Advertisement
ಕಿರುತೆರೆಯ ಜನಪ್ರಿಯ ಕಾರ್ಯಕ್ರಮವಾದ “ಬಿಗ್ ಬಾಸ್’ನ ಐದನೇ ಅವತರಣಿಕೆ ಅಕ್ಟೋಬರ್ 15ರಿಂದ ಪ್ರಾರಂಭವಾಗಲಿದೆ. ಈ ಕಾರ್ಯಕ್ರಮ ಕುರಿತು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಕಳೆದ ವರ್ಷದ “ಬಿಗ್ ಬಾಸ್’ನ ನಾಲ್ಕನೆಯ ಸೀಸನ್‌ನಲ್ಲಿ ನಡೆದ ಒಂದು ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸುದ್ದಿಯಾಗಿದೆ. ಸಿಕ್ರೇಟ್ ರೂಂಗೆ ಬಿಟ್ಟು ಬರುವ ಸಂದರ್ಭದಲ್ಲಿ ಚಾನಲ್‌ನ ಬಿಝಿನೆಸ್ ಹೆಡ್ ಹಾಗೂ ಕಾರ್ಯಕ್ರಮದ ನಿರ್ದೇಶಕ ಪರಮೇಶ್ವರ ಗುಂಡ್ಕಲ್ ನಡುವಿನ ದೃಶ್ಯವೊಂದು ಸಾಕಷ್ಟು ಊಹಾಪೋಹಗಳಿಗೆ ಕಾರಣವಾಗಿತ್ತು. ಈ ಕುರಿತು ಮಾತನಾಡುವ ಸುದೀಪ್, “ನನಗೆ ಪರಮೇಶ್ ಮತ್ತು ಮಾಳವಿಕಾ ಇಬ್ಬರೂ ಚೆನ್ನಾಗಿ ಗೊತ್ತು. ಮಾಳವಿಕಾ ಅವರು ಕಾರ್ಯಕ್ರಮಕ್ಕೆ ಬಂದ ಸಂದರ್ಭದಲ್ಲಿ ಸಾಕಷ್ಟು ಅಳುಕಿತ್ತು. ಜನ ತಮ್ಮನ್ನು ಹೇಗೆ ಸ್ವೀಕರಿಸುತ್ತಾರೋ ಎಂಬ ಭಯವಿತ್ತು. ಆಗ ಅವರಿಗೆ ಪರಮೇಶ್ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಆ ಸಂದರ್ಭದಲ್ಲಿ ಮಾಳವಿಕಾ ಅವರು ಹಗ್ ಮಾಡಿ ಮುತ್ತು ಕೊಟ್ಟಿದ್ದಾರೆ. ಇದರಲ್ಲಿ ಯಾವುದೇ ರೀತಿಯ ಅಪಾರ್ಥ ಕಲ್ಪಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಇಡೀ ಕಾರ್ಯಕ್ರಮ ಸ್ಕ್ರಿಪ್ಟೆಡ್ ಆಗಿದ್ದರೆ, ಮಾಳವಿಕಾ ಅವರು ಗೆಲ್ಲಬೇಕಿತ್ತು. ಆದರೆ, ಕಳೆದ ಬಾರಿ ಗೆದ್ದಿದ್ದು ಇನ್ನಾéರೋ ಬೇರೆ. ಹಾಗಾಗಿ ಇದೆಲ್ಲ ಸುಳ್ಳು. ಈ ಕುರಿತು ಪರಮೇಶ್ ಅವರಿಗೆ ಫೋನ್ ಬಂದಿದೆ. ಇಷ್ಟು ದುಡ್ಡು ಕೊಟ್ಟರೆ, ಈ ವಿಡಿಯೋ ಅಪ್‌ಲೋಡ್ ಮಾಡುವುದಿಲ್ಲವೆಂದು ಯಾರೋ ಹೆದರಿಸಿದ್ದಾರೆ. ಅವರು ಅದಕ್ಕೆ ಕೇರ್ ಮಾಡದ ಕಾರಣ, ವಿಡಿಯೋ ಹೊರಬಂದಿದೆ’ ಎಂದು ಅವರು ತಿಳಿಸಿದರು.
