ಮುಗ್ಧರಾಗಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಸಾನ್ಯಾ ಎಲಿಮಿನೇಷನ್‌ ಆಗಿ ಹೋದ ಬಳಿಕ ತಲೆಗೆ ಪಟ್ಟಿ ಕಟ್ಟಿಕೊಂಡು, ಅವಳಿಗಾಗಿ ಊಟದಲ್ಲಿ ಅರ್ಧ ಪಾಲು ಇಡುತ್ತಿದ್ದ ರೂಪೇಶ್‌ ರನ್ನು ಕೆಲವರು ಟ್ರೋಲ್‌ ಮಾಡಿದ್ದಿದೆ.

ಇನ್ನು ರೂಪೇಶ್‌ ಅವರಿಗೆ ಮನೆಯಲ್ಲಿ ಹಲವು ವಿಚಾರಗಳಿಗೆ ನೋವು ಆಗಿದ್ದಿದೆ. ಅದರಲ್ಲಿ ಒಂದು ರೂಪೇಶ್‌ ರಾಜಣ್ಣ ಅವರು ಪತ್ರದಲ್ಲಿ ರೂಪೇಶ್‌ ಅವರ ವ್ಯಕ್ತಿತ್ವದ ಬಗ್ಗೆ ಹೇಳಿದ ಮಾತು. ಒಳ್ಳೆಯ ಸ್ನೇಹಿತ ಅಂದುಕೊಡಿದ್ದ ರೂಪೇಶ್‌ ಶೆಟ್ಟಿ, ರಾಜಣ್ಣ ಅವರ ಆ ಮಾತಿನಿಂದ ಅವರೊಂದಿಗಿದ್ದ ಮೊದಲಿನ ಆತ್ಮೀಯತೆಯನ್ನು ಕಳೆದುಕೊಂಡಿದ್ದರು.

ರೂಪೇಶ್‌ ಶೆಟ್ಟಿ ಅವರು ಭಾವ ಜೀವಿ ಅವರು ಬಹಳ ಬೇಗನೇ ಎಮೋಷನಲ್ ಆಗುತ್ತಾರೆ. ಅವರ ತಾಯಿಯ ವಿಚಾರಕ್ಕೆ ಹಲವು ಬಾರಿ ಅತ್ತು ಕಣ್ಣೀರು ಹಾಕಿದ್ದರು. ಅವರ ತಂದೆ ಬರುವ ವೇಳೆ ಅವರಲ್ಲಿ ಕಾಣಿಸಿಕೊಂಡ ಆ ಖುಷಿಯ ಕ್ಷಣಗಳು ಅನೇಕ ಪ್ರೇಕ್ಷಕರು ಸೆಳೆದಿತ್ತು.

50 ಲಕ್ಷ ರೂ. ಬಹುಮಾನ ಪಡೆದುಕೊಂಡಿರುವ ರೂಪೇಶ್‌ ಶೆಟ್ಟಿ ಅವರು ಆ ಹಣದಲ್ಲಿ ಸ್ವಲ್ಪ ಹಣವನ್ನು ಬಡಕುಟುಂಬಕ್ಕೆ ಸಹಾಯ ಹಾಗೂ ಮನೆ ಕಟ್ಟಿಕೊಡುವ ಯೋಚನೆಯಿದೆ ಎಂದಿದ್ದಾರೆ. ಅದರೊಂದಿಗೆ ಸಿನಿಮಾ ತಂಡದೊಂದಿಗೆ ಏನಾದರೂ ಮಾಡಬೇಕೆಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next