Advertisement

ದೊಡ್ಡ ಗೆಲುವು: ಬೆಂಗಾಲ್‌ಗೆ ಅಚ್ಚರಿ !

12:10 PM Aug 08, 2017 | |

ನಾಗ್ಪುರ: ಪ್ರೊ ಕಬಡ್ಡಿಯಲ್ಲಿ ರವಿವಾರ ಇತ್ತಂಡ ಗಳಿಗೂ ಭಾರೀ ಅಂತರದ ಗೆಲುವಿನ ಸಂಭ್ರಮ. ಸೋಮವಾರ ವಿರಾಮ. ಮಂಗಳವಾರ ಮತ್ತೆ “ಆತಿಥೇಯ’ ಬೆಂಗಳೂರು ಬುಲ್ಸ್‌ಗೆ ಆಗ್ನಿಪರೀಕ್ಷೆ. ಹೀಗೆ ಕಾಲೆಳೆ ಯುವ ಆಟ ನಿಧಾನವಾಗಿ ತನ್ನ ಕಾವನ್ನು ಏರಿಸಿಕೊಳ್ಳುತ್ತ ಹೋಗುತ್ತಿದೆ. ಅಭಿಮಾನಿಗಳೂ ಫ‌ುಲ್‌ ಖುಷ್‌ ಆಗಿದ್ದಾರೆ. 

Advertisement

“ಮಂಕಾಪುರ ಒಳಾಂಗಣ ಸ್ಟೇಡಿಯಂ’ನಲ್ಲಿ ರವಿವಾರದ ಆಟ 2 ಬೃಹತ್‌ ಅಂಕಗಳ ರಾಶಿಗೆ ಕಾರಣವಾಯಿತು. ಮೊದಲಿಗೆ ಬೆಂಗಾಲ್‌ ವಾರಿಯರ್ ತಂಡ ಯುಪಿ ಯೋಧಾಸ್‌ ವಿರುದ್ಧ 40 ಅಂಕ ಕಲೆಹಾಕಿತು. ಅತ್ಯಂತ ಕಳಪೆ ಪ್ರದರ್ಶನ ನೀಡಿದ ಯೋಧಾಸ್‌ಗೆ ಗಳಿಸಲು ಸಾಧ್ಯವಾದದ್ದು 20 ಅಂಕ ಮಾತ್ರ. ಹೀಗೆ ಬೆಂಗಾಲ್‌ 20 ಅಂಕಗಳ ಅಂತರದ ಭರ್ಜರಿ ಜಯ ಸಾಧಿಸಿತು. ಬಳಿಕ “ಡುಬ್ಕಿ ಕಿಂಗ್‌’ ಪ್ರದೀಪ್‌ ನರ್ವಾಲ್‌ ಅವರ ಪಾಟ್ನಾ ಪೈರೇಟ್ಸ್‌ ತಂಡ ಬೆಂಗಳೂರು ಬುಲ್ಸ್‌ ವಿರುದ್ಧ 46 ಅಂಕ ರಾಶಿ ಹಾಕಿತು. ಬುಲ್ಸ್‌ 32 ಅಂಕಗಳ ತನಕ ಬಂದು ಶರಣಾಯಿತು. 