ಇದು ಯಾರ ಷಡ್ಯಂತ್ರವೆಂಬ ಸತ್ಯ ಒಂದಲ್ಲ ಒಂದು ದಿನ ಬಂದೇ ಬರುತ್ತದೆ ಎನ್ನುವ ಸುದೀಪ್, “ಶತ್ರು ಎಲ್ಲೋ ಇಲ್ಲ. ಒಳಗೇ ಇದ್ದಾರೆ. ಎಷ್ಟು ಜಾಣ್ಮೆಯಿಂದ ಕೆಲಸ ಮಾಡಿದ್ದಾರೆಂದರೆ, ಎಷ್ಟು ಬೇಕೋ ಅಷ್ಟೇ ಬಿಟ್ಟಿದ್ದಾರೆ. ಆ ಕಾರ್ಯಕ್ರಮದಲ್ಲಿ ಸುಮಾರು ಎರಡು ಸಾವಿರ ಜನ ಕೆಲಸ ಮಾಡುತ್ತಾರೆ. ಕೆಲವರಿಗೆ ಮಾತ್ರ ಒಳಗೆ ಹೋಗುವ ಅವಕಾಶವಿದೆ. ಹಾಗಾಗಿ ಒಳಗಿರುವವರು ಮಾತ್ರ ಈ ಕೆಲಸ ಮಾಡುವುದಕ್ಕೆ ಸಾಧ್ಯ. ಒಂದಲ್ಲ ಒಂದು ದಿನ ಆ ಕೆಲಸ ವಿಡಿಯೋ ಅಪ್‌ಲೋಡ್ ಮಾಡಿ, ಸುಳ್ಳು ಸುದ್ದಿ ಹಬ್ಬಿಸಿದ್ದು ಯಾರು ಎಂದು ಗೊತ್ತಾಗುತ್ತದೆ’ ಎಂದರು. ಈ ಬಾರಿ ಸೆಲೆಬ್ರಿಟಿಗಳ ಜತೆಗೆ ಸಾಮಾನ್ಯ ಮನುಷ್ಯರು ಸಹ ಕಾರ್ಯಕ್ರಮದಲ್ಲಿ ಭಾಗವಹಿಸುವುದರ ಕುರಿತು ಮಾತನಾಡಿದ ಅವರು, “ಬಹಳಷ್ಟು ಜನರಿಗೆ ಒಂದೊಳ್ಳೆಯ ವೇದಿಕೆ ಸಿಗುವುದಿಲ್ಲ. ಆ ನಿಟ್ಟಿನಲ್ಲಿ ಜನ ಸಾಮಾನ್ಯರಿಗೆ ಇದೊಂದು ಒಳ್ಳೆಯ ವೇದಿಕೆಯಾಗಲಿದೆ’ ಎಂದರು. ಶುಕ್ರವಾರ ಆದರೆ ಬಹಳ ಹಿಂಸೆ. ಏಕೆಂದರೆ, ತಮ್ಮ ನೋವನ್ನು ಹೇಳಿಕೊಳ್ಳುವುದಕ್ಕೆ ಸ್ಪರ್ಧಿಗಳು ಕಾಯುತ್ತಿರುತ್ತಾರೆ. ಅವರನ್ನೆಲ್ಲ ಸಮಾಧಾನ ಮಾಡೋದೇ ದೊಡ್ಡ ಕೆಲಸ. ನಿಜ ಹೇಳಬೇಕೆಂದರೆ, ನನ್ನ ಕಪ್ಪು ಕೂದಲು ಬಿಳಿಯಾಗೋಕೆ ಕಾರಣ “ಬಿಗ್ ಬಾಸ್’, ಸಿಸಿಎಲ್ ಮತ್ತು ನಿರ್ದೇಶಕ ಪ್ರೇಮ್’ ಎಂದು ನಗೆ ಚಟಾಕಿ ಹಾರಿಸಿದರು ಸುದೀಪ್.
