ಕನ್ನಡ ಚಿತ್ರರಂಗದಲ್ಲಿ ಮತ್ತೂಂದು ಗಲಾಟೆ ಜೋರಾಗಿ ಕೇಳಿಬರುತ್ತಿದೆ. ಅದು “ರಾಜು ಕನ್ನಡ ಮೀಡಿಯಂ’ ಚಿತ್ರದ್ದು. ನಿರ್ಮಾಪಕ ಹಾಗೂ ಆ ಚಿತ್ರದ ನಾಯಕಿಯ ನಡುವಿನ ಜಗಳ ಈಗ ಕೋರ್ಟ್ ಮೆಟ್ಟಿಲೇರಿದೆ. “ರಾಜು ಕನ್ನಡ ಮೀಡಿಯಂ’ ಚಿತ್ರವನ್ನು ನಿರ್ಮಾಪಕ ಕೆ.ಎ.ಸುರೇಶ್ ನಿರ್ಮಿಸುತ್ತಿದ್ದು, ಈ ಚಿತ್ರದಲ್ಲಿ ಅವಂತಿಕಾ ಶೆಟ್ಟಿ ನಾಯಕಿಯಾಗಿ ಆಯ್ಕೆಯಾಗಿದ್ದರು. ಆರಂಭದಲ್ಲಿ ಎಲ್ಲವೂ ಸಾಂಗವಾಗಿ ನಡೆಯುತ್ತಿತ್ತು.
ಆದರೆ, ಬರಬರುತ್ತಾ ಚಿತ್ರತಂಡ ಹಾಗೂ ಅವಂತಿಕಾ ನಡುವೆ ವೈ ಮನಸ್ಸು ಉಂಟಾಗಿದೆ. ಚಿತ್ರತಂಡ ಅವರನ್ನು ಕೈ ಬಿಟ್ಟು ಚಿತ್ರೀಕರಣ ಮಾಡಿದೆ. ಇದರಿಂದ ಸಿಟ್ಟಾದ ಅವಂತಿಕಾ ಚಿತ್ರತಂಡ ತನ್ನನ್ನು ಸರಿಯಾಗಿ ನಡೆಸಿಕೊಂಡಿಲ್ಲ, ನನಗೆ ಆ ಸೆಟ್‌ನಲ್ಲಿ ಕಂಫರ್ಟ್ ಇರಲಿಲ್ಲ ಎಂದು ದೂರುವ ಜೊತೆಗೆ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಈ ನಡುವೆಯೇ ನಿರ್ಮಾಪಕ ಸುರೇಶ್ ವಿರುದ್ಧ ಅವಂತಿಕಾ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆಂದು ಹೇಳಲಾಗಿತ್ತು.
ಈ ವಿವಾದದ ಬಗ್ಗೆ ಮಾತನಾಡುವ ನಿರ್ಮಾಪಕ ಸುರೇಶ್, “ನಾವು ಅವರನ್ನು ಸಿನಿಮಾದಿಂದ ಕೈ ಬಿಟ್ಟಿದ್ದು ನಿಜ. ಅದಕ್ಕೆ ಕಾರಣ ಅವರು ಸರಿಯಾಗಿ ಚಿತ್ರೀಕರಣಕ್ಕೆ ಬಾರದಿರುವುದು. 40 ದಿನ ಡೇಟ್ಸ್ ಕೊಟ್ಟು ಕೇವಲ 15 ದಿನ ಚಿತ್ರೀಕರಣಕ್ಕೆ ಬಂದಿದ್ದಾರೆ. ಸೆಟ್‌ಗೂ ಸರಿಯಾದ ಸಮಯಕ್ಕೆ ಬರುತ್ತಿರಲಿಲ್ಲ. ಪಾತ್ರಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿರಲಿಲ್ಲ. ಈ ಬಗ್ಗೆ ನನಗೆ ನಿರ್ದೇಶಕರು ಹೇಳುತ್ತಿದ್ದರು.
ಒಂದು ಶಾಟ್ ಮುಗಿದ ಕೂಡಲೇ ಕ್ಯಾರ್‌ವಾನ್‌ಗೆ ಹೋಗುತ್ತಿದ್ದರು. ಮತ್ತೆ ಅದರಿಂದ ಹೊರಬರುವವರೆಗೆ ನಾವು ಕಾಯಬೇಕಿತ್ತು. ಈ ಕಾರಣದಿಂದ ಹಲವು ಬಾರಿ ತಿದ್ದಿಕೊಂಡು ಸರಿಯಾಗಿ ಚಿತ್ರೀಕರಣಕ್ಕೆ ಬರುವಂತೆ ಕೇಳಿಕೊಂಡೆವು. ಆದರೂ ಅವಂತಿಕಾ ಬರಲಿಲ್ಲ. ಹಾಗಾಗಿ. ಅವರನ್ನು ಚಿತ್ರದಿಂದ ಕೈ ಬಿಟ್ಟೆವು. ಇನ್ನು, ಅವರು ನಾನು ಕೊಟ್ಟ ಚೆಕ್ ಬೌನ್ಸ್ ಆಗಿದೆ ಎಂದಿದ್ದಾರೆ. ಅದು ಬೌನ್ಸ್ ಅಲ್ಲ, ಸ್ಟಾಪ್ ಪೇಮೆಂಟ್ ಮಾಡಿಸಿದ್ದು.
ಅವರು ಚಿತ್ರೀಕರಣಕ್ಕೆ ಬರಲಿಲ್ಲ ಎಂಬ ಕಾರಣಕ್ಕೆ ಪೇಮೆಂಟ್ ನಿಲ್ಲಿಸಿದ್ದೆ ಅಷ್ಟೆ. ಇನ್ನು, ಲೈಂಗಿಕ ಕಿರುಕುಳ ಆಗಿಲ್ಲ ಮತ್ತು ನಾನು ಹಾಗೆ ಹೇಳಿಯೇ ಇಲ್ಲ ಎಂದು ಸ್ವತಃ ಅವಂತಿಕಾ ಮಾಧ್ಯಮಗಳಲ್ಲಿ ಹೇಳಿದ್ದಾರೆ. ಸದ್ಯ ಪ್ರಕರಣ ನ್ಯಾಯಾಲಯದಲ್ಲಿದೆ. ಅಲ್ಲಿನ ತೀರ್ಮಾನಕ್ಕೆ ನಾನು ಬದ್ಧ’ ಎಂಬುದು ನಿರ್ಮಾಪಕ ಸುರೇಶ್ ಮಾತು. ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಅವಂತಿಕಾ ಶೆಟ್ಟಿಯನ್ನು ಸಂಪರ್ಕಿಸಿದರೆ ಅವರು ನಾಟ್ ರೀಚಬಲ್.