ದೊಡ್ಡ  ಗೆಲುವು ನಿರೀಕ್ಷಿಸಿರಲಿಲ್ಲ !
ಬೆಂಗಾಲ್‌ ವಾರಿಯರ್ನ ಈ ಭಾರೀ ಅಂತರದ ಗೆಲುವು ಸ್ವತಃ ನಾಯಕ ಸುರ್ಜೀತ್‌ ಸಿಂಗ್‌ಗೆ ಅಚ್ಚರಿ ತಂದಿದೆ.  “ನಾವು ಖಂಡಿತ ಗೆಲ್ಲುತ್ತೇವೆ ಎಂಬ ಆತ್ಮವಿಶ್ವಾಸ ಇತ್ತು, ಆದರೆ ಇಷ್ಟೊಂದು ದೊಡ್ಡ ಅಂತರದಿಂದಲ್ಲ. ನಮ್ಮ  ರೈಡರ್‌ಗಳಿಗೆ ಆರಂಭದಲ್ಲೇ ಹೆಚ್ಚಿನ ಸ್ವಾತಂತ್ರ್ಯ ನೀಡಿ ಹೆಚ್ಚೆಚ್ಚು ಅಂಕಗಳನ್ನು ಕಲೆಹಾಕುವುದು ನಮ್ಮ ಯೋಜನೆ ಯಾಗಿತ್ತು. ಇದರಲ್ಲಿ ನಾವು ಯಶಸ್ವಿಯಾದೆವು’ ಎಂದು ಸುರ್ಜೀತ್‌ ಹೇಳಿದರು. ಯುಪಿ ತಂಡ ಮೊದಲೆರಡು ಪಂದ್ಯಗಳಲ್ಲಿ ಅಮೋಘ ಆಟವಾಡಿ ಗೆಲುವು ಸಾಧಿಸಿತ್ತು. ಆದರೆ ಬೆಂಗಾಲ್‌ ವಿರುದ್ಧ ಸ್ಟಾರ್‌ ರೈಡರ್‌ ರಿಷಾಂಕ್‌ ದೇವಾಡಿಗ ಅವರ ಗೈರು ತಂಡವನ್ನು ಕಾಡಿತು. ಶನಿವಾರ ಬೆಂಗಳೂರು ಬುಲ್ಸ್‌ ವಿರುದ್ಧ ಆಡುತ್ತಿದ್ದಾಗ ಗಾಯಾಳಾಗಿದ್ದ ರಿಷಾಂಕ್‌, ಬೆಂಗಾಲ್‌ ವಿರುದ್ಧ ಕಣಕ್ಕಿಳಿದಿರಲಿಲ್ಲ. ನಾಯಕ ನಿತಿನ್‌ ತೋಮರ್‌ ಕೂಡ ಪೂರ್ತಿ ಫಿಟ್‌ನೆಸ್‌ ಹೊಂದಿರಲಿಲ್ಲ. ಹೀಗಾಗಿ ಪಂದ್ಯದ ಬಹುಪಾಲು ಅವಧಿಯನ್ನು ವೀಕ್ಷಕ ನಾಗಿಯೇ ಕಳೆಯಬೇಕಾಯಿತು. ಇದು ತಂಡದ ಕೋಚ್‌ ಜೆ. ಉದಯ ಕುಮಾರ್‌ ಅವರಿಗೆ ಆಘಾತ ತಂದಿದೆ.

“ನಾವು ಸ್ಟಾರ್‌ ರೈಡರ್‌ ರಿಷಾಂಕ್‌ ಮತ್ತು ನಿತಿನ್‌ ಸೇವೆಯಿಂದ ವಂಚಿತರಾದೆವು. ಇದು ತಂಡಕ್ಕೆ ಬಂದೆರಗಿದ ದೊಡ್ಡ ಆಘಾತ. ಆದರೆ ಅವರಿಲ್ಲದೆಯೂ ನಾವು ಇಷ್ಟೊಂದು ದೊಡ್ಡ ಅಂತರದಿಂದ ಸೋಲುತ್ತೇವೆಂದು ಭಾವಿಸಿರಲಿಲ್ಲ. ಇದು ನಮಗೊಂದು ಪಾಠ, ಜತೆಗೆ ಎಚ್ಚರಿಕೆಯೂ ಆಗಿದೆ…’ ಎಂದಿದ್ದಾರೆ ಉದಯ್‌ ಕುಮಾರ್‌. “ಇದೊಂದು ಸುದೀರ್ಘ‌ ಪಂದ್ಯಾವಳಿ. ಗಾಯಾಳು ಆಟಗಾರನನ್ನು ಆಡಿಸುವ ರಿಸ್ಕ್ ತೆಗೆದುಕೊಳ್ಳುವುದಕ್ಕಿಂತ ಅವರಿಗೆ ವಿಶ್ರಾಂತಿ ನೀಡುವುದೇ ಕ್ಷೇಮ. ಮುಂದಿನ ತವರಿನ ಪಂದ್ಯಗಳ ವೇಳೆ ಇದರಿಂದ ಲಾಭವಾಗಲಿದೆ…’ ಎಂಬ ಅಭಿಪ್ರಾಯವನ್ನೂ ಅವರು ವ್ಯಕ್ತಪಡಿಸಿದರು.