Related Articles
“ಬಿಗ್ ಬಾಸ್’ ಕಾರ್ಯಕ್ರಮದಿಂದ ಏನು ಕಲಿತಿರಿ ಎಂಬ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, “ಯಾರಿಗೂ ಹೊಡೆಯಬಾರದು, ಸೀಕ್ರೆಟ್ ರೂಂ ಹತ್ತಿರ ಹೋಗಬಾರದು’ ಎಂದು ನಗೆಚಟಾಕಿ ಹಾರಿಸಿದರು. “ನಿಜ ಹೇಳಬೇಕೆಂದರೆ, ಈ ಕಾರ್ಯಕ್ರಮ ನಡೆಸಿಕೊಡುವುದಕ್ಕೆ ಪ್ರಾರಂಭಿಸಿದ ಮೇಲೆ ಸಾಕಷ್ಟು ತಾಳ್ಮೆ ಬಂದಿದೆ. ಅಷ್ಟೇ ಅಲ್ಲ, ನಾನು ಜಗತ್ತನ್ನು ನೋಡುವ ರೀತಿ ಬದಲಾಗಿದೆ. ಇದೆಲ್ಲಕ್ಕಿಂತ ಹೆಚ್ಚಾಗಿ ನಾನೊಬ್ಬ ಒಳ್ಳೆಯ ಕೇಳುಗನಾಗುವುದರ ಜೊತೆಗೆ, ಏನೇನು ಮಾಡಬಾರದು ಎಂದು ಅರಿತುಕೊಂಡಿದ್ದೇನೆ. ಒಟ್ಟಾರೆ ನನ್ನ ದೃಷ್ಟಿಕೋನವೇ ಬದಲಾಗಿದೆ’ ಎಂದು ಹೇಳಿದರು.
Advertisement
ಕಲರ್ಸ್ ಕನ್ನಡ ಹಾಗೂ ಕಲರ್ಸ್ ಸೂಪರ್‌ನ ಬಿಝಿನೆಸ್ ಹೆಡ್ ಹಾಗೂ “ಬಿಗ್ ಬಾಸ್’ ನಿರ್ದೇಶಕ ಪರಮೇಶ್ವರ ಗುಂಡ್ಕಲ್, ಚಾನಲ್‌ನ ನಾನ್-ಫಿಕ್ಷನ್ ಹೆಡ್ ವೈಷ್ಣವಿ, ಎಂಡೆಮಾಲ್ ಶೈನ್ ಇಂಡಿಯಾದ ಸಿಒಒ ಅಭಿಷೇಕ್ ರೇ ಹಾಜರಿದ್ದರು.
ಪ್ರತಿ ಭಾನುವಾರ ಸುದೀಪ್ ಅಡುಗೆಇನ್ನು “ಬಿಗ್ ಬಾಸ್’ನ ಐದನೆಯ ಅವತರಣಿಕೆ ಅಕ್ಟೋಬರ್ 15ರಿಂದ ಕಲರ್ಸ್ ಸೂಪರ್ ಚಾನಲ್‌ನಲ್ಲಿ ಪ್ರಾರಂಭವಾಗಲಿದೆ. 16ರಿಂದ ಪ್ರತಿ ರಾತ್ರಿ 8ರಿಂದ 9ರವರೆಗೂ ಪ್ರಸಾರವಾಗಲಿದೆ. ಈ ಬಾರಿ ಒಟ್ಟು 17 ಸ್ಪರ್ಧಿಗಳಿದ್ದು, ಆ ಪೈಕಿ 11 ಜನ ಸೆಲೆಬ್ರಿಟಿಗಳಿದ್ದರೆ, ಆರು ಸಾಮಾನ್ಯ ಜನರಿರುತ್ತಾರೆ. ಈ ಆರು ಜನಸಾಮಾನ್ಯರನ್ನು ಸುಮಾರು 40 ಸಾವಿರ ಜನರ ಪೈಕಿ ಆಯ್ಕೆ ಮಾಡಲಾಗಿದೆ. ಈ ಬಾರಿಯ ಕಾರ್ಯಕ್ರಮದ ವಿಶೇಷತೆಯೆಂದರೆ, ಸುದೀಪ್ ಪ್ರತಿ ಭಾನುವಾರ ರಾತ್ರಿ ಅಡುಗೆ ಮಾಡಿ ಬಡಿಸುತ್ತಾರೆ.