ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್ ರಿಯಾಲಿಟಿ ಶೋನಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತೆ ಎಂ.ನಾಗಮಣಿ ಎಂಬುವರು ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.
ಬಿಗ್‌ಬಾಸ್ ಶೋನಲ್ಲಿ ಸ್ಪರ್ಧಿಗಳನ್ನು ನರಕವಾಸ ಎಂಬ ಕಾನ್‌ಸ್ಪೆಟ್ ಅಡಿಯಲ್ಲಿ ಕೂಡಿ ಹಾಕಿ ಸರಿಯಾದ ಆಹಾರ ಕೊಡದೆ ಹಿಂಸೆ ನೀಡಲಾಗುತ್ತಿದೆ ಎಂದು ಆರೋಪಿ ದೂರು ನೀಡಲಾಗಿದೆ. ಈ ಸಂಬಂಧ ಮುಂದಿನ ಕ್ರಮಕೈಗೊಳ್ಳಲಾಗುತ್ತದೆ ಎಂದು ಆಯೋಗದ ಮೂಲಗಳು ತಿಳಿಸಿವೆ.
ಈ ಬಾರಿಯ ಬಿಗ್‌ಬಾಸ್ ಕಾರ್ಯಕ್ರಮದ ಆರಂಭದಲ್ಲಿಯೇ ಸ್ವರ್ಗ ಮತ್ತು ನರಕ ಎಂಬ ಎರಡು ಮನೆಗಳನ್ನು ನಿರ್ಮಿಸಲಾಗಿದೆ. 17 ಸ್ಪರ್ಧಿಗಳ ಪೈಕಿ 10 ಮಂದಿಯನ್ನು ಸ್ವರ್ಗಕ್ಕೂ, 7 ಮಂದಿಯನ್ನು ನರಕದಲ್ಲಿ ಇರಿಸಲಾಗಿದೆ. ಸ್ವರ್ಗ ನಿವಾಸಿಗಳಿಗೆ ಉತ್ತಮ ಊಟ, ಮಲಗಲು ಮಂಚ ಸೇರಿ ಉತ್ತಮ ಸೌಲಭ್ಯ ನೀಡಲಾಗಿದೆ. ಆದರೆ, ನರಕ ನಿವಾಸಿಗಳನ್ನು ಜೈಲಿನ ಕೈದಿಗಳ ಹಾಗೆ ಒಂದು ಬ್ಯಾರಕ್‌ನಲ್ಲಿ ಬಂಧಿಸಿಡಲಾಗಿದೆ. ಅವರಿಗೆ ಶೋ ಆರಂಭಗೊಂಡ ದಿನದಿಂದ ಕೇವಲ ಗಂಜಿ ಊಟ ನೀಡಲಾಗುತ್ತಿದೆ. ಅಷ್ಟೇ ಅಲ್ಲ, ಅವರಿಗೆ ಪ್ರತ್ಯೇಕ ಶೌಚಾಲಯದ ಅವಕಾಶವೂ ಇಲ್ಲ. ಸ್ವರ್ಗ ನಿವಾಸಿಗಳನ್ನು ವಿನಂತಿಸಿ ಅವರು ಬೀಗ ತೆಗೆದರಷ್ಟೇ ಅವರು ಶೌಚಾಲಯಕ್ಕೆ ಹೋಗಲು ಸಾಧ್ಯ ಎಂದು ನಾಗಮಣಿ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.
ಹಣದ ಆಮಿಷವೊಡ್ಡಿ ಸ್ಪರ್ಧಿಗಳನ್ನು ಬಿಗ್‌ಬಾಸ್ ಮನೆಯಲ್ಲಿ ಕೂಡಿ ಹಾಕಲಾಗಿದೆ. ಟಾಸ್ಕ್ಗಳ ಹೆಸರಲ್ಲಿ ಅವರಿಗೆ ದೈಹಿಕ, ಮಾನಸಿಕ ಹಿಂಸೆ ನೀಡಲಾಗುತ್ತಿದೆ. ಈ ವಿಚಾರವನ್ನು ಹೊರಗಡೆ ಬಾಯಿಬಿಡದಂತೆ ಸ್ಪರ್ಧಿಗ ಳಿಂದ ಸಹಿ ಪಡೆಯಲಾಗಿದೆ. ಅದರಿಂದ ಬಿಗ್‌ಬಾಸ್ ಕಾರ್ಯಕ್ರಮದಲ್ಲಿ ಸ್ಪರ್ಧಿಗಳನ್ನು ಅಕ್ರಮವಾಗಿ ಬಂಧಿ ಸಿಟ್ಟು, ಅವರಿಗೆ ಸರಿಯಾದ ಪೌಷ್ಟಿಕ ಆಹಾರ ಹಾಗೂ ಮೂಲಭೂತ ಸೌಲಭ್ಯಗಳನ್ನು ನೀಡದಿರುವುದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಹೀಗಾಗಿ ಈ ಕಾರ್ಯಕ್ರಮ ಸ್ಥಗಿತಗೊಳಿಸಿ, ಸ್ಪರ್ಧಿಗಳನ್ನು ಹೊರಗೆ ಕರೆತರಬೇಕು ಎಂದು ದೂರಿನಲ್ಲಿ ಉಲ್ಲೇಖೀಸಿದ್ದಾರೆ.