ಎಚ್ಚರಿಕೆಯ ಹೆಜ್ಜೆ: ಪಾಟ್ನಾ ಕೋಚ್‌
ದ್ವಿತೀಯ ಪಂದ್ಯದಲ್ಲಿ ಬೆಂಗಳೂರು ಬುಲ್ಸ್‌ನ ತೀವ್ರ ಪೈಪೋಟಿಯ ಹೊರತಾಗಿಯೂ ಪಾಟ್ನಾ ಪೈರೇಟ್ಸ್‌ 40 ಪ್ಲಸ್‌ ಅಂಕಗಳನ್ನು ಸಂಪಾದಿಸಿತು. ಆದರೂ ಇದು ಸುದೀರ್ಘ‌ ಪಂದ್ಯಾವಳಿಯಾದ್ದರಿಂದ ಮುಂದಿನ ಹೆಜ್ಜೆಗಳನ್ನು ಬಹಳ ಎಚ್ಚರಿಕೆಯಿಂದಲೇ ಇಡಬೇಕಾಗಿದೆ ಎಂಬುದು ಪಾಟ್ನಾ ತಂಡದ ಕೋಚ್‌ ರಾಮ್‌ ಮೆಹರ್‌ ಸಿಂಗ್‌ ಅಭಿಪ್ರಾಯ.

Advertisement

“ನನ್ನ ಪ್ರಕಾರ ಎರಡೂ ತಂಡಗಳು ತಮ್ಮ ಯೋಜನೆಯನ್ನು ಬಹುತೇಕ ಕಾರ್ಯರೂಪಕ್ಕೆ ಇಳಿಸಿವೆ. ಆದರೆ ಇದಿನ್ನೂ ಕೂಟದ ಆರಂಭ ಮಾತ್ರ. ಗೆಲುವು-ಸೋಲಿನ ಬಗ್ಗೆ ಯಾವುದೇ ವಿಶ್ಲೇಷಣೆ ಮಾಡುವುದು ಸರಿ ಎನಿಸದು. ಆದರೆ ನಮ್ಮ ಬಳಿಕ ಅಮೋಘ ಸಾಮರ್ಥ್ಯದ ಆಟಗಾರರ ದೊಡ್ಡ ದಂಡೇ ಇದೆ. ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ…’ ಎಂದು ರಾಮ್‌ ಮೆಹರ್‌ ಸಿಂಗ್‌ ಹೇಳಿದರು.

ರಕ್ಷಣಾ ವಿಭಾಗ ದುರ್ಬಲ
ಮೊದಲೆರಡು ಪಂದ್ಯಗಳನ್ನು ಗೆದ್ದ ಬೆಂಗಳೂರು ಬುಲ್ಸ್‌ “ತವರಿನ ಅಂಗಣ’ದಲ್ಲಿ ಸತತ 2 ಸೋಲನುಭವಿಸಿ ಆಘಾತಕ್ಕೊಳಗಾಗಿದೆ. ತಂಡದ ರಕ್ಷಣಾ ವಿಭಾಗವನ್ನು ಕೂಡಲೇ ಬಲಿಷ್ಠಗೊಳಿಸಬೇಕಾದ ಅಗತ್ಯವಿದೆ ಎಂಬುದು ಕೋಚ್‌ ರಣಧೀರ್‌ ಸಿಂಗ್‌ ಅವರ ಅಭಿಪ್ರಾಯ.

“ಮೊದಲೆರಡು ಪಂದ್ಯಗಳಲ್ಲಿ ನಮ್ಮ ಆಟಗಾರರ ನಿರ್ವಹಣೆ ಉತ್ತಮ ಮಟ್ಟದಲ್ಲಿತ್ತು. ಆದರೆ ಪರಾಜಿತ 2 ಪಂದ್ಯಗಳಲ್ಲಿ ತಂಡದ ರಕ್ಷಣಾ ವಿಭಾಗದ ದೌರ್ಬಲ್ಯ ಎದ್ದು ಕಂಡಿದೆ. ಇಲ್ಲಿ ಎಷ್ಟು ಸಾಧ್ಯವೋ ಅಷ್ಟು ಬೇಗ ಸುಧಾರಣೆ ಆಗಲೇಬೇಕಿದೆ. ವಿಶ್ರಾಂತಿ ದಿನದಂದು ಇದಕ್ಕೊಂದು ಪರಿಹಾರ ಕಂಡುಹುಡುಕಿ ಮಂಗಳವಾರ ಟೈಟಾನ್ಸ್‌ ವಿರುದ್ಧ ಉತ್ತಮ ಪ್ರದರ್ಶನ ನೀಡುವುದು ನಮ್ಮ ಯೋಜನೆ…’ ಎಂದು ಕೋಚ್‌ ಸಿಂಗ